ಈಡಿ ದಾಳಿ ರಾಜಕೀಯ ಪ್ರೇರಿತ; ಐವನ್ ಡಿಸೋಜಾ

ಉಡುಪಿ: ಜಾರಿ ನಿರ್ದೇಶನಾಲಯ (ಈಡಿ) ತಮ್ಮ ಇತಿಮಿತಿಗಳನ್ನು ಮೀರಿ ದಾಳಿ ನಡೆಸುತ್ತಿದೆ. ಈಡಿ ಅಧಿಕಾರಿಗಳಲ್ಲಿ ಅತ್ಯುತ್ಸಾಹ ಕಾಣುತ್ತಿದೆ. ಆದರೆ ಇದು ದ್ವೇಷದ ಕ್ರಮ ಹಾಗೂ ರಾಜಕೀಯ ಪ್ರೇರಿತ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದ ಕುರಿತು ನ್ಯಾಯಾಲಯದ ಆದೇಶದಂತೆ ಈಗಾಗಲೇ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಹಾಗಾದರೆ ಈಡಿಗೆ ಅಲ್ಲಿ ಏನು ಕೆಲಸ? ಎಂದು ಪ್ರಶ್ನಿಸಿದ ಅವರು, ಈಡಿ ತಮ್ಮ ಕಾನೂನು ಪರಿಮಿತಿಯನ್ನು ಮೀರಿ ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ರಾಜ್ಯ ಸರಕಾರದ ಹೆಸರು ಕೆಡಿಸಲು ಬಿಜೆಪಿಯ ಪ್ರೇರಣೆಯಿಂದ ಅದು ಈ ರೀತಿ ಮಾಡುತ್ತಿದೆ ಎಂದು ಟೀಕಿಸಿದರು.

ಮೂಡಾ ಹಗರಣದ ಫೈಲ್‌ಗಳನ್ನು ಬೈರತಿ ಸುರೇಶ್ ಸುಟ್ಟಿದ್ದಾರೆ ಎಂಬ ಶೋಭಾ ಕರಂದ್ಲಾಜೆ ಅವರ ಆರೋಪದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕುಣಿಯಲು ಬಾರದವರು ಅಂಗಳ ಸರಿಯಿಲ್ಲ ಎಂದಂತೆ. ಶೋಭಾ ಕರಂದ್ಲಾಜೆಗೆ ಮಾಹಿತಿಯ ಕೊರತೆ ಇದೆ. ನೀವು ಯಾಕೆ ಹಿಟ್ ಅಂಡ್ ರನ್ ಮಾಡುತ್ತೀರಿ. ಎಲ್ಲಾ ವಿಚಾರಗಳಿಗೂ ನಮ್ಮಲ್ಲಿ ದಾಖಲೆಗಳು ಇವೆ. ಮೂರು- ನಾಲ್ಕು ಏಜೆನ್ಸಿಗಳಲ್ಲಿ ಈ ಎಲ್ಲ ವಿಚಾರ ಚರ್ಚೆ ಆಗಿದೆ. ದಾಖಲೆ ಸಾಗಿಸಿದ್ದಾರೆ ಅನ್ನೋದೇ ಸುಳ್ಳು. ಯಾವುದಾದರೂ ಒಂದು ಸಾಕ್ಷಿ ತೋರಿಸಲಿ ಎಂದು ಭೈರತಿ ಹೇಳಿದ್ದಾರೆ. ನಾನು ಪ್ರಮಾಣ ಮಾಡಲು ತಯಾರಿದ್ದೇನೆ ಎಂದೂ ಭೈರತಿ ಹೇಳಿದ್ದಾರೆ. ತಾಕತ್ತಿದ್ದರೆ ಶೋಭಾ ಆ ಸವಾಲಿಗೆ ಉತ್ತರಿಸಲಿ ಎಂದು ಐವನ್ ಸವಾಲು ಹಾಕಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಸಹೋದನ ಟಿಕೆಟ್ ಅಕ್ರಮದ ಕುರಿತು ಮಾತನಾಡಿದ ಅವರು, ಇದರ ಬಗ್ಗೆ ತನಿಖೆ ಆಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ನನಗೆ ಸಹೋದರ ಗೊತ್ತೇ ಇಲ್ಲ 30 ವರ್ಷದಿಂದ ಪರಿಚಯ ಇಲ್ಲ ಎಂದು ಜೋಶಿ ಹೇಳಿದ್ದಾರೆ. ಬಿಜೆಪಿಯವರ ಈ ಎಲ್ಲ ವಿಚಾರ ನಮಗೆ ಈಗ ಗೊತ್ತಾಗಿದೆ. ಸಹೋದರ ಸಹೋದರಿಯರನ್ನು 30 ವರ್ಷ ನೋಡುವುದಿಲ್ಲ ಎಂದು ಈಗ ಗೊತ್ತಾಗಿದ್ದು. ಈ ಬಗ್ಗೆ ಶೋಭಾ ಕೆರಂದ್ಲಾಜೆ ತನಿಖೆ ನಡೆಸಲಿ. ಉತ್ತರ ಕೊಡಲಿ ಎಂದರು.