ಬೆಂಗಳೂರು: ಕಾಂಗ್ರೆಸ್ ಪಕ್ಷದ ಚುನಾವಣಾ ಭರವಸೆಗಳ ಪೈಕಿ 5ನೇ ಗ್ಯಾರಂಟಿ ಯುವನಿಧಿ ಯೋಜನೆ ಜಾರಿಗೂ ಮುನ್ನ ಅದರ ನೋಂದಣಿ ಪ್ರಕ್ರಿಯೆಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಐದೂ ಯೋಜನೆ ಜಾರಿಯಾಗಿ ರಾಜ್ಯ ಆರ್ಥಿಕವಾಗಿ ಸದೃಡವಾಗಿದೆ. ವಿವೇಕಾನಂದ ಜಯಂತಿಯಂದು ಲಕ್ಷಾಂತರ ಯುವಕ ಯುವತಿಯರ ಸಮ್ಮುಖದಲ್ಲಿ ಯುವನಿಧಿಯನ್ನು ನೇರವಾಗಿ ಅರ್ಹರ ಖಾತೆಗೆ ಜಮೆ ಮಾಡುವ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಸ್ವಾಮಿ ವಿವೇಕಾನಂದ ಜಯಂತಿ ದಿನ (ಜ.12) ಯುವನಿಧಿ ಫಲಾನುಭವಿಗಳ ಖಾತೆಗೆ ಮೊದಲ ಕಂತಿನ ಹಣ ಜಮೆ ಮಾಡಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿದೆ.
2022-23ನೇ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ಪದವೀಧರರಿಗೆ 3,000 ರೂಪಾಯಿ ಮತ್ತು ಡಿಪ್ಲೋಮಾ ಹೊಂದಿರುವವರಿಗೆ ಅವರು ಕೆಲಸಕ್ಕೆ ಸೇರುವ ತನಕ ಅಂದರೆ ಗರಿಷ್ಠ 2 ವರ್ಷ ಕಾಲ 1,500 ರೂಪಾಯಿ ವಿತ್ತೀಯ ನೆರವನ್ನು ಸರ್ಕಾರ ನೀಡಲಿದೆ.
ಪದವಿ/ಡಿಪ್ಲೊಮಾ ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಪೂರ್ಣಗೊಂಡ ನಂತರವೂ ಉದ್ಯೋಗ ಸಿಗದವರಿಗೆ ಹಣಕಾಸಿನ ನೆರವು ಸಿಗಲಿದೆ. ಅಭ್ಯರ್ಥಿಗಳು ಕನಿಷ್ಠ ಆರು ವರ್ಷದಿಂದ ಕರ್ನಾಟಕದಲ್ಲಿ ವಾಸವಿರುವ ಬಗ್ಗೆ ದಾಖಲೆ ಒದಗಿಸಬೇಕಾಗುತ್ತದೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಶರಣಪ್ರಕಾಶ್ ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.