ಸಾಂತಾಕ್ಲಾಸ್ ವೇಷ ಧರಿಸಿ ಕಾಂತಾರ ಪಂಜುರ್ಲಿ ಆವೇಷದ ಅಣಕು: ಸಾರ್ವಜನಿಕರಿಂದ ಆಕ್ರೋಶ

ಉಡುಪಿ: ಕ್ರಿಸ್ಮಸ್ ಹಿನ್ನಲೆಯಲ್ಲಿ ಸಾಂತಾಕ್ಲಾಸ್ ವೇಷದಲ್ಲಿ ಮನೆಮನೆಗೆ ಭೇಟಿ ನೀಡಿ ಉಡುಗೊರೆಗಳನ್ನು ನೀಡುವುದು ಹಿಂದಿನ ಕಾಲದಿಂದಲೂ ವಾಡಿಕೆ. ಟರ್ಕಿಯ ಸೇಂಟ್ ನಿಕೋಲಸ್ ಎನ್ನುವ ಪಾದ್ರಿಯೊಬ್ಬರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ ಉಡುಗೊರೆಗಳನ್ನು ನೀಡುತ್ತಿದ್ದು ಅವರ ಹೆಸರು ನೆದರ್ಲ್ಯಾಂಡ್ಸ್ ದೇಶದಲ್ಲಿ ಸಿಂಟರ್ಕ್ಲಾಸ್ ಎಂದು ಅಪಭ್ರಂಶವಾಗಿ ಮುಂದೆ ಅಮೇರಿಕಾ ಮತ್ತು ಯೂರೋಪ್ ಗಳಲ್ಲಿ ಸಾಂಟಾಕ್ಲಾಸ್ ಎಂದು ಕರೆಯಲ್ಪಟ್ಟು ವಿಶ್ವಾದ್ಯಂತ ಪ್ರಸಿದ್ದವಾಯಿತು. ಸೇಂಟ್ ನಿಕೋಲಸ್ ನೆನಪಿಗಾಗಿ ಕ್ರಿಸ್ ಮಸ್ ಹಬ್ಬದಂದು ಸಾಂಟಾಕ್ಲಾಸ್ ವೇಷ ಧರಿಸಿ ಉಡುಗೊರೆ ನೀಡುವುದು ಎಲ್ಲೆಲ್ಲೂ ನಡೆಯುತ್ತಿದೆ.

13th century icon of St Nicholas
Image: The Cultural Tutor

ಆದರೆ ಈ ಬಾರಿ ವ್ಯಕ್ತಿಯೋರ್ವ ಸಾಂಟಾಕ್ಲಾಸ್ ವೇಷ ಧರಿಸಿ ಕಾಂತಾರ ಚಿತ್ರದಲ್ಲಿನ ಕೊನೆಯ ದೃಶ್ಯದಲ್ಲಿ ಪಂಜುರ್ಲಿ ಆವೇಶವಾಗುವ ರೀತಿಯನ್ನು ಅಣಕವಾಡುವ ರೀತಿಯಲ್ಲಿ ಪ್ರದರ್ಶಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಸಾಂಟಾಕ್ಲಾಸ್ ಮತ್ತು ಪಂಜುರ್ಲಿ ದೈವ ಎರಡಕ್ಕೂ ಮಾಡುವ ಅಪಮಾನವೆಂದು ನೆಟ್ಟಿಗರು ಕಿಡಿಕಾರಿದ್ದಾರೆ.

ತುಳುನಾಡಿನಲ್ಲಿ ಭೂತಾರಾಧನೆ ಮತ್ತು ದೈವಾರಾಧನೆಯ ಬಗ್ಗೆ ಅಪಾರವಾದ ನಂಬಿಕೆ ಇದ್ದು, ಪಂಜುರ್ಲಿ ದೈವದ ಆವೇಶವನ್ನು ಮೋಜಿಗಾಗಿ ಅಣಕವಾಡುವ ರೀತಿಯಲ್ಲಿ ದುರ್ವರ್ತಿಸಿರುವುದು ಈ ಪದ್ದತಿಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿರುವ ತುಳುವರ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎನ್ನುವುದು ಈ ಆಕ್ರೋಶಕ್ಕೆ ಕಾರಣ. ಈ ರೀತಿ ದುರ್ವರ್ತನೆ ತೋರಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆಗ್ರಹ ಕೇಳಿಬಂದಿದೆ.