ಬ್ರಹ್ಮಾವರ: ಸ.ಪ.ಪೂ ಕಾಲೇಜು ಎನ್.ಎಸ್.ಎಸ್ ವತಿಯಿಂದ ಯುವ ಸ್ಪಂದನ ಕಾರ್ಯಕ್ರಮ

ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಸರಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ “ಎನ್ ಎಸ್ ಎಸ್ ಯುವಸ್ಪಂದನ ” ಕಾರ್ಯಕ್ರಮದ ಅಡಿಯಲ್ಲಿ “ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿಗಳು” ಎಂಬ ವಿಚಾರವಾಗಿ ವಿಶೇಷ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಬ್ರಹ್ಮಾವರ ತಾಲೂಕಿನ ತಹಸೀಲ್ದಾರ್ ರಾಜಶೇಖರ ಮೂರ್ತಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ತಮ್ಮ ಪರಿಚಯದೊಂದಿಗೆ ತಮ್ಮ ಜೀವನದ ಗುರಿ ಮತ್ತು ತಮ್ಮ ಜೀವನದ ಪ್ರೇರಕ ಶಕ್ತಿಗಳಾದ ಆದರ್ಶ ವ್ಯಕ್ತಿಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ವಿದ್ಯಾರ್ಥಿಗಳ ವೈಯಕ್ತಿಕ ಮತ್ತು ಸಾಮಾಜಿಕ ಹೊಣೆಗಾರಿಕೆಗಳ ಬಗ್ಗೆ ತಿಳಿಸುತ್ತಾ ಹೆತ್ತವರ ಹಿತವಚನಗಳನ್ನು ಪಾಲಿಸಿ ಗುರುಗಳ ಮಾರ್ಗದರ್ಶನದಲ್ಲಿ ಮುಂದಡಿಯಿಟ್ಟಾಗ ಸಮಾಜಕ್ಕೆ ಕೊಡುಗೆಯಾಗುವಿರಿ ಎಂದರು.

ಎನ್ ಎಸ್ ಎಸ್ ಕೋಶದ ಮಂಗಳೂರು ವಿಭಾಗಾಧಿಕಾರಿ ಹಾಗೂ ಸ ಪ ಪೂ ಕಾಲೇಜು ಬ್ರಹ್ಮಾವರದ ಎನ್ ಎಸ್ ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಸವಿತಾ ಎರ್ಮಾಳ್ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡಲ್ಲಿ ಕೌಟುಂಬಿಕ ಕಳಕಳಿಯೊಂದಿಗೆ ಸಮಾಜದ ಆಸ್ತಿಯಾಗುವುದರಲ್ಲಿ ಸಂಶಯವಿಲ್ಲ ಎಂದರು.

ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲ ರವೀಂದ್ರ ಉಪಾಧ್ಯ ಮಾತನಾಡಿ ಸಮಾಜದ ಪ್ರತೀ ವ್ಯಕ್ತಿಗೂ ಹೊಣೆಗಾರಿಕೆಯಿದೆ. ಶಿಸ್ತಿನ ನಡವಳಿಕೆಯಿಂದ ವಿದ್ಯಾರ್ಥಿ ಜೀವನ ಸಫಲವಾಗುವುದು. ಆಗ ಮಾತ್ರ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯವೆಂದರು.

ಎನ್ ಎಸ್ ಎಸ್ ನಾಯಕ ದ್ವಿತೀಯ ವಾಣಿಜ್ಯ ವಿಭಾಗದ ಕೀರ್ತನ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

ಮಂಜುಳ , ರಾಜೇಶ್ವರಿ, ಮೇಘ, ಪವಿತ್ರ ಇವರು ಎನ್ ಎಸ್ ಎಸ್ ಗೀತೆ ಹಾಡಿದರು. ದ್ವಿತೀಯ ವಾಣಿಜ್ಯ ವಿಭಾಗದ ರಾಜೇಶ್ವರಿ ಸ್ವಾಗತಿಸಿದರು. ಪ್ರಥಮ ಕಲಾ ವಿಭಾಗದ ವೈಷ್ಣವಿ ವಂದಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.