19 ಲಕ್ಷ ವಿಡಿಯೋಗಳನ್ನು 3 ತಿಂಗಳಲ್ಲಿ ಡಿಲೀಟ್ ಮಾಡಿದ ಯೂಟ್ಯೂಬ್!

ನವದೆಹಲಿ: ಗೂಗಲ್ ಒಡೆತನದ ಯೂಟ್ಯೂಬ್ 2023 ರ ಜನವರಿ ಮತ್ತು ಮಾರ್ಚ್ ನಡುವೆ ನಿಯಮ ಉಲ್ಲಂಘನೆಗಾಗಿ ಭಾರತದಲ್ಲಿ ತನ್ನ ಪ್ಲಾಟ್​​ಫಾರ್ಮ್​ನಿಂದ 19 ಲಕ್ಷಕ್ಕೂ ಹೆಚ್ಚು ವಿಡಿಯೋಗಳನ್ನು ತೆಗೆದುಹಾಕಿದೆ. ಅದೇ ರೀತಿ ಜಾಗತಿಕವಾಗಿ ಯೂಟ್ಯೂಬ್ 64.8 ಲಕ್ಷ ವಿಡಿಯೋಗಳನ್ನು ತೆಗೆದುಹಾಕಿದೆ.

ಹಗರಣಗಳು, ದಾರಿತಪ್ಪಿಸುವ ಮೆಟಾಡೇಟಾ ಅಥವಾ ಥಂಬ್​​ನೇಲ್​ಗಳು ಮತ್ತು ವಿಡಿಯೋ ಮತ್ತು ಕಾಮೆಂಟ್​ಗಳ ಸ್ಪ್ಯಾಮ್ ಸೇರಿದಂತೆ ಯೂಟ್ಯೂಬ್​ನ ಸ್ಪ್ಯಾಮ್ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ 87 ಲಕ್ಷಕ್ಕೂ ಹೆಚ್ಚು ಚಾನೆಲ್​ಗಳನ್ನು ಕಂಪನಿಯು ಇದೇ ಅವಧಿಯಲ್ಲಿ ತೆಗೆದುಹಾಕಿದೆ.ಈ ವರ್ಷದ ಆರಂಭದ ಮೂರು ತಿಂಗಳಲ್ಲಿ ಯೂಟ್ಯೂಬ್​ ತನ್ನ ಪ್ಲಾಟ್​ಪಾರ್ಮ್​ನಿಂದ 64 ಲಕ್ಷ ವಿಡಿಯೋಗಳನ್ನು ಡಿಲೀಟ್ ಮಾಡಿದೆ.

ಕಂಪನಿಯ ಪ್ರಕಾರ ಯೂಟ್ಯೂಬ್ ತೆಗೆದುಹಾಕಿದ ಶೇಕಡಾ 93 ಕ್ಕೂ ಹೆಚ್ಚು ವಿಡಿಯೋಗಳನ್ನು ಮಾನವರಿಗಿಂತ ಮೊದಲು ತಂತ್ರಜ್ಞಾನವೇ ಕಂಡುಹಿಡಿದಿದೆ. ತಂತ್ರಜ್ಞಾನದಿಂದ ಪತ್ತೆ ಮಾಡಲಾದ ವಿಡಿಯೋಗಳ ಪೈಕಿ 38 ಪ್ರತಿಶತದಷ್ಟು ವೀಡಿಯೊಗಳು ಒಂದೇ ಒಂದು ವೀಕ್ಷಣೆ ಪಡೆಯುವ ಮೊದಲೇ ತೆಗೆದುಹಾಕಲಾಗಿದೆ ಮತ್ತು ಒಂದರಿಂದ ಹತ್ತು ವೀಕ್ಷಣೆ ಪಡೆಯುವ ಮುನ್ನ 31 ಪ್ರತಿಶತದಷ್ಟು ವಿಡಿಯೋಗಳನ್ನು ತೆಗೆದುಹಾಕಲಾಗಿದೆ. ಅಂದರೆ ತಂತ್ರಜ್ಞಾನದಿಂದ ಮೊದಲಿಗೆ ಪತ್ತೆಯಾದ 69 ಪ್ರತಿಶತದಷ್ಟು ವೀಡಿಯೊಗಳು ಯೂಟ್ಯೂಬ್​ನಿಂದ ತೆಗೆದುಹಾಕುವ ಮೊದಲು 10 ಕ್ಕಿಂತ ಕಡಿಮೆ ವೀಕ್ಷಣೆಗಳನ್ನು ಪಡೆದಿದ್ದವು.

“ಇಂದಿನಿಂದ ಕಂಟೆಂಟ್​ ಕ್ರಿಯೇಟರ್​​ಗಳು ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಬಗ್ಗೆ ಎಚ್ಚರಿಕೆಯ ಸಂದೇಶ ಪಡೆದಾಗ ಅವರು ಶೈಕ್ಷಣಿಕ ತರಬೇತಿ ಕೋರ್ಸ್ ನೋಡುವ ಆಯ್ಕೆಯನ್ನು ಹೊಂದಿರುತ್ತಾರೆ. ಭವಿಷ್ಯದಲ್ಲಿ ನಮ್ಮ ನೀತಿಗಳನ್ನು ಉಲ್ಲಂಘಿಸುವ ಕಂಟೆಂಟ್​ ಅನ್ನು ಅಪ್ಲೋಡ್ ಮಾಡುವುದನ್ನು ಹೇಗೆ ತಪ್ಪಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಕ್ರಿಯೇಟರ್​ಗಳಿಗೆ ಈ ತರಬೇತಿ ವಿಡಿಯೋಗಳು ಹೊಸ ಮಾರ್ಗಗಳನ್ನು ಒದಗಿಸುತ್ತವೆ” ಎಂದು ಯೂಟ್ಯೂಬ್ ಹೇಳಿದೆ.

2019 ರಲ್ಲಿ ಯೂಟ್ಯೂಬ್ ಮೊದಲ ಬಾರಿ ನಿಯಮ ಉಲ್ಲಂಘಿಸುವವರಿಗೆ ಒಂದು ಬಾರಿ ಎಚ್ಚರಿಕೆ ನೀಡುವ ಪರಿಪಾಠ ಆರಂಭಿಸಿತ್ತು. ಯೂಟ್ಯೂಬ್​ ಮುಂದಿನ ಕ್ರಮ ಕೈಗೊಳ್ಳುವ ಮೊದಲು ತಾವೇನು ತಪ್ಪು ಮಾಡಿದ್ದೇವೆ ಎಂಬುದನ್ನು ಪರಿಶೀಲಿಸಲು ಕಂಟೆಂಟ್​ ಕ್ರಿಯೇಟರ್​ಗಳಿಗೆ ಈ ಮೂಲಕ ಒಂದು ಅವಕಾಶ ನೀಡಲಾಗಿತ್ತು. ಇದರ ಪರಿಣಾಮವಾಗಿ ಎಚ್ಚರಿಕೆಯ ಸಂದೇಶ ಪಡೆದ ಶೇಕಡಾ 80 ಕ್ಕೂ ಹೆಚ್ಚು ಕಂಟೆಂಟ್​​ ಕ್ರಿಯೇಟರ್​​ಗಳು ಮತ್ತೊಮ್ಮೆ ಕಂಪನಿಯ ನಿಯಮಗಳನ್ನು ಉಲ್ಲಂಘಿಸುತ್ತಿಲ್ಲ ಎಂದು ಕಂಪನಿ ಹೇಳಿದೆ.

ಇದರ ಜೊತೆಗೆ ಕಂಪನಿ 85.3 ಲಕ್ಷಕ್ಕೂ ಹೆಚ್ಚು ಕಾಮೆಂಟ್​ಗಳನ್ನು ಸಹ ತೆಗೆದುಹಾಕಿದೆ. ಇದರಲ್ಲಿ ಹೆಚ್ಚಿನವು ಸ್ಪ್ಯಾಮ್ ಆಗಿವೆ. ತೆಗೆದುಹಾಕಿದ ಕಾಮೆಂಟ್‌ಗಳಲ್ಲಿ ಶೇಕಡಾ 99 ಕ್ಕಿಂತ ಹೆಚ್ಚು ಸ್ವಯಂಚಾಲಿತವಾಗಿ ಪತ್ತೆಯಾಗಿವೆ. “ಕಳೆದ ಹಲವಾರು ವರ್ಷಗಳಿಂದ ಯೂಟ್ಯೂಬ್ ಸಮುದಾಯದ ಸುರಕ್ಷತೆಗಾಗಿ ಅಗತ್ಯ ನೀತಿಗಳು ಮತ್ತು ಉತ್ಪನ್ನಗಳನ್ನು ರೂಪಿಸಲು ಭಾರಿ ಹೂಡಿಕೆ ಮಾಡಿದೆ. ಇಂದು, ಬಹುಪಾಲು ಕಂಟೆಂಟ್​ ಕ್ರಿಯೇಟರ್​ಗಳು ಸದುದ್ದೇಶದಿಂದ ಕಂಟೆಂಟ್​ಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ ಮತ್ತು ಅವರು ನಮ್ಮ ನೀತಿಗಳನ್ನು ಉಲ್ಲಂಘಿಸುತ್ತಿಲ್ಲ. ನಮ್ಮ ನೀತಿಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವ ಕಂಟೆಂಟ್​​ ಕ್ರಿಯೇಟರ್​ಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಅವರಿಗೆ ತಿಳುವಳಿಕೆ ಮೂಡಿಸುವ ನಮ್ಮ ಪ್ರಯತ್ನಗಳು ಯಶಸ್ವಿಯಾಗುತ್ತವೆ ಎಂದು ನಾವು ನಂಬುತ್ತೇವೆ” ಎಂದು ಯೂಟ್ಯೂಬ್ ಬುಧವಾರ ಹೇಳಿದೆ.