ಉಡುಪಿ,ಜ.7: ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಅಂಬಲಪಾಡಿ 66 ರ ಸನಿಹದಲ್ಲಿರುವ ಜಿಲ್ಲಾ ಸವಿತಾ ಸಮಾಜ ಸಮುದಾಯ ಭವನದಲ್ಲಿ ನೂತನವಾಗಿ ಆರಂಭಿಸಲಾದ ‘ಸವಿತಾ ಡಯಾಗ್ನೋಸ್ಟಿಕ್ ಸೆಂಟರ್’ (ಕ್ಲಿನಿಕಲ್ ಲ್ಯಾಬೋರೇಟರಿ) ಉದ್ಘಾಟನೆಯು ಜ.7ರ ಮಧ್ಯಾಹ್ನ 3ಕ್ಕೆ ನಡೆಯಲಿದೆ.
ಸಾಮಾನ್ಯ ಜನರಿಗೆ ರಿಯಾಯಿತಿ ದರದಲ್ಲಿ ಪರೀಕ್ಷಾ ಸೇವೆ ನೀಡುವ ಮಹತ್ವಾಕಾಂಕ್ಷೆಯಿಂದ ತೆರೆಯಲ್ಪಡುವ ಸೆಂಟರ್ ಅನ್ನು ಜಿಲ್ಲಾ ಸರ್ಜನ್ ಡಾ| ಎಚ್. ಅಶೋಕ್ ಉದ್ಘಾಟಿಸಲಿದ್ದು, ಸಹಕಾರಿಯ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸುವರು.
ಸಹಕಾರಿ ಚಳುವಳಿಯಲ್ಲಿ ಪ್ರಥಮ ಬಾರಿಗೆ ಕ್ಲಿನಿಕಲ್ ಲ್ಯಾಬೋರೇಟರಿ ಆರಂಭಗೊಳ್ಳುತ್ತಿದ್ದು ಈ ಸೆಂಟರ್ ಸಮುದಾಯದ ಆರೋಗ್ಯದ ಮೇಲೆ ಗಮನಹರಿಸಲು ಮತ್ತು ಉತ್ತಮ ಗುಣಮಟ್ಟದ ವೈದ್ಯಕೀಯ ಪರೀಕ್ಷಾ ಸೇವೆಗಳನ್ನು ಅತ್ಯಲ್ಪದರದಲ್ಲಿ ಒದಗಿಸುವ ಉದ್ದೇಶ ಹೊಂದಿದೆ.
ಉದ್ಘಾಟನೆ ರಿಯಾಯಿತಿ ಉದ್ಘಾಟನೆ ಪ್ರಯುಕ್ತ ಸವಿತಾ ಸಮಾಜದ ಸದಸ್ಯರು ಮತ್ತು ಸಾರ್ವಜನಿಕರಿಗೆ ಎಲ್ಲ ಪರೀಕ್ಷೆಗಳಿಗೆ 1 ವಾರ ಶೇ.50ರಷ್ಟು 1 ರಿಯಾಯಿತಿ ನೀಡಲಾಗುವುದು. ಅನಂತರ ಸದಸ್ಯರಿಗೆ ಮಾತ್ರ ಶೇ.15ರಿಂದ 20ರ ತನಕ ರಿಯಾಯಿತಿ ನಿರಂತರವಾಗಿ ಇರಲಿದೆ.
ಇಲ್ಲಿ ರಕ್ತ, ಮೂತ್ರ, ಕಫ ಪರೀಕ್ಷೆ ಸಹಿತ ಮೊದಲಾದ ಪರೀಕ್ಷೆಗಳನ್ನು ನಡೆಸಿ ಶೀಘ್ರವಾಗಿ ಶುದ್ಧ, ನಿಖರ ಮತ್ತು ವಿಶ್ವಾಸಾರ್ಹವಾದ ವರದಿಯನ್ನು ನೀಡುವ ಗುರಿ ಇರಿಸಿಕೊಂಡಿದೆ. ಅಲ್ಲದೆ ಮನೆಯಿಂದ ಹೊರಗೆ ಬರಲು ಆಗದವರು, ವಯಸ್ಸಾದವರು, ಹಾಸಿಗೆ ಹಿಡಿದಿರುವವರ ಮನೆಗೆ ತೆರಳಿ ರಕ್ತ ಸಂಗ್ರಹಿಸಿ ಪರೀಕ್ಷಾ ವರದಿಯನ್ನು ಸಕಾಲದಲ್ಲಿ ಮುಟ್ಟಿಸುವ ವ್ಯವಸ್ಥೆ ಮಾಡಲಾಗುವುದು.
ಈ ಕೇಂದ್ರದಲ್ಲಿ ಪ್ರತಿಯೊಂದು ಪರೀಕ್ಷೆಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಲು ಅತ್ಯಾಧುನಿಕ ತಂತ್ರಜ್ಞಾನದ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ. 15ವರ್ಷಕ್ಕೂ ಮೇಲ್ಪಟ್ಟು ಅನುಭವವುಳ್ಳ ತಂತ್ರಜ್ಞರೊಂದಿಗೆ ವರದಿಯಲ್ಲಿ ನಿಖರತೆ ಮತ್ತು ಗುಣಮಟ್ಟದ ಕಾಯ್ದುಕೊಳ್ಳುವ ದೃಷ್ಟಿಯಿಂದ ನುರಿತ ಬಯೋಕೆಮಿಸ್ಟ್ ಗಳು ಕಾರ್ಯನಿರ್ವಹಿಸುವರು ಎಂದು ಸಹಕಾರಿ ಸಂಘದ ಉಪಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ತಿಳಿಸಿದ್ದಾರೆ.












