ಮೂಲಭೂತ ಸೌಕರ್ಯದ ಕೊರತೆ: ಉಭಯ ಜಿಲ್ಲೆಗಳ 55 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಗೆ ಶೂನ್ಯ ದಾಖಲಾತಿ

ಉಡುಪಿ/ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಸರ್ಕಾರಿ ಪ್ರಾಥಮಿಕ ಶಾಲೆಗಳು 2023-24ನೇ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿಗೆ ‘ಶೂನ್ಯ ಪ್ರವೇಶಾತಿ’ ದಾಖಲಿಸಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಾರ ಉಭಯ ಜಿಲ್ಲೆಗಳ 55 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಗೆ ಯಾವುದೇ ವಿದ್ಯಾರ್ಥಿ ದಾಖಲಾಗಿಲ್ಲ.

ಪುತ್ತೂರು ತಾಲೂಕಿನ ಎರಡು, ಬಂಟ್ವಾಳದ ನಾಲ್ಕು, ಬೆಳ್ತಂಗಡಿಯಲ್ಲಿ ಮೂರು, ಮಂಗಳೂರು ಉತ್ತರದಲ್ಲಿ ಎರಡು, ಮಂಗಳೂರು ದಕ್ಷಿಣದಲ್ಲಿ ಎರಡು, ಮೂಡುಬಿದಿರೆಯಲ್ಲಿ ಮೂರು ಮತ್ತು ಸುಳ್ಯ ತಾಲೂಕಿನ ಎಂಟು ಶಾಲೆ ಸೇರಿ ದಕ್ಷಿಣ ಕನ್ನಡದ 24 ಶಾಲೆಗಳಲ್ಲಿ 1ನೇ ತರಗತಿಗೆ ಒಂದು ವಿದ್ಯಾರ್ಥಿ ಕೂಡಾ ದಾಖಲಾಗಿಲ್ಲ.

ಉಡುಪಿಯಲ್ಲಿ ನಾಲ್ಕು, ಬ್ರಹ್ಮಾವರದಲ್ಲಿ ನಾಲ್ಕು, ಕುಂದಾಪುರದಲ್ಲಿ ಐದು, ಬೈಂದೂರಿನಲ್ಲಿ ಒಂಬತ್ತು, ಕಾರ್ಕಳ ತಾಲೂಕಿನಲ್ಲಿ ಒಂಬತ್ತು ಶಾಲೆ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ 31 ಶಾಲೆಗಳಲ್ಲೆ ಒಂದನೇ ತರಗತಿಯ ದಾಖಲಾತಿ ಶೂನ್ಯ.

ಉತ್ತಮ ಮೂಲಸೌಕರ್ಯ ಮತ್ತು ಸಾರಿಗೆ ಸೌಲಭ್ಯ ಹೊಂದಿರುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಏರಿಕೆಯಾಗಿರುವುದು ಸರ್ಕಾರಿ ಶಾಲೆಗಳ ಪ್ರವೇಶದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳ ವಾದವಾಗಿದೆ.

‘ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ’ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಡಿಸೆಂಬರ್ 2022 ರಲ್ಲಿ ವಿಧಾನ ಪರಿಷತ್ತಿಗೆ ಸಲ್ಲಿಸಿದ ವರದಿಯ ಪ್ರಕಾರ, ಕಳೆದ 13 ವರ್ಷಗಳಲ್ಲಿ ಖಾಸಗಿ ಶಾಲೆಗಳ ದಾಖಲಾತಿಗಳು ಶೇಕಡಾ 335 ರಷ್ಟು ಹೆಚ್ಚಾಗಿದೆ, ಆದರೆ ಅದೇ ಅವಧಿಯಲ್ಲಿ ಸರ್ಕಾರಿ ಶಾಲೆಗಳ ಪ್ರವೇಶವು ಶೇಕಡಾ 30 ರಷ್ಟು ಮಾತ್ರ ಹೆಚ್ಚಾಗಿದೆ.

ವಾಸ್ತವಿಕ ಸಂಖ್ಯೆಯಲ್ಲಿ, 2008-2009 ಮತ್ತು 2021-2022 ರ ನಡುವೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ದಾಖಲಾತಿ 1.60 ಲಕ್ಷದಷ್ಟು ಹೆಚ್ಚಿದ್ದರೆ, ಅದೇ ಅವಧಿಯಲ್ಲಿ ಖಾಸಗಿ ಪ್ರೌಢಶಾಲೆಗಳಲ್ಲಿ ದಾಖಲಾತಿಯು 5.74 ಲಕ್ಷದಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ಕೊರತೆ ಮತ್ತು ಶಿಕ್ಷಣದ ಗುಣಮಟ್ಟದಲ್ಲಿನ ಕ್ಷೀಣತೆ ಖಾಸಗಿ ಶಾಲೆಗಳ ಪ್ರವೇಶ ಹೆಚ್ಚಳಕ್ಕೆ ಕಾರಣ ಎಂದು ವರದಿ ಉಲ್ಲೇಖಿಸಿದೆ.