ಉಡುಪಿ: ಈಗಾಗಲೇ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ನ ಮತದಾರರ ಪಟ್ಟಿ ಅಂತಿಮವಾಗಿದೆ. ಇದರ ಬೆನ್ನಿಗೇ ಉಡುಪಿ ಜಿಲ್ಲಾ ಪಂಚಾಯತ್ನ 28 ಕ್ಷೇತ್ರಗಳ ಪೈಕಿ 14 ಹಾಗೂ ತಾಲೂಕು ಪಂಚಾಯತ್ನ 95 ಕ್ಷೇತ್ರಗಳ ಪೈಕಿ 49 ಸ್ಥಾನಗಳು ಮಹಿಳೆಯರಿಗೆ ಮೀಸಲಿರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಜಿ.ಪಂ ಹಾಗೂ ತಾ.ಪಂ. ಚುನಾಯಿತ ಸದಸ್ಯರ ಕ್ಷೇತ್ರಗಳ ಸೀಮಾ ಗಡಿ ಹಾಗೂ ಚುನಾಯಿತರಾಗಬೇಕಾದ ಸದಸ್ಯರ ಸಂಖ್ಯೆಯನ್ನು ನಿರ್ಧರಿಸಿ ಆಯೋಗ ಶಿಫಾರಸು ಮಾಡಿರುವ ವರದಿಯನ್ನು ಅಂಗೀಕರಿಸಿರುವ ರಾಜ್ಯ ಸರಕಾರ ಮೀಸಲು ನಿಗದಿಪಡಿಸಿ ಈ ಅಧಿಸೂಚನೆ ಹೊರಡಿಸಿದೆ.
ಜಿ.ಪಂ. ಮೀಸಲಾತಿ ವಿವರ
ಜಿ.ಪಂ.ನ 26 ಕ್ಷೇತ್ರಗಳಲ್ಲಿ ಮಹಿಳೆಯರಿಗೆ 14 ಸ್ಥಾನಗಳು ಸಿಕ್ಕಿವೆ. ಅನುಸೂಚಿತ ಜಾತಿಗೆ ಎರಡು ಸ್ಥಾನಗಳನ್ನು ನೀಡಿದ್ದು. ಅದರಲ್ಲಿ ಒಂದು ಮಹಿಳೆಗೆ ಮೀಸಲಿಟ್ಟಿದೆ. ಅನುಸೂಚಿತ ಪಂಗಡ ಒಂದು ಸ್ಥಾನದಲ್ಲಿ ಒಂದು ಮಹಿಳೆಗೆ, ಹಿಂದುಳಿದ ವರ್ಗ (ಅ)ದಲ್ಲಿರುವ ಒಟ್ಟು 7 ಸ್ಥಾನಗಳಲ್ಲಿ 4 ಮಹಿಳೆಯರಿಗೆ ಹಾಗೂ ಹಿಂದುಳಿದ ವರ್ಗ (ಬಿ) 2 ಸ್ಥಾನದಲ್ಲಿ ಒಬ್ಬ ಪುರುಷ, ಒಬ್ಬ ಮಹಿಳೆಗೆ ಮೀಸಲಿಡಲಾಗಿದೆ. ಸಾಮಾನ್ಯ ಸ್ಥಾನಗಳನ್ನು ಒಟ್ಟು 15ರಲ್ಲಿ 7 ಸ್ಥಾನಗಳು ಮಹಿಳೆಯರಿಗೆ ಮೀಸಲಿಟ್ಟಿದೆ.
ತಾ.ಪಂ. ಮೀಸಲಾತಿ ವಿವರ
7 ತಾಲೂಕು ಪಂಚಾಯತ್ಗಳಲ್ಲಿ ಒಟ್ಟು ಇರುವ 95 ಸ್ಥಾನಗಳ ಪೈಕಿ ಮಹಿಳೆಯರಿಗೆ 49 ಸ್ಥಾನಗಳು ನಿಗದಿಯಾಗಿವೆ. ಹೆಬ್ರಿ 7 ಸ್ಥಾನದಲ್ಲಿ 4 ಮಹಿಳೆಯರಿಗೆ, ಬೈಂದೂರು 11 ಸ್ಥಾನದಲ್ಲಿ 6 ಮಹಿಳೆಯರಿಗೆ, ಕಾಪು 12 ಸ್ಥಾನದಲ್ಲಿ 6 ಮಹಿಳೆಯರಿಗೆ, ಉಡುಪಿ 13 ಸ್ಥಾನದಲ್ಲಿ 7 ಮಹಿಳೆ ಯರಿಗೆ, ಬ್ರಹ್ಮಾವರ, ಕಾರ್ಕಳ ತಲಾ 16 ಸ್ಥಾನದಲ್ಲಿ 8 ಮಹಿಳೆಯರಿಗೆ, ಕುಂದಾಪುರ 20 ಸ್ಥಾನದಲ್ಲಿ 10 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.