ಅವಕಾಶಗಳನ್ನು ಬಳಸಿಕೊಂಡರೆ ಮಾತ್ರ ಉತ್ತಮ ಜೀವನ ಸಾಧ್ಯ: ಯಶ್‌ಪಾಲ್ ಸುವರ್ಣ

ಉಡುಪಿ: ಇಂದು ವಿದ್ಯಾರ್ಥಿನಿಯರಿಗೆ ಶಿಕ್ಷಣ, ಸಾಂಸ್ಕೃತಿಕ, ಕ್ರೀಡಾ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅವಕಾಶಗಳು ಇದ್ದು, ಅದನ್ನು ಬಳಸಿಕೊಂಡು ಉತ್ತಮ ಜೀವನವನ್ನು ನಡೆಸಲು ವಿದ್ಯಾರ್ಥಿಗಳಲ್ಲಿ ಆಸಕ್ತಿ, ಆತ್ಮವಿಶ್ವಾಸ ಮತ್ತು ನಂಬಿಕೆಯನ್ನು ಇಟ್ಟುಕೊಂಡು ಮಾಡುವ ಯಾವುದೇ ಕೆಲಸವನ್ನು ಶೃದ್ಧೆಯಿಂದ ಮಾಡಿದರೆ ಉತ್ತಮ ಫಲಿತಾಂಶ ಖಂಡಿತ ತಮ್ಮ ನಿರೀಕ್ಷೆಯಂತೆ ಇರುತ್ತದೆ ಎಂದು ಉಡುಪಿಯ ಮಾನ್ಯ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಯಶ್‌ಪಾಲ್ ಸುವರ್ಣ ಇವರು ಅಭಿಪ್ರಾಯಪಟ್ಟರು.

ಇವರು ನಗರದ ಆರೂರು ಲಕ್ಷ್ಮೀನಾರಾಯಣ ರಾವ್ ಸ್ಮಾರಕ ಪುರಭವನ ಅಜ್ಜರಕಾಡು ಇಲ್ಲಿ ಆಯೋಜಿಸಲಾದ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ವಿದ್ಯಾರ್ಥಿ ವೇದಿಕೆ, ಕರ್ನಾಟಕ ಸುವರ್ಣ ಸಂಭ್ರಮ ಆಚರಣೆ ಮತ್ತು ಪ್ರತಿಭಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಇವರು ಮಾತನಾಡಿದರು.

ಸಂಸ್ಕೃತಿ, ನಡೆ, ನುಡಿ ಮತ್ತು ಆಚರಣೆಗಳಲ್ಲಿ ವಿವಿಧತೆಯನ್ನು ಹೊಂದಿರುವ ಕರ್ನಾಟಕ ರಾಜ್ಯದಲ್ಲಿ ಇಂದು ಕನ್ನಡ ಭಾಷೆಯನ್ನು ಎಲ್ಲರೂ ಒಟ್ಟಾಗಿ ಉಳಿಸಿ ಬೆಳೆಸುವಂತಾಗಬೇಕು ಎಂದರು. ಪ್ರೊ. ಬಿ. ಶಿವರಾಮ ಶೆಟ್ಟಿ, ನಿವೃತ್ತ ಪ್ರಾಧ್ಯಾಪಕರು ಮತ್ತು ವಿಭಾಗ ಮುಖ್ಯಸ್ಥರು ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಕಾಲೇಜು ಜೀವನದಲ್ಲಿ ಸಿಗುವ ಅವಕಾಶಗಳು ವಿದ್ಯಾರ್ಥಿಗಳಿಗೆ ತಮ್ಮ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕನ್ನು ಉತ್ತಮಪಡಿಸಲು ಸಹಾಯವಾಗುತ್ತದೆ. ಪದವಿ ಅಂಕಗಳು ಕೇವಲ ಉದ್ಯೋಗವನ್ನು ಹೊಂದಲು ಸಹಕಾರಿಯಾದರೆ ಸಾಂಸ್ಕೃತಿಕ ವೇದಿಕೆಗಳು ವಿದ್ಯಾರ್ಥಿಗಳಿಗೆ ಸಮಯಪಾಲನೆ, ನಾಯಕತ್ವ, ಸಹನೆ, ಸಹಬಾಳ್ವೆ ಮತ್ತು ಸಾಮಾಜಿಕ ಹೊಂದಾಣಿಕೆಯoತಹ ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತದೆ ಎಂದರು.

ನಾಡೋಜ ಡಾ. ಜಿ ಶಂಕರ್ ಕಾಲೇಜಿನ ಮಹಾಪೋಷಕರು, ಪ್ರವರ್ತಕರು ಡಾ. ಜಿ ಶಂಕರ್ ಪ್ಯಾಮಿಲಿ ಟ್ರಸ್ಟ್ ಉಡುಪಿ ಇವರ ಸುಪುತ್ರಿ ಶ್ರೀಮತಿ ಶ್ಯಾಮಿಲಿ ನವೀನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ವಿದ್ಯಾರ್ಥಿನಿಯರಿಗೆ ಶುಭಹಾರೈಸಿದರು. ಶ್ರೀಮತಿ ಪ್ರತಿಮಾ ನಾಯಕ್ ಖ್ಯಾತ ಚಲನಚಿತ್ರ ಹಾಗೂ ಕಿರುತೆರೆ ನಟಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಮಹಿಳೆಯರು ಇಂದು ಮಗಳಾಗಿ, ಸಹೋದರಿಯಾಗಿ, ಗೃಹಣಿಯಾಗಿ, ಅತ್ತೆ ಮತ್ತು ಸೊಸೆಯಾಗಿ ಮಾತ್ರ ಗುರುತಿಸಿಕೊಳ್ಳುವ ಪ್ರಯತ್ನಮಾಡದೆ ತಾನು ಯಾರು ಎಂಬುದನ್ನು ತಿಳಿದುಕೊಂಡು, ತನ್ನ ಮನೆ, ಕುಟುಂಬದ ಜೊತೆಗೆ ತನ್ನ ಆಸಕ್ತಿಯ ವಿಷಯವನ್ನು ಆಯ್ಕೆ ಮಾಡಿಕೊಂಡು ಪರಿಶ್ರಮ ಪಟ್ಟು ಜೀವನದಲ್ಲಿ ಸಫಲತೆಯನ್ನು ಪಡೆದುಕೊಳ್ಳುವ ಮೂಲಕ ಗುರುತಿಸಿಕೊಳ್ಳುವಂತಾಗಬೇಕು ಎಂದರು.

ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ ನಿಕೇತನ ಇವರು ಪ್ರಸಕ್ತ ಸಾಲಿನ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀಧರಪ್ರಸಾದ್ ಕೆ.ವಹಿಸಿದ್ದರು. ವಾಣಿಜ್ಯ ನಿಕಾಯದ ಡೀನ್ ಶ್ರೀಮತಿ ಗೌರಿ ಭಟ್, ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ರವಿಪ್ರಕಾಶ್ ಮತ್ತು ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕರು ಹಾಗೂ ವಿಜ್ಞಾನ ನಿಕಾಯದ ಡೀನ್ ಪ್ರೊ. ಶ್ರೀಮತಿ ಅಡಿಗ ಪ್ರಾಸ್ತವಿಕವಾಗಿ ಮತನಾಡಿದರು. ಸಾಂಸ್ಕೃತಿಕ ಸಂಘದ ಸಂಚಾಲಕರಾದ ಶ್ರೀಮತಿ ರೇಖ ಎಸ್.ಎನ್ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಪ್ರೊ. ಬಿ. ಶಿವರಾಮ ಶೆಟ್ಟಿ ಮತ್ತು ಶ್ರೀಮತಿ ಪ್ರತಿಮಾ ನಾಯಕ್ ಇವರನ್ನು ಸಮ್ಮಾನಿಸಲಾಯಿತು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರಾಜೇಂದ್ರ ಕೆ. ಕಾರ್ಯಕ್ರಮವನ್ನು ನಿರೂಪಿಸಿ, ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಶ್ರೀ ಕೇಶವಮೂರ್ತಿ ವಂದಿಸಿದರು.