ಮುಂಬೈ: ಹಲವು ವರ್ಷಗಳ ಕಾಲ ಟೀಂ ಇಂಡಿಯಾದಲ್ಲಿ ಆಡಿದ, ಟಿ-20 ಕ್ರಿಕೆಟ್‍ನಲ್ಲಿ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದ ಎಡಗೈ ಸ್ಫೋಟಕ ಆಟಗಾರ 37ರ ಹರೆಯದ ಯುವರಾಜ್ ಸಿಂಗ್ ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದಾರೆ.
ಯುವರಾಜ್ ಸೋಮವಾರ ಮುಂಬಯಿ ನ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ನಿವೃತ್ತಿ ನಿರ್ಧಾರ ಪ್ರಕಟಿಸಿದರು.
2011ರ ವಿಶ್ವಕಪ್ ಸರಣಿ ಶ್ರೇಷ್ಠ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದ ಯುವರಾಜ್ ಸದ್ಯ ವಿಶ್ವಕಪ್ ನಡೆಯುತ್ತಿರುವ ಸಂದರ್ಭ ದಲ್ಲೇ ನಿವೃತ್ತಿ ಘೋಷಿಸಿದ್ದಾರೆ. 2019 ರ ಐಸಿಸಿ ವಿಶ್ವಕಪ್ ಬಳಿಕ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸುವ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಈ ಹಿಂದೆ ಹೇಳಿದ್ದರು.
2000ದಲ್ಲಿ ಕೀನ್ಯಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ಯುವಿ ಇದುವರೆಗೂ 304 ಏಕದಿನ ಪಂದ್ಯಗಳಲ್ಲಿ 8,701 ರನ್ ಗಳಿಸಿದ್ದಾರೆ. 2017 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕೊನೆ ಬಾರಿಗೆ ಏಕದಿನ ಪಂದ್ಯವನ್ನಾಡಿದ್ದಾರೆ. 2003 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿ 40 ಪಂದ್ಯಗಳಲ್ಲಿ 1,900 ರನ್ ಗಳಿಸಿದ್ದಾರೆ. 2007 ರಲ್ಲಿ ಮೊದಲ ಟಿ20 ಕ್ರಿಕೆಟ್ ಪಂದ್ಯವನ್ನು ಸ್ಕಾಟ್ ಲ್ಯಾಂಡ್ ವಿರುದ್ಧ ಆಡಿದ್ದ ಅವರು, ಇದುವರೆಗೂ 58 ಪಂದ್ಯಗಳಿಂದ 1,177 ರನ್ ಸಿಡಿಸಿದ್ದಾರೆ. ಉಳಿದಂತೆ ಲೆಗ್ ಸ್ಪಿನ್ ಬೌಲರ್ ಆಗಿ ಟೆಸ್ಟ್, ಏಕದಿನ, ಟಿ20 ಮಾದರಿಯಲ್ಲಿ ಕ್ರಮವಾಗಿ 9, 111, 28 ವಿಕೆಟ್ ಪಡೆದಿದ್ದಾರೆ. ತನ್ನ ಆಲ್ ರೌಂಡರ್ ಆಟದ ಮೂಲಕ ಇವರು ಟೀಂ ಇಂಡಿಯಾದ ಓರ್ವ ಪ್ರತಿಭಾವಂತ ಆಟಗಾರ ಎನಿಸಿಕೊಂಡಿದ್ದರು.
ಇಂದಿನ ಕಾರ್ಯಕ್ರಮದಲ್ಲಿ ಯುವರಾಜ್ ಸಿಂಗ್ ತನಗೆ ಸಿಕ್ಕಿದ ಎಲ್ಲ ಪ್ರಶಸ್ತಿಗಳು, ಟ್ರೋಫಿಗಳು, ಸ್ಮರಣಿಕೆಗಳು, ಬ್ಯಾಟ್ ಮತ್ತು ತಮ್ಮ 12ನೇ ನಂಬರಿನ ಜೆರ್ಸಿ ಹೀಗೆ ಪ್ರತಿಯೊಂದನ್ನು ಪ್ರದರ್ಶನಕ್ಕೆ ಇಟ್ಟಿದ್ದರು.