ಉಡುಪಿ: ಉತ್ತರ ಪ್ರದೇಶ ಸರಕಾರ ಅಯೋಧ್ಯೆಯ ಶ್ರೀರಾಮ ಮಂದಿರದ ಕಣ್ಗಾವಲಿಗೆ ಮಣಿಪಾಲದ ಎಂಐಟಿ ಉದ್ಯೋಗಿ, ಪರ್ಕಳದ ನಿವಾಸಿ ಆರ್. ಮನೋಹರ್ ಆವಿಷ್ಕರಣೆ ಮಾಡಿ ನಿರ್ಮಿಸಿದ ದೂರದರ್ಶಕ ಆಯ್ಕೆ ಮಾಡಿದೆ.
ಸುಮಾರು 50 ದೂರದರ್ಶಕಗಳನ್ನು ಖರೀದಿಸುವ ಆರ್ಡರ್ ಈಗಾಗಲೇ ಇವರಿಗೆ ಆನ್ಲೈನ್ ಮೂಲಕ ಬಂದಿದೆ. ಸದ್ಯ 25 ದೂರದರ್ಶಕಗಳನ್ನು ತಯಾರಿಸಿ ನೀಡಲಾಗುವುದು ಎಂದು ಆರ್.ಮನೋಹರ್ ತಿಳಿಸಿದ್ದಾರೆ.
ನೇರವಾಗಿ ಪ್ರತಿಬಿಂಬವನ್ನು ನೋಡುವಂತಹ ದೂರದರ್ಶಕವನ್ನು ಆವಿಷ್ಕರಣೆ ಮಾಡಿರುವುದರಿಂದ ಇವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪೇಟೆಂಟ್ ಕೂಡ ದೂರದರ್ಶಕಕ್ಕೆ ಸಿಕ್ಕಿದೆ.
ದೂರದರ್ಶಕವನ್ನು ಇನ್ನಷ್ಟು ಸರಳ ರೀತಿಯಲ್ಲಿ ಮತ್ತು ಚಿಕ್ಕದಾದ ಗಾತ್ರಕ್ಕೆ ಮತ್ತು ಅತಿ ದೂರದ ವಸ್ತು ಕಾಣುವಂತೆ ಮಾಡುವ ನಿಟ್ಟಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಶ್ರೀರಾಮ ಮಂದಿರದ ಭದ್ರತೆಯ ದೃಷ್ಟಿಯಲ್ಲಿ ಸರ್ಚಿಂಗ್ ನಡೆಸಲು ಮನೋಹರ್ ಅವರ ದೂರದರ್ಶಕ ಆಯ್ಕೆ ಆಗಿರುವುದು ಸ್ಥಳೀಯರಲ್ಲಿಯೂ ಸಂತಸ ತಂದಿದೆ ಎಂದು ಸ್ಥಳೀಯರಾದ ಮೋಹನ್ ದಾಸ ನಾಯಕ್ ಪರ್ಕಳ, ಗಣೇಶ್ ರಾಜ್ ಸರಳೇಬೆಟ್ಟು, ಜಯಶೆಟ್ಟಿ ಬನ್ನಂಜೆ, ರಾಜೇಶ್ ಪ್ರಭು ಪರ್ಕಳ, ಪ್ರಕಾಶ್ ನಾಯ್ಕ್ ಪರ್ಕಳ, ಜಯ ದೀಪ್ ನಾಯಕ್ ತಿಳಿಸಿದ್ದಾರೆ.