ಉಡುಪಿ: ಪಂಜಿಮಾರು- ಶಿರ್ವ-ಪಿಲಾರುಕಾನ ರಸ್ತೆಯ ದುರಸ್ತಿಗೆ ಆಗ್ರಹಿಸಿ ಯುವ ಕಾಂಗ್ರೆಸ್ ಸಮಿತಿ ಶಿರ್ವ ವತಿಯಿಂದ ಶಿರ್ವ ನ್ಯಾರ್ಮ ಸೇತುವೆ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ತಾಪಂ ಸದಸ್ಯ ಮೈಕಲ್ ರಮೇಶ್ ಡಿಸೋಜ ಮಾತನಾಡಿ, ಶಾಸಕರು ತಮ್ಮ ಕಾರ್ಯಕರ್ತರ ಮನೆಗಳಿಗೆ ರಸ್ತೆ ಮಾಡುವುದನ್ನು ಬಿಟ್ಟು ಸಾರ್ವಜನಿಕರಿಗೆ ರಸ್ತೆಯನ್ನು ಮಾಡಿಕೊಡಿ ಎಂದು ಕಿಡಿಕಾರಿದರು.

ಕಾಂಗ್ರೆಸ್ ಕಾಪು ಬ್ಲಾಕ್ ಅಧ್ಯಕ್ಷ ವೈ. ಸುಕುಮಾರ್ ಮಾತನಾಡಿ, ಪ್ರತಿಭಟನೆಯ ಫಲವಾಗಿ ಪಂಜಿಮಾರಿನಲ್ಲಿ ಹೊಂಡಗಳಿಗೆ ವೆಟ್ ಮಿಕ್ಸ್ ಹಾಕುವ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಆದರೆ ನಮಗೆ ಅದು ಬೇಡ ನಮಗೆ ರಸ್ತೆ ದುರಸ್ತಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಮಾಜಿ ಜಿಪಂ ಸದಸ್ಯ ವಿಲ್ಸನ್ ರೊಡ್ರಿಗಸ್ ಮಾತನಾಡಿ, ಕಾಪು ಶಾಸಕರು ಅನುದಾನವನ್ನು ತರಿಸಿ ಕೆಲಸ ಕಾರ್ಯಗಳನ್ನು ಮಾಡಬೇಕು. ಅನುದಾನ ಸಿಗದಿದ್ದಲ್ಲಿ, ವಿಧಾನಸಭೆಯಲ್ಲಿ ಧರಣಿ ಕುಳಿತುಕೊಂಡು ಅನುದಾನ ತರಿಸಿ ರಸ್ತೆಯನ್ನು ದುರಸ್ತಿ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಕೆಲಕಾಲ ಪ್ರತಿಭಟನಾಕಾರರು ರಸ್ತೆಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಪ್ರತಿಭಟನಕಾರರನ್ನು ಸಮಾಧಾನಪಡಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಸ್ಥಳಕ್ಕೆ ಆಗಮಿಸಿದ PWD ಇಂಜಿನಿಯರ್ ಮಂಜುನಾಥ್ ಅವರು ಪ್ರತಿಭಟನಕಾರರ ಮನವಿಯನ್ನು ಸ್ವೀಕರಿಸಿ ಮಾತನಾಡಿ, ಇಲಾಖೆಯಿಂದ 8 ಕೋಟಿ ರೂ. ವೆಚ್ಚದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಕಾಮಗಾರಿ ಮಾಡಿದ್ದೇವೆ. ಮುಖ್ಯವಾಗಿ ರಸ್ತೆಯ ಇಕ್ಕೆಲಗಳಲ್ಲಿ ಇರುವ ನೀರಿನ ಚರಂಡಿಯನ್ನು ದುರಸ್ತಿ ಮಾಡುವುದರ ಜೊತೆಗೆ ಹೊಂಡಗಳನ್ನು ಒಂದು ವಾರದೊಳಗೆ ತೇಪೆಹಾಕಿ ಮುಚ್ಚಲಾಗುವುದು. ಅಕ್ಟೋಬರ್ ನಲ್ಲಿ ಡಾಂಬಾರು ಹಾಕಿ ರಸ್ತೆಯನ್ನು ದುರಸ್ತಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶರ್ಪುದ್ದೀನ್ ಶೇಕ್, ಹಸನಬ್ಬ ಶೇಕ್, ರತನ್ ಶೆಟ್ಟಿ, ರಮೇಶ್ ಬಂಗೇರ, ವಿಲ್ಸನ್ ರೊಡ್ರಿಗಸ್, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗೀತಾ ವಾಗ್ಳೆ, ಗ್ರೇಸಿ ಕಾರ್ಡೊಜಾ, ಗ್ಲಾಡಿಸ್ ಅಲ್ಮೇಡಾ, ಜುಬೇರ್ ಅಲಿ, ಹಸನ್ ಇಬ್ರಾಹಿಂ, ಜೈನುದ್ದೀನ್, ಆಶಾ ಅಂಚನ್, ಶಿರ್ವ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಕೀರ್ತನ್ ಪೂಜಾರಿ, ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ನಿಯಾಜ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕೋಟ್ಯಾನ್, ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ಲತೀಫ್, ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಹಾದ್, ಅರುಣ್ ಪೂಜಾರಿ, ಅಜಯ್ ಪೂಜಾರಿ, ಶಿರ್ವ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಮೆಲ್ವಿನ್ ಡಿಸೋಜ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.













