ಯುಗಾದಿಯ ಈ ಹರುಷದ ಹಸಿರಲ್ಲಿ ಇನ್ನಷ್ಟು ಬೆಳಗೋಣ ಬನ್ನಿ: ಯುಗಾದಿ ಹಬ್ಬಕ್ಕೊಂದು ಅಕ್ಷರ ತೋರಣ

ಚೆಯ ತೋಟದಲ್ಲೆಲ್ಲೋ ಮಾವಿನ ಮಿಡಿ ಉದುರಿ ಚಂದದ ಸದ್ದಾದಾಗ, ಪುಟ್ಟ ಪುಟ್ಟ ಕಂಗಳಲ್ಲಿ ಪರೀಕ್ಷೆಯ ಬಿಸಿಯೆಲ್ಲಾ ಕಳೆದು ರಜೆ ಅನ್ನೋ ಐಸ್‌ ಕ್ಯಾಂಡಿ ನಗು ಮೂಡೋವಾಗ, ಅದಕ್ಕಿಂತಲೂ ಹೆಚ್ಚಾಗಿ ತೋಟದ ತುಂಬೆಲ್ಲಾ ಬಣ್ಣ ಬಣ್ಣದ ಹೂವುಗಳು ತೊನೆದಾಡುವಾಗ, ಹೋ ಹೋ ಯುಗಾದಿ ಇಷ್ಟು ಬೇಗ ಬಂದೇ ಬಿಡ್ತಾ ಅನ್ನಿಸಿ ಕಣ್ಣೂ ಹಬ್ಬವಾಗಿ ಬಿಡುತ್ತದೆ. ಯುಗಾದಿ ಬರುವ ಈ  ತಿಂಗಳು ಅಂದರೆ ಪೆಪ್ಪರ್ ಮಿಂಟಿಗಿಂತಲೂ ಜಾಸ್ತಿ ರುಚಿ, ಅದಮ್ಯ ಉತ್ಸಾಹ ಅಮಿತಾನಂದದ ಚಿಗುರು ಈ ಯುಗಾದಿ. ಇಲ್ಲಿನ ಒಂದೊಂದು ಚಿಗುರೂ ಮುಂದೆ ಹೆಮ್ಮರವಾಗುತ್ತದೆ ಬದುಕು ಅಂತ ಜೋ ಜೋ.. ಹಾಡುವ ಅಮ್ಮನ ತರಹ, ಈಗ ಬರಡಾದರೆ ಏನಾಯಿತು, ಮುಂದೆ ಪೂರ್ತಿ ಹಸಿರಿನಿಂದ ತುಂಬಿಕೊಡ್ತೀಯಾ ನೋಡು ಅಂತ ಕ್ಷಣ ಕ್ಷಣವೂ ಸ್ಫೂರ್ತಿಯ ಜೀವೋನ್ಮಾದದ ಕೊಳದಲ್ಲಿ ಸ್ನಾನ ಮಾಡಿಸಿಬಿಡುವ ಯುಗಾದಿ ಅಂದರೆ ಅಂಗಳದಲ್ಲಿ ಆಟವಾಡುವ ಮಗುವಿನ ಕಣ್ಣಿನಂತಹ ಬೆಳಕು, ಬೆರಗು ಮತ್ತು ಸಡಗರ.

ಲವಲವಿಕೆ ಜಗಕೆ

ಕೆಲವೊಂದು ಹಬ್ಬಗಳು ಹಾಗೇ, ಅದರಲ್ಲಿ ಹುಡುಕಿದರೆ ಸಾವಿರ ಕೇಕೆಗಳಿರುತ್ತದೆ. ನಮಗಷ್ಟೇ ಕೇಳುವಂತಹ ಚಂದದ ಹಾಡಿರುತ್ತದೆ. ಆದರೆ ಬೇರೆಲ್ಲಾ ಹಬ್ಬಗಳ ಸಂದರ್ಭಗಳಲ್ಲಿ ನಮ್ಮ ಸುತ್ತಲಿನ ಪರಿಸರ, ಎಲ್ಲೋ ಕೂಗುತ್ತಿರುವ ಹಕ್ಕಿ, ಬಿಂಕಣ ಗಾಳಿಗೆ ಮಿಣ ಮಿಣ ಅರಳೋ ಹೂವು ಇವೆಲ್ಲಾ ಮುಖ್ಯ ಅನ್ನಿಸೋದೇ ಇಲ್ಲ, ಆದರೆ ಯುಗಾದಿಗೆ ಹಾಗಾ ಹೇಳಿ? ಯುಗಾದಿ ಬಂದಾಗ ಇಡೀ ಪ್ರಕೃತಿ ಸಂಭ್ರಮಿಸುತ್ತದೆ, ಹೋ ಹೋ ಅಂತ ಕೇಕೆ ಹಾಕುತ್ತದೆ, ವ್ಹಾವ್, ಅದ್ಭುತ! ಅಂತ ನಮ್ಮ ಮೈ ಮನಗಳಲ್ಲೂ ಅಚ್ಚರಿಯ ಉದ್ಗಾರ ಹೊಮ್ಮಿಸುವಂತೆ ಮಾಡಿಬಿಡುತ್ತದೆ. ಚಳಿಗಾಲದಲ್ಲಿ ಚಳುವಳಿ ಮಾಡಿ ಬಳಲಿ ಬೆಂಡಾಗಿ ಥರಥರಗುಟ್ಟುವ ಗಿಡ ಮರಗಳಲ್ಲಿ ತುಂಬಿ ಕೊಳ್ಳುವ ಅಕ್ಷಯಗಾನಕ್ಕೆ ತಲೆದೂಗಿ ವಸಂತ ಕಣ್ಣು ಹೊಡೆಯುತ್ತಾನೆ, ಮಾವಿನ ಮಿಡಿ ತುಂಬಿಕೊಂಡು, ಸ್ವಲ್ಪ ಕಾಯಿರಿ ಸಿಹಿಯಾಗುತ್ತೇನೆ ಇನ್ನೇನು ಅಂತ ಎಲೆಯ ಮರೆಯಲ್ಲಿ ಕೂ..ಕೂ.. ಹಾಕುತ್ತಾ ಆಸೆ ಹುಟ್ಟಿಸುತ್ತದೆ.

ಇಡೀ ಪ್ರಕೃತಿಯೇ ಹೀಗೆಲ್ಲಾ ಸಂಭ್ರಮಿಸೋವಾಗ ನಾವು ಅವನ್ನೆಲ್ಲಾ ಕಣ್ಣುಂಬಿಕೊಳ್ಳುತ್ತಾ ಬೇವು ಬೆಲ್ಲದ ಸ್ವಾದದಲ್ಲಿ ಕಳೆದು ಹೋಗುತ್ತಾ, ನವ ಬದುಕಿಗೆ ಚಿಗುರಾಗು ಅಂತ ವಸಂತನಲ್ಲಿ ಪ್ರಾರ್ಥಿಸುತ್ತೇವೆ. ಬೇರೆ ಯಾವ ಹಬ್ಬವೇ ಇರಲಿ ಯುಗಾದಿ ವೇಳೆಯಲ್ಲಿ ಪ್ರಕೃತಿ ಮಾತೆ ಕಾಣಿಸುವಷ್ಟು ಚಂದವಾಗಿ ಬೇರಾವ ಹಬ್ಬದ ವೇಳೆಯಲ್ಲಿಯೂ ಕಾಣಿಸಿಲಾರಳೇನೋ ಅನ್ನಿಸುತ್ತದೆ. ಯುಗಾದಿ ಹಬ್ಬಕ್ಕೆ ನಿಜವಾಗಿ ಕಿಕ್ ಕೊಡೋದೇ ಈ ಪ್ರಕೃತಿಯ ಭವ್ಯ, ನಿರಾಡಂಬರ ಚೆಲುವು, ನಿಸರ್ಗದ ಸಂದು ಸಂದುಗಳಲ್ಲೂ ಕಾಣಿಸಿಕೊಳ್ಳುವ ಜೀವೋಜ್ವಲ ಗೆಲುವು. ಪ್ರಕೃತಿಯನ್ನು ಕಣ್ಣುಂಬಿಕೊಳ್ಳುತ್ತಾ ಹೋದಂತೆ ಅಷ್ಟು ಹೊತ್ತು ನಮ್ಮಲ್ಲಿಲ್ಲದ ಅದಮ್ಯ ಲವಲವಿಕೆಯೊಂದು, ಅಷ್ಟು ಹೊತ್ತು ನೆನೆಪಿನ ಸುರಂಗವನ್ನು ಕೊರೆದೇ ಬರದಂತಹ ತಣ್ಣಗಿನ ನೆನಪೊಂದು, ಅನುಕ್ಷಣವೂ ಮಧುರ ಖುಷಿಯಲ್ಲಿ ತೇಲಾಡಿಸಿಬಿಡುವ ದಿವ್ಯ ಎಚ್ಚರವೊಂದು ಸಂಭವಿಸಿ, ಮನಸ್ಸನ್ನು ಪ್ರಸನ್ನವಾಗಿಸಿ ಅವಳಿಂದ ಚೊಚ್ಚಲ ಪ್ರೇಮ ಪತ್ರ ಪಡೆದಕ್ಕಿಂತಲೂ ಹೆಚ್ಚಿನ ರೋಮಾಂಚನವಾದರೆ ಅದು ಈ ಯುಗಾದಿಗೆ ಮಾತ್ರ. ಯುಗಾದಿ ಬಂದಾಗಲೆಲ್ಲಾ ಸಂಸ್ಕೃತ ಸುಭಾಷಿತವೊಂದು ನೆನಪಾಗಿಯೇ ಆಗುತ್ತದೆ.

ಕಾಕಃ ಕೃಷ್ಣಪಿಕಃ ಕೃಷ್ಣಃ ಕೋ ಭೇಧಃ ಪಿಕಾಯೋ ವಸಂತ ಸಮಯೇ ಪ್ರಾಪ್ತ ಕಾಕಃ ಕಾಕ ಪಿಕಃ ಪಿಕ.. 

ಇದರ ಅರ್ಥ ಇಷ್ಟೇ. ಕಾಗೆಯೂ ಕಪ್ಪು ಕೋಗಿಲೆಯೂ ಕಪ್ಪು, ಬೇರೆ ದಿನ ಕೋಗಿಲೆ ಯಾವುದು? ಕಾಗೆ ಯಾವುದು? ಅಂತ ಗೊತ್ತಾಗೋದೇ ಇಲ್ಲ. ಕೋಗಿಲೆಯ ಚಂದದ ಸ್ವರದ ಬಗ್ಗೆ ಆಗ ಯಾರಿಗೂ ತಿಳಿಯದು. ಆದರೆ ವಸಂತ ಕಾಲ ಬಂದಾಗ ಕೋಗಿಲೆ ಹಾಡು ಇಂಪಾಗಿ ಕೂ ಕೂ ಅಂತ ಕೂಜನ ಮೊಳಗಿದಾಗ ಕೋಗಿಲೆ ಯಾವುದು? ಕಾಗೆ ಯಾವುದು? ಅಂತ ಥಟ್ಟನೇ ಗೊತ್ತಾಗುತ್ತದೆ. ಆ ಕೋಗಿಲೆಯೂ ಈಗ ಕೂ ಕೂ ಅಂತ ಕೂತು ವಸಂತನ ತೆಕ್ಕೆಯಲ್ಲಿ ಕೂಗುತ್ತಿದೆ.

ನಾವು ಈ ಪ್ರಕೃತಿಗೆ ಮುಖಾಮುಖಿಯಾಗುತ್ತಾ ಆಚರಿಸುವ ಈ ಯುಗಾದಿ ನಮಗೆ ಸ್ವೀಕರಿಸುವ ಮನಸ್ಸಿದರೆ ಹೊಸತನ್ನೇನೋ ಕೊಡುತ್ತದೆ. ಕಣ್ಣಲ್ಲಿ ಕಣ್ಣಿಟ್ಟುಕೊಂಡು ಮೊರೆಯುತ್ತದೆ. ಸಣ್ಣ ಸಣ್ಣ ಚಿಗುರುಗಳನ್ನು ಹಿಡಿದು ಮುನ್ನುಗ್ಗು ಅಂತ ಸ್ಫೂರ್ತಿ ಕೊಡುತ್ತದೆ. ಆಗಲೇ ಕವಿ ಬೇಂದ್ರೆಯವರ ಸಾಲು ಕಾಡಿ ಕಾಡಿ ಬರುತ್ತಿದೆ- ಹೊಂಗೆ ಹೂವ ತೊಂಗಲಲ್ಲಿ.. ಶೃಂಗದ ಸಂಗೀತ ಕೇಲಿ.. ಮತ್ತೆ ಕೇಳಿ ಬರುತಿದೆ. ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ.. ಜೀವಕಳೆಯ ತರುತ್ತಿದೆ.

 ಚಿಗುರುತ್ತಲೇ ಇರೋಣ:

 ಚಿಗುರು ಚಿಗುರುತ್ತಲೇ ಇರಲಿ ಈಗಷ್ಟೇ ಪರಿಸರದಲ್ಲಿ ತುಂಬಿಕೊಂಡಿರುವ ಚಿಗುರನ್ನು ನಮ್ಮ ಬದುಕಿಗೆ ಸಾಂಕೇತಿಸುತ್ತಾ ಹೋಗಬೇಕು, ಸುಮ್ಮನೇ ನೀವು ಚಿಗುರಾಗಿದ್ದ ದಿನಗಳನ್ನೆಲ್ಲಾ ನೆನೆಪು ಮಾಡಿಕೊಳ್ಳಿ. ನೀವು ಹುಟ್ಟಿದ್ದು, ಓದಿದ್ದು ಆ ಮುಗ್ಧ ಬಾಲ್ಯದ ಚಿಗುರಲ್ಲಿ ಮಣ್ಣಾಟವಾಡುತ್ತಾ ಆ ಮೇಲೆ ಹಸಿರಾಗಿದ್ದು ಹೇಗೆ? ಅಂತ ನೆನಪು ಮಾಡುತ್ತಾ ಹೋಗಿ, ಅದಕ್ಕಿಂತಲೂ ಮುಖ್ಯವಾಗಿ ನೀವು ಬಾಲ್ಯದಲ್ಲಿ ಆಚರಣೆ ಮಾಡುತ್ತಿದ್ದ ಯುಗಾದಿಯ ದಿನಗಳನ್ನೊಮ್ಮೆ ಫ್ಲ್ಯಾಶ್ ಬ್ಯಾಕಿನಲ್ಲಿ ಬಿಚ್ಚಿ ನೋಡಿ, ಆ  ದಿನಗಳ ಯುಗಾದಿಗೂ, ಈ ದಿನಗಳ ಯುಗಾದಿಗೂ ಇರುವ ಸಂಭ್ರಮದ ಅಂತರವನ್ನು ಹಾಗೇ ಸುಮ್ಮನೇ ಅಳೆದು ನೋಡಿ, ಅಲ್ಲಿ ನಿಮಗೆ ಸಾಕಷ್ಟು ಬದಲಾವಣೆಗಳು ಕಾಣಿಸದೇ ಇರಲು ಸಾಧ್ಯವೇ ಇಲ್ಲ. ಒಂದಷ್ಟು ಬದಲಾವಣೆಗಳು ಆಯಾ ಕಾಲದಲ್ಲಿ ಆಗಲೇಬೇಕಾದ  ಸಹಜ ಬದಲಾವಣೆಗಳಾಗಿರಬಹುದು. ಆದರೆ ನಾವೇ ಕೆಲವೊಂದು ಸಹಜ ಹುಮ್ಮಸ್ಸುನ್ನು ಕಳೆದುಕೊಂಡು ಮಾಡಿದ ಬದಲಾವಣೆಗಳು ಕೂಡ ಅಲ್ಲಿ ಕಾಣಿಸಿದರೆ ಅದಕ್ಕೆ ನಾವೇ ಕಾರಣರು. ಹಬ್ಬದ ವಾತಾವರಣವೂ ಯಾವತ್ತೂ ಒಂದೇ ಆಗಿರುವುದಿಲ್ಲ.

ವರ್ಷಗಳು ಉರುಳಿದಂತೆ ಹಬ್ಬಗಳ ವೈವಿದ್ಯವೂ, ಹಳೆಯ ಬೇರನ್ನು ಕಳಚಿಕೊಂಡು ಹೊಸ ರೂಪ ತೊಟ್ಟುಕೊಳ್ಳುತ್ತಾ ರೂಪಾಂತರ ಹೊಂದುತ್ತವೆ. ಆದರೂ ಗ್ರಾಮೀಣ ಪ್ರದೇಶಗಳಲ್ಲಿ, ಮಲೆನಾಡಿನಲ್ಲಿ ಯುಗಾದಿಯ ಆಚರಣೆಗಳು ಅಷ್ಟೇನು ಬದಲಾಗದೇ ಇರುವುದು ಖುಷಿ ಉಕ್ಕಿಸುತ್ತದೆ. ಮತ್ತೆ ಚಿಗುರಿನ ವಿಷಯಕ್ಕೇ ಬರೋಣ.

ಚಿಗುರು ಅನ್ನೋದು ಪ್ರಗತಿಯ ಸಂಕೇತ. ಇಲ್ಲಿ ಪ್ರತೀ ಚಿಗುರು ಹೊಸ ಹೂವನ್ನೇ ಹುಟ್ಟಿಸುತ್ತದೆ. ಅದಕ್ಕೆ ನಮ್ಮ ಪ್ರತೀ ಕನಸುಗಳು ಯಾವತ್ತೂ ಚಿಗುರಾಗೇ ಇರಬೇಕು, ಚಿಗುರು ಯೋಚ(ಜ)ನೆಗಳೇ ಮುಂದಿನ ಹಾದಿಗೆ ನವಿರು. ಯಾವತ್ತೂ ಚಿಗುರಾಗೇ ಇರಬೇಕು ಅನ್ನೋ ಮಾತಿನ ಹಿಂದಿನ ಅರ್ಥ ಯಾವಾಗಲೂ ಸಣ್ಣದ್ದಾಗೇ ಇರಿ ಅಂತಲ್ಲ, ಬದುಕಿನಲ್ಲಿ ಹೆಮ್ಮರವಾಗಿ ಆಗಸದಂಚಿಗೆ ಚಾಚಿದರೂ, ನಿಮ್ಮನ್ನು ಅಷ್ಟು ಮೇಲಕ್ಕೆ ತಂದ ಬೇರಿನ ನೆನಪು, ಆ ಚಿಗುರಿನ ನೆನಪು ನಿಮ್ಮಲ್ಲಿ ಚಿರಂತನವಾಗಿರಲಿ ಅನ್ನೋದಷ್ಟೇ ಈ ಮಾತಿನ ಅರ್ಥ. ಈ ಯುಗಾದಿ ನಿಮಗೆಲ್ಲರಿಗೂ ಒಳಿತು ತರಲಿ ಖುಷಿ ನೀಡಲಿ.

ಬರಹ «ಪ್ರಸಾದ್ ಶೆಣೈ