ಯುಗಾದಿಗೆ ಉಸಿರು, ಪ್ರಕೃತಿಯ ಹಸುರು: ಮತ್ತೆ ಬಂತು ಚಿಗುರಿನ ಹಬ್ಬ: ಯುಗಾದಿಯ ವಿಶೇಷ ಬರಹ

ಬರಹ-ಪ್ರಸಾದ ಶೆಣೈ

ಮಾರ್ಚ್ ತಿಂಗಳು ಮುಗಿದು ಎಪ್ರಿಲ್ ತಿಂಗಳು ಆರಂಭವಾಗುತ್ತದೋ, ಆಗ ಮರದ ತುಂಬಾ ಚಿಪಿಪಿಲಿ ಹಾಡುಗಳನ್ನು ಹಾಡುತ್ತಲೇ ರೆಂಬೆ ಕೊಂಬೆಗಳಿಗೂ ಹಾರುವ ಹಕ್ಕಿಗಳು ಒಂದೇ ಸಮನೆ ಜಾಸ್ತಿಯಾಗುತ್ತವೆ. ಅವುಗಳೆಲ್ಲಾ “ನೋಡು ನೋಡು ಗೆಳತಿ ಚೈತ್ರ ಕಾಲ ಬಂದಿದೆ, ಮೋಡಿ ಮಾಡಿ ನನ್ನ ಮನಕೆ ಹರುಷ ತಂದಿದೆ”ಎಂದು ಯಕ್ಷಗಾನದಲ್ಲಿ ಭಾಗವತರು ಸುಶ್ರಾವ್ಯವಾಗಿ ಹಾಡುವ ಪದ್ಯದಂತೆ, ವಸಂತರಾಜನನ್ನು ಕೊಂಡಾಡುತ್ತ, ಬಾ ಬಾ ವಸಂತ ಬಾ ಬಾ ಎಂದು ಹಸಿರ ಬಾಗಿಲೊಳು ನಿಂತು ಕರೆದಂತೆ ಕಾಣಿಸುತ್ತವೆ.

ಪುಟ್ಟ ಮರಿಹಕ್ಕಿಗೆ  ಒಂದೊಂದೇ ಬಣ್ಣ ಬಣ್ಣದ ರೆಕ್ಕೆಗಳು ಮೂಡಿದಂತೆ, ಚಳಿಗಾಲದಲ್ಲಿ ಬೋಳಾಗಿ ನಿಂತ ಮರಗಳಿಗೆ ಯುಗಾದಿ ಬರುವ ಹೊತ್ತಿಗೆ ಒಂದೊಂದೇ ಚಿಗುರೆಲೆಗಳು ಮೂಡುವುದನ್ನು, ಎಲ್ಲಾ ಮರದ ಚಿಗುರೆಲೆಗಳು ಒಂದೇ ಬಣ್ಣದ್ದಾಗಿರದೇ ಕೆಂಪು, ಕಡುಹಸಿರು, ಗುಲಾಲಿ, ನಸುಗೆಂಪು ಬಣ್ಣಗಳಿಂದ ಸೂರ್ಯನ ಬಿಸಿಲಿಗೆ ಮಿಂಚುವುದನ್ನು ನೋಡುತ್ತಿದ್ದರೆ ಆಹಾ ಒಂದೊಂದು ಎಲೆಗಳಿಗೂ ಒಂದೊಂದು ಬಣ್ಣದ ಕನಸಾ? ಆ ಒಂದೊಂದು ಕನಸಿಗೂ ನೂರೊಂದು ಸೊಗಸಾ? ಎಂದು ನಾವೇ ಸ್ವತಃ ಕನಸು ಕಂಡು ಹಿಗ್ಗಿದಂತನ್ನಿಸುತ್ತದೆ.ಈ ಯುಗಾದಿ ಬರುವ ಹೊತ್ತಿಗೆ ಪ್ರಕೃತಿಯಲ್ಲಿದ್ದ ಯಾವುದೋ ಖಾಲಿತನವೆಲ್ಲಾ ಚಿಗುರಾಗಿ, ಹಸಿರಾಗಿ, ಹಣ್ಣಾಗಿ ತುಂಬಿಕೊಂಡಾಗ ಪ್ರಕೃತಿ ಮಾತ್ರ ತುಂಬಿಕೊಳ್ಳುವುದಿಲ್ಲ. ಪ್ರಕೃತಿಯನ್ನು ನಾವು ಆ ಕ್ಷಣಕ್ಕೆ ಸೂಕ್ಷ್ಮವಾಗಿ ಗಮನಿಸಿದರೆ, ಮರ, ಗಿಡಗಳ ಮೈಮನಗಳಲ್ಲಿ ಪ್ರಾಕೃತಿಕವಾಗಿ ಆಗುತ್ತಿರುವ ಬದಲಾವಣೆಗಳನ್ನು ನೋಡುತ್ತಿದ್ದರೆ ಖಂಡಿತವಾಗಿಯೂ ನಮ್ಮೊಳಗೂ ಹಸಿರಿನಷ್ಟೇ ಶುಭ್ರವಾದ, ಚಂದವಾದ ಜೀವನೋತ್ಸಾಹವೊಂದು ರಂಗೇಳುತ್ತದೆ.

ಹಸಿರ ಉಸಿರೇ ಹಬ್ಬವಾದಾಗ:

ಯುಗಾದಿ ಬೇಸಿಗೆಯಲ್ಲಿಯೇ ಬರುವ ಹಬ್ಬ, ನದಿ ಹಳ್ಳ, ಕೆರೆಗಳೆಲ್ಲಾ ಬತ್ತಿ ನೀರಿನ ಹರಿವೇ ಕಾಣಲು ಸಿಗದ, ಒಂದು ತೊಟ್ಟು ನೀರು ಸಿಕ್ಕರೂ ಸಾಕು ಜೀವಸಂಕುಲಗಳೆಲ್ಲಾ ಅಬ್ಬಾ ಎಂದು ನಿಟ್ಟುಸಿರು ಬಿಡುವ ದುರಿತ ಕಾಲವಿದು. ಇಂತಹ ಕಾಲದಲ್ಲೂ ಮರ ಗಿಡಗಳು ಚಿಗುವುದನ್ನು ನಿಲ್ಲಿಸುವುದಿಲ್ಲ, ಹೂಗಿಡಗಳು ಹೂವು ತುಂಬಿಕೊಂಡು ಕಂಗೊಳಿಸುವುದನ್ನು ನಿಲ್ಲಿಸುವುದಿಲ್ಲ. ಮಾವು, ಬೇವು, ಹೊಂಗೆ, ಹಲಸು, ಹೆಬ್ಬಲಸು, ಗೇರು, ಇವೆಲ್ಲವೂ ಹೂ ಬಿಟ್ಟು ಕಾಯಾಗುತ್ತ, ಹಣ್ಣಾಗುವುದನ್ನು ಎಂದೂ ಮರೆಯುವುದಿಲ್ಲ. ಎಷ್ಟೇ ಒಣಗಿದ್ದರೂ ಮರದ ತುದಿಗೊಂದು ಪುಟ್ಟ ಪುಟ್ಟ ಎಲೆಗಳು ಲೋಕಕ್ಕೆ ಉಸಿರು ನೀಡುವುದಕ್ಕೋಸ್ಕರ ಅರಳಿಯೇ ಅರಳುತ್ತವೆ.  ನೂರಾರು ಹೂಗಿಡಗಳ ಪರಾಗಸ್ಪರ್ಶ ಕ್ರಿಯೆಗೆ ಸಹಾಯ ಮಾಡುವ ಹಕ್ಕಿ, ಚಿಟ್ಟೆ, ದುಂಬಿ ಮೊದಲಾದ ಜೀವಗಳು ವಸಂತ ಮಾಸದಲ್ಲಿ ಆ ಹೂವುಗಳನ್ನು ಮುತ್ತಿಗೆ ಹಾಕಲು ಬಂದೇ ಬರುತ್ತವೆ.

ನೋಡಿ ಪ್ರಕೃತಿಯಲ್ಲಿ ಎಲ್ಲವೂ ಅದೆಷ್ಟು ಶಿಸ್ತುಬದ್ಧತೆ, ವೈವಿದ್ಯತೆ, ಆಯಾ ಕಾಲಕ್ಕೆ ಚಾಚೂತಪ್ಪದೇ ನಡೆಯುವ ಈ ಜೈವಿಕ ಪ್ರಕ್ರಿಯೆಗಳು ನಮ್ಮ ಸುತ್ತಲಿನ ಲೋಕವನ್ನು ಸ್ವರ್ಗದಂತೆ ಮಾಡುತ್ತದೆ. ಬೇರೆಲ್ಲ ಹಬ್ಬಗಳು ನಡೆಯುವುದು ಮುಂಗಾರು ಮಳೆ ಬಿದ್ದು  ಪ್ರಕೃತಿ ತುಂಬಿಕೊಂಡ ನಂತರದಲ್ಲೇ. ಆಗ ಪ್ರಕೃತಿಯ ಹರಿವೇ ಬೇರೆ. ಆದರೆ ಯುಗಾದಿಯ ಹೊತ್ತಿಗೆಹಾಗಲ್ಲ, ಪ್ರಕೃತಿ ಒಂಥರಾ ತನ್ನೆಲ್ಲಾ ಹಳೆ ನೆನಪುಗಳನ್ನು ಕಳಚಿಕೊಂಡು ಹೊಸತಾಗಬೇಕು ಎಂದು ಹಂಬಲದಲ್ಲಿ ತರಗೆಲೆಗಳನ್ನೆಲ್ಲಾ ಉದುರಿಸಿಕೊಂಡು ಹೊಸತಾಗುತ್ತದೆ. ಉದುರಿಬಿದ್ದ ತರಗೆಲೆಗಳು ಮಣ್ಣಲ್ಲಿ ಲೀನವಾಗಿ ಗೊಬ್ಬರವಾಗಿ ಭೂಮಿಯನ್ನು ಇನ್ನಷ್ಟು ಫಲವತ್ತಾಗಿಸುತ್ತದೆ. ಚಿಗುರಿದ ಪುಟ್ಟ ಪುಟ್ಟ ಎಲೆಗಳು ಆಕಾಶಕ್ಕೆ ಚಾಚುವ ಕನಸನ್ನು ಕಾಣುವುದೇ ಈ ವಸಂತಕಾಲದಲ್ಲಿ, ಆ ಮರ ಇನ್ನಷ್ಟು ಎತ್ತರವಾದರೆ ನನ್ನ ಗೂಡನ್ನು ಆ ಮರದಲ್ಲೇ ಕಟ್ಟಬಹುದು ಎಂದು ಹಕ್ಕಿಯೂ ಕನಸು ಕಾಣುವುದು ಇದೇ ಹೊತ್ತಲ್ಲಿ, ಹಾಗಾಗಿ ಯುಗಾದಿವೆಂದರೆ  ಪ್ರಕೃತಿಯಲ್ಲಿ ತುಂಬಿಕೊಂಡಿರುವ ಬಗೆಬಗೆಯ ಗಿಡ, ಮರ, ಬಳ್ಳಿ, ಜೀವಸಂಕುಲಗಳೆಲ್ಲಾ  ಸೇರಿಕೊಂಡು ನಡೆಸುವ ಜೈವಿಕ ಹಬ್ಬವೂ ಹೌದು. ಅವರ ಹಬ್ಬ ಹಸಿರಾದರೆ, ನಮ್ಮೊಳಗೂ ಆ ಹಸಿರ ಉಸಿರೆಲ್ಲಾ ಹರಡಿಕೊಂಡು ಸಂಭ್ರಮದ ಯುಗಾದಿಯಾಗುತ್ತದೆ.

ವಸಂತನ ಜೊತೆ ಸೇರೋಣ:ಖುಷಿಪಡೋಣ:

ಯಾಕೋ ಕಾಲ ಕಳೆದಂತೆ ಯುಗಾದಿ ಹಬ್ಬದ ಆಡಂಭರ, ಕೃತಕತೆ ಎಲ್ಲವೂ ಜಾಸ್ತಿಯಾಗುತ್ತಿದೆ ಅನ್ನಿಸೋದು ನಂಗೆ ಮಾತ್ರ ಅಲ್ಲವೇನೋ?ಕೆಲವೇ ವರ್ಷಗಳ ಹಿಂದೆ ಪ್ರಕೃತಿಯ ಜೊತೆ ಕ್ಷಣಕ್ಷಣವೂ ಬೆರೆಯುತ್ತಾ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುತ್ತಲೇ, ಪ್ರಕೃತಿಯ ಸ್ವರ್ವಸ್ವವನ್ನೂ ಆಸ್ವಾದಿಸುತ್ತಲೇ ಯುಗಾದಿ ಆಚರಣೆ ಮಾಡಿದ ಕೆಲವೊಬ್ಬರಿಗಾದರೂ ಹೀಗೆ ಅನ್ನಿಸಬಹುದೇನೋ? ನಮ್ಮನ್ನು ಪೊರೆಯಲು ಒಂದೊಂದಾಗೇ ಮೂಡುತ್ತಿರುವ ಚಿಗುರೆಲೆಗಳನ್ನು, ಗಾಳಿ, ಬೆಳಕು ನೀಡುತ್ತ ನಮ್ಮ ಪ್ರತೀ ದಿನಗಳನ್ನು ನೆಮ್ಮದಿಯಾಗಿರಿಸುವ ಮರಗಳನ್ನು, ಖುಷಿಯಿಂದ ಹಾಡುತ್ತ ನಮ್ಮ ನಾಳೆಗಳನ್ನು ಜೀವಂತವಾಗಿರಿಸುವ ತರಹೇವಾರಿ ಹಕ್ಕಿಗಳನ್ನು, ನಾವು ಈ ವಸಂತ ಮಾಸದಲ್ಲಿ ನೋಡುವುದನ್ನೇ ಮರೆತುಬಿಟ್ಟಿದ್ದೇವೆ. ಈ ಚೈತ್ರ ಮಾಸದಲ್ಲಷ್ಟೇ ಬಿರಿಯುವ ಹೂಗಳ ಪರಿಮಳವನ್ನು ಆಘ್ರಾಣಿಸುವುದನ್ನು, ಅದೇ ಹೂಗಳ ಮಕರಂದ ಹೀರುವ ಬಣ್ಣ ಬಣ್ಣದ ಚಿಟ್ಟೆಗಳನ್ನು ಕಣ್ತುಂಬಿಕೊಳ್ಳುವುದನ್ನು, ಪ್ರಕೃತಿ ನಮಗೆ ಈ ಯುಗಾದಿಯ ಹೊತ್ತಿಗೆ ನೀಡುವ ರುಚಿಕರ ಹಣ್ಣುಗಳನ್ನು ನಾವೇ ಮರದಿಂದ ಕಿತ್ತು, ಹಣ್ಣು ಕೊಟ್ಟ ಆ ಮರಕ್ಕೆ ಕೃತಜ್ಞತೆ ಹೇಳುವುದನ್ನು ಮರೆತೇಬಿಟ್ಟಿದ್ದೇವಲ್ಲವೇ?

ಯುಗಾದಿ ಎಂದರೆ ಬರೀ ಒಂದು ಕಾಟಾಚಾರದ ಆಚರಣೆಯಾಗಿಯೋ, ಹೊಸ ಹೊಸ ವಸ್ತುಗಳನ್ನಷ್ಟೇ ಖರೀದಿಸಿ ಹಬ್ಬ ಆಚರಣೆ ಮಾಡಿದೆವು ಎಂದು ಬೀಗುವ ಕೊಳ್ಳುಬಾಕತನದ ಪ್ರದರ್ಶನಕ್ಕಾಗಿಯೋ ಮೀಸಲಾಗುವುದು ಬೇಡ. ನಾವು ಬಾಲ್ಯದಲ್ಲಿ ಕಳೆದಪ್ರಕೃತಿಯ ನಡುವಿನ ಯುಗಾದಿ ಹಬ್ಬವನ್ನು ಮತ್ತೆ ಈ ಕಾಲದಲ್ಲಿ ರಿವೈಂಡ್ ಮಾಡಿಕೊಳ್ಳೋಣ. ಅದೆಲ್ಲಾ ಹಳೆ ಕಾಲದಲ್ಲಾಯಿತು ಈಗ ಪ್ರಕೃತಿಯ ನಡುವೆ ಕಳೆದುಹೋಗಿ ಹಬ್ಬ ಆಚರಿಸುವುದಕ್ಕೆ ಸಮಯವೆಲ್ಲಿದೆ ಅಂತ ಎಲ್ಲವನ್ನೂ ಕಾಲಕ್ಕೆ ಅರ್ಪಿಸಿಬಿಡಬೇಡಿ. ಕಾಲ ಬದಲಾದರೂ ಪ್ರತೀ ಯುಗಾದಿಗೂ ಮಾವು ಚಿಗುರುತ್ತಲೇ ಇದೆ. ಪ್ರಕೃತಿ ಮತ್ತೆ ಮತ್ತೆ ಹೊಸತಾಗುತ್ತಲೇ ಇದೆ. ಪ್ರತೀ ವರ್ಷ ಹೊಸತಾದರೂ ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳದೆ ನಮ್ಮೆಲ್ಲರೊಳಗೂ ಹೊಸ ಉಸಿರು ಮೂಡಿಸುತ್ತಿರುವ ಈ ಚೈತ್ರಕಾಲದ ಪ್ರಕೃತಿಯೇ ನಮಗೆ ದೊಡ್ಡ ಚೈತನ್ಯಶಕ್ತಿಯಾಗಬೇಕು. ನಮ್ಮ ತರಹ ಪ್ರಕೃತಿಯೂ ಆಗಾಗ ಉತ್ಸಾಹ, ಜೀವಂತಿಕೆ ಕಳೆದುಕೊಂಡರೆ? ನಾವು ಬದುಕೋದಕ್ಕೆ ಹೇಗೆ ಸಾಧ್ಯ ಹೇಳಿ? ಉತ್ಸಾಹ ಕಳೆದುಕೊಳ್ಳದಿರೋಣ, ಚೈತನ್ಯದಿಂದಲೇ ನಳನಳಿಸುತ್ತಿರುವ ಪ್ರಕೃತಿಯನ್ನು ಮನೆ ಮಕ್ಕಳಂತೆ ಉಳಿಸೋಣ.  ಪ್ರಕೃತಿಯ ನಡುವೆ ಬೆರೆತು ಯುಗಾದಿ ಹಬ್ಬ ಆಚರಿಸಿದಷ್ಟು ಹೊತ್ತು ನಾವು ಜೀವಂತಿಕೆಯಿಂದ ತುಂಬಿಕೊಳ್ಳುತ್ತೇವೆ.

-ಪ್ರಸಾದ ಶೆಣೈ