ಉಡುಪಿ: ತಾ 15.08.2024ರಂದು ಮಧ್ಯಾಹ್ನ ಇಂಚರ ಸರ್ಜಿಕಲ್ ಕ್ಲಿನಿಕ್ ಉಡುಪಿಯ ಇಂದಿರ ಚಂದಿರ ಸಭಾಭವನ ದಲ್ಲಿ ಸ್ವಾತಂತ್ರ್ಯೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯ ಬಹುಮಾನ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಕಿಟ್ ನೀಡುವ ಕಾರ್ಯಕ್ರಮವು ಜರಗಿತು.
ಪೂರ್ವಭಾವಿಯಾಗಿ ವಾರದ ಹಿಂದೆ 9, 10, 11, 12ನೇ ತರಗತಿಯ ಹಾಗೂ ತತ್ಸಮಾನ ಇತರ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ “ಭಾರತಕ್ಕೆ ಸ್ವಾತಂತ್ರ್ಯ ದೊರಕುವಲ್ಲಿ ಭಗತ್ ಸಿಂಗ್ ಹಾಗೂ ಚಂದ್ರಶೇಖರ್ ಆಜಾದ್ ಇತ್ಯಾದಿ ಕ್ರಾಂತಿವೀರರ ಪಾತ್ರ” ಎಂಬ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಈ ಪ್ರಬಂಧ ಸ್ಪರ್ಧೆಯಲ್ಲಿ ಕುಮಾರಿ ರಮ್ಯಾ ಪ್ರಥಮ ಸ್ಥಾನವನ್ನು , ಕುಮಾರಿ ಭಾಗ್ಯಶ್ರೀ ದ್ವಿತೀಯ ಸ್ಥಾನವನ್ನು, ಹಾಗೂ ಸೃಜನ್ ಬಿಎಸ್ ಇವರು ತೃತೀಯ ಸ್ಥಾನವನ್ನು ಪಡೆದಿದ್ದರು.ಈ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಕಿಟ್ಟನ್ನು ಈ ಸಮಾರಂಭದಲ್ಲಿ ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಡುಪಿ ಸಾಸ್ತಾನದ ಖ್ಯಾತ ತಜ್ಞ ವೈದ್ಯರಾದ ಡಾ. ಹೇಮಂತ್ ಕುಮಾರ್ ಇವರು ಆಗಮಿಸಿದ್ದರು.ಇಂಚರ ಸರ್ಜಿಕಲ್ ಕ್ಲಿನಿಕ್ ನ ನಿರ್ದೇಶಕರಾದ ಹಾಗೂ ಶ್ರೀ ಎಲ್ಲೂರು ಲಕ್ಷ್ಮೀನಾರಾಯಣರಾವ್ ಜ್ಯೋತಿಷ್ಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ಸಂಚಾಲಕರಾದ ಡಾ. ವೈ ಸುದರ್ಶನ್ ರಾವ್ ಇವರು ಅತಿಥಿಗಳನ್ನು ಹಾಗೂ ವಿದ್ಯಾರ್ಥಿಗಳನ್ನು ಹಾಗೂ ಅವರ ಪೋಷಕರು ಮತ್ತು ಶಿಕ್ಷಕರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾದ ಡಾ ಹೇಮಂತ್ ಕುಮಾರ್ ಇವರು ಬಹುಮಾನಗಳನ್ನು ವಿತರಿಸಿ ಕ್ರಾಂತಿಕಾರಿಗಳು ತಮ್ಮ ಜೀವ ಹಾಗೂ ಜೀವನ ಎರಡನ್ನು ಈ ದೇಶಕ್ಕೆ ಬಲಿದಾನ ಮಾಡಿದವರು. ಅವರ ತ್ಯಾಗವು ಇತರ ಯಾವುದೇ ತ್ಯಾಗಕ್ಕೆ ಹೋಲಿಸಲಾಗದಷ್ಟು ಮಿಗಿಲಾಗಿದೆ. ಅಂತಹ ನಿಸ್ವಾರ್ಥ ಸೇವೆಯಿಂದ ನಮಗೆ ಸ್ವಾತಂತ್ರ್ಯ ದೊರಕಿರುವುದನ್ನು ನಾವೆಲ್ಲರು ಅರ್ಥೈಸಿಕೊಂಡು ಈ ದೇಶವನ್ನು ಕಟ್ಟಲು ಹಾಗೂ ಮುನ್ನಡೆಸಲು ಕಟಿಬದ್ಧರಾಗಬೇಕು ಎಂದು ನುಡಿದರು.
ಟ್ರಸ್ಟ್ ನ ವಿಶ್ವಸ್ಥರಾದ ಶ್ರೀವೈ ಭುವನೇಂದ್ರರಾವ್ ಇವರು ಮಾತನಾಡಿ ವಿದ್ಯಾರ್ಥಿಗಳು ಸಮರ್ಪಣಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ನುಡಿದರು. ಬ್ರಹ್ಮಾವರದ ಎಸ್ಎಂಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ| ವೈ ರವೀಂದ್ರನಾಥ ರಾವ್ ಉಪಸ್ಥಿತರಿದ್ದರು.
21 ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ನೀರಿನ ಸ್ಟೀಲ್ ಬಾಟಲ್ ಸಹಿತ ನೋಟ್ ಬುಕ್ ಪೆನ್ನುಗಳಿರುವ ಶಾಲಾ ಕಿಟ್ಟನ್ನು ವಿತರಿಸಲಾಯಿತು. ಡಾ. ವಿದ್ಯಾ ಎಸ್ ರಾವ್ ಧನ್ಯವಾದವಿತ್ತರು. ಕುಮಾರಿ ನಿಖಿತ ಕಾರ್ಯಕ್ರಮವನ್ನು ನಿರೂಪಿಸಿದ್ದರು