ರಂಗದಲ್ಲೂ ಕುಣಿತಾರೆ, ಕೊಳಲೂ ನುಡಿಸ್ತಾರೆ ಈ ಯುವತಾರೆ: ಪ್ರತಿಭೆಗಳ ಬಹುಮುಖಿ ಉಡುಪಿಯ ಚಿರಶ್ರೀ ಕತೆ ಕೇಳಿ

ಇದು UDUPI XPRESS”ಬಣ್ಣದ ಕನಸುಗಾರರು” ಸರಣಿಯ 5 ನೇ ಕಂತು. ಈ ಸರಣಿಯಲ್ಲಿ  ನಮ್ಮ ನಡುವಿನ ಯುವ ಕಲಾವಿದರ ಬಗ್ಗೆ ಗಣಪತಿ ದಿವಾಣ ಬರೆಯುತ್ತಾರೆ. ಇಲ್ಲಿ ಬರುವ ಕಲಾವಿದರು  ನಿಮ್ಮ ಬದುಕಿಗೂ ಸ್ಪೂರ್ತಿಯಾಗುತ್ತಾರೆ, ಯುವ ಪ್ರತಿಭೆಗಳನ್ನು ಪರಿಚಯಿಸುವ ಈ ಸರಣಿ ನಿಮಗಿಷ್ಟವಾದೀತು ಎನ್ನುವುದು ನಮ್ಮ ನಂಬಿಕೆ. ನಿಮ್ಮ ಸುತ್ತ-ಮುತ್ತ ಇಂತಹ ಯುವಪ್ರತಿಭೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ.ಈ ಸಂಚಿಕೆಯಲ್ಲಿ ಉಡುಪಿ, ಗುಂಡಿಬೈಲಿನ ಚಿರಶ್ರೀ ಕತೆ ಹೇಳ್ತೀವಿ

ಒಂದು ಕಲೆ, ಒಂದು ಕಲಿಕೆ, ಒಂದೇ ಆಸಕ್ತಿ. ಉಹ್ಞು. ಇಲ್ಲಿ ಹಾಗಲ್ಲ.‌ ಚಿತ್ರಕಲೆಯಲ್ಲಿ ವಿಶೇಷ ಸಾಮರ್ಥ್ಯ, ಕರಕುಶಲ ಕಲೆಯ ತಿಳಿವು, ಯಕ್ಷಗಾನದಲ್ಲಿ ಖಳಪಾತ್ರದ ಆಸೆ, ಭರತನಾಟ್ಯದಲ್ಲಿ ಹಲವು ಪ್ರದರ್ಶನಗಳು, ಕೊಳಲು ವಾದನದ ಅಭ್ಯಾಸ, ಇವೆಲ್ಲದರ ಜೊತೆಗೆ ಕಲಿಕೆಯಲ್ಲೂ ಮುಂದು. ಹೀಗೆ ಬಹುಮುಖ ಪ್ರತಿಭೆ ಹೊಂದಿರುವ ಯುವ ಕನಸುಗಾರ ನಮ್ಮ ಉಡುಪಿ, ಗುಂಡಿಬೈಲಿನ ಚಿರಶ್ರೀ.

ತನ್ನ ಬಹುಮುಖ ಪ್ರತಿಭೆಯ ಕಾರಣದಿಂದ, ಎನ್.ಎಸ್.ಎಸ್. ಮೂಲಕ ದೆಹಲಿಯ ರಿಪಬ್ಲಿಕ್ ಡೇ ಪರೇಡ್ ನಲ್ಲಿ ಭಾಗವಹಿಸಿದ ಯುವಸಾಧಕಿಯ ಕತೆಯನ್ನು ಇಂದಿನ “ಬಣ್ಣದ ಕನಸುಗಾರರು”ಸಂಚಿಕೆಯಲ್ಲಿ ಹೇಳ್ತೇವೆ.

ಈ ಯುವತಿ ರಂಗದಲ್ಲೂ ಕುಣಿತಾರೆ, ಕೊಳಲೂ ನುಡಿಸ್ತಾರೆ , ಚಿತ್ರಕಲೆಯಲ್ಲೂ ಅಪ್ಪಿಕೊಂಡು ಕನಸು ಕಾಣ್ತಾರೆ. ಹೌದು ಉಡುಪಿಯ ಚಿರಶ್ರೀಗೆ ಎಲ್ಲಾ ಫ್ರತಿಭೆಗಳೂ ಇವೆ.

ಪ್ರತಿಭೆಗಳ ಬಹುಮುಖಿ:
ಚಿತ್ರಕಲೆ, ಯಕ್ಷಗಾನ, ಭರತನಾಟ್ಯ, ಕೊಳಲು, ಕರಕುಶಲ ಕಲೆಯಲ್ಲಿ ಚಿರಶ್ರೀಗೆ ಆಸಕ್ತಿ. ಒಂದರಿಂದ ಏಳನೇ ತರಗತಿಯವರೆಗೆ ಶಾಸ್ತ್ರೀಯವಾಗಿ ಭರತನಾಟ್ಯ ಕಲಿತು, ಜ್ಯೂನಿಯರ್ ವಿಭಾಗ ಪೂರೈಸಿ, ಹಲವೆಡೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಎಂಟನೇ ತರಗತಿಯಿಂದ ಯಕ್ಷಗಾನ ಕಲಿಕೆ ಆರಂಭಿಸಿದ್ದಾರೆ. ಖಳನಾಯಕನ ಪಾತ್ರಗಳು ಇವರಿಗಿಷ್ಟ.  ಕಂಸ, ಭಸ್ಮಾಸುರ, ದುರ್ಜಯಾಸುರ ಪಾತ್ರಗಳನ್ನು ಮಾಡಿದ ಇವರಿಗೆ ಯಕ್ಷ ರಂಗವೂ ಅಚ್ಚುಮೆಚ್ಚು.

ರಾಜ್ ಪಥ್ ಪಥಸಂಚಲನದ ಸಾಧನೆ :
ಚಿರಶ್ರೀ, 2019 ಜನವರಿ 26ರಂದು, ದೆಹಲಿಯ ರಾಜ್ ಪಥ್ ನಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದಾರೆ. ಪ್ರಧಾನಮಂತ್ರಿ ಅವರ ಸಾಂಸ್ಕೃತಿಕ ಕಾರ್ಯಕ್ರಮದ ತಂಡಕ್ಕೆ, ದೇಶದ 250+ ವಿದ್ಯಾರ್ಥಿಗಳ ಪೈಕಿ 15 ಮಂದಿಯ ತಂಡ ಮಾಡಲಾಗಿತ್ತು. ಆ ತಂಡದಲ್ಲಿ ಚಿರಶ್ರೀ ಕೂಡ ಒಬ್ಬರಾಗಿದ್ದರು.

ಚಿತ್ರಕಲೆ ಅಂದ್ರೆ ಸ್ಪೂರ್ತಿಯ ಸೆಲೆ:
“ಚಿತ್ರಕಲೆಯ ಆಸಕ್ತಿ ಬಾಲ್ಯದಿಂದಲೇ ಇತ್ತು. ಮನೆಯ ಗೋಡೆಯ ಮೇಲೆಲ್ಲಾ ಗೀಚುತ್ತಿದ್ದೆ. ಅದನ್ನು ಕಂಡು ನಮ್ಮ ನೆರೆಮನೆಯ ಶಿಕ್ಷಕರೊಬ್ಬರು ಡ್ರಾಯಿಂಗ್ ಪುಸ್ತಕ, ಕ್ರಯಾನ್ಸ್ ಕೊಟ್ಟರು. ಅಂದಿನಿಂದ ಚಿತ್ರಕಲೆಯಲ್ಲಿ ಹೊಸ ಖುಷಿ ಮತ್ತು ಕಲಿಕೆ ಆರಂಭವಾಯಿತು. ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣದ ಹಂತದಲ್ಲಿ ಚಿತ್ರಗಳನ್ನು ಬಿಡಿಸುತ್ತಿದ್ದೆ. ಚಿತ್ರಕಲಾ ಸ್ಪರ್ಧೆಗಳಲ್ಲೂ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದೆ. ಕಾಲೇಜು ಕಲಿಯುತ್ತಿರುವಾಗ ಈ ಅಭ್ಯಾಸ ಸ್ವಲ್ಪ ನಿಂತಂತಾಗಿತ್ತು. ಡಿಗ್ರಿಗೆ ಬಂದಮೇಲೆ ಚಿತ್ರಕಲೆ ಮತ್ತೆ ಆರಂಭಿಸಿದೆ” ಎನ್ನುವ ಚಿರಶ್ರೀಗೆ ಹಲವು ಕಲೆಗಳ ಆಸಕ್ತಿ ಮತ್ತು ಕಲಿಕೆ ಇದ್ದರೂ  ಚಿತ್ರಕಲೆಗೆ ವಿಶೇಷ ಸಾಮರ್ಥ್ಯವಿದೆ.

“ಅಪ್ಪ ಮತ್ತು ದೊಡ್ಡಪ್ಪನ ಸಹಾಯದಿಂದ, ಹಿರಿಯ ಕಲಾವಿದ ಪಿ.ಎನ್. ಆಚಾರ್ಯ ಅವರನ್ನು ಭೇಟಿ ಮಾಡಿ, ಅವರಿಂದ ಚಿತ್ರಕಲೆಯ ಬಗ್ಗೆ ಮಾಹಿತಿ, ಮಾರ್ಗದರ್ಶನ ಪಡೆದುಕೊಳ್ಳುವಂತಾಯಿತು. ಅದೇ ರೀತಿ ಚಿತ್ರ ಕಲಾವಿದ ವಸಂತ್ ಎಂಬವರು ಒಂದಷ್ಟು ಫೊಟೊಗ್ರಾಫ್ ಗಳನ್ನು ನೀಡಿ ಅದನ್ನು ಬಿಡಿಸುವಂತೆ ಸೂಚಿಸಿದರು. ಅವುಗಳನ್ನು ಪ್ರಯತ್ನಿಸುತ್ತಾ ಮತ್ತಷ್ಟು ಕಲಿತೆ.

ರಜೆಯ ಸಂದರ್ಭದಲ್ಲಿ ಈ ಚಿತ್ರಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡೆ. ಅಲ್ಲಿ ಸಿಕ್ಕಿದ ಪ್ರೋತ್ಸಾಹವನ್ನೂ ನೆನಪಿಸಿಕೊಳ್ಳಬೇಕು. ಹಲವರು ತಮ್ಮ ಪೋರ್ಟ್ರೈಟ್ ಗಳನ್ನು ಬಿಡಿಸಲು ಕೇಳಿಕೊಂಡಿದ್ದಿದೆ. ಹುಟ್ಟುಹಬ್ಬದ ಉಡುಗೊರೆಗಾಗಿ, ಇನ್ನಿತರ ಸಂದರ್ಭಗಳಲ್ಲಿ ಚಿತ್ರ ಬಿಡಿಸಿ ಕೊಟ್ಟಿದ್ದೇನೆ. ಸಂಭಾವನೆ ಪಡೆದು ಚಿತ್ರ ಬಿಡಿಸಿಕೊಟ್ಟದ್ದಿದೆ. ಹೀಗೆ ಚಿತ್ರಕಲೆ ಹವ್ಯಾಸವಾಗಿ, ಅದಕ್ಕೂ ಹೆಚ್ಚಾಗಿ ಬೆಳೆದಿದೆ” ಎಂದು ಆರಂಭ ಮತ್ತು ಬೆಳವಣಿಗೆಯನ್ನು ನೆನಪಿಸಿಕೊಳ್ಳುತ್ತಾರೆ.

   

ಚಿತ್ರಕಲೆಯನ್ನು ವಿಭಿನ್ನವಾಗಿ ಪ್ರಯೋಗಿಸಲು ಸದಾ ಪ್ರಯತ್ನಶೀಲರಾಗಿರುವ ಅವರು, “ನಾನು ಚಿತ್ರಗಳನ್ನು ಬರೀ ಪುಸ್ತಕ, ಹಾಳೆಯಲ್ಲಿ ಬಿಡಿಸಲು ಸೀಮಿತಗೊಳಿಸಿಲ್ಲ. ಶಾಲಾ ಕಾಲೇಜುಗಳಲ್ಲಿ ಸ್ಟೇಜ್ ಸೆಟ್ಟಿಂಗ್ಸ್, ಡೆಕೋರೇಶನ್ ಗೆ ನನ್ನ ಕಲೆಯನ್ನು ಬಳಸಿಕೊಂಡಿದ್ದೇನೆ. ನಾನು ಎನ್.ಎಸ್.ಎಸ್. ಕಾರ್ಯಕರ್ತೆ ಕೂಡ ಆಗಿರುವುದರಿಂದ ಉಡುಪಿ, ಅಲೆವೂರಿನಲ್ಲಿ ನಡೆದ ಕ್ಯಾಂಪ್ ಸಂದರ್ಭ ಅಲ್ಲಿನ ಬಸ್ ನಿಲ್ದಾಣಗಳಲ್ಲಿ ಸಾಮಾಜಿಕ ಕಳಕಳಿಯ ಚಿತ್ರಗಳನ್ನು ಬಿಡಿಸಿದ್ದೇನೆ. ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ನೇತೃತ್ವದಲ್ಲಿ, ಕ್ಯಾನ್ಸರ್ ಪೀಡಿತರಿಗೆ ಸಹಾಯ ಮಾಡುವ ಸಲುವಾಗಿ ಚಿತ್ರಸಂತೆ ಏರ್ಪಡಿಸಿದ್ದೆವು. ಗೆಳೆಯರು ಸೇರಿಕೊಂಡು ಚಿತ್ರ ಪ್ರದರ್ಶನವನ್ನು ಮಾಡಿದ್ದೆವು. ಸ್ಪಾಟ್ ಪೈಂಟಿಂಗ್ ಕೂಡ ಮಾಡಿದ್ದೇನೆ” ಎಂದು ಹೇಳುತ್ತಾರೆ.

ಈ ಎಲ್ಲಾ‌ ಸಾಧನೆಗಳಿಗೆ ಚಿರಶ್ರೀ ಅವರಿಗೆ ಪಡು ಕುತ್ಯಾರು ಶಾರದಾ ಪೀಠದಲ್ಲಿ ಸನ್ಮಾನ ಲಭಿಸಿದೆ. ಕಾಲೇಜು ಮತ್ತು ಯುನಿವರ್ಸಿಟಿ ಕಾಲೇಜು ಹಂಪನಕಟ್ಟ ಇಲ್ಲಿ ಗೌರವ ಪುರಸ್ಕಾರ ದೊರೆತಿದೆ.
ಸರ್ಕಾರಿ ಪದವಿಪೂರ್ವ ಕಾಲೇಜು ಶಂಕರನಾರಾಯಣ ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಎನ್.ಎಸ್.ಎಸ್.‌ ಕ್ಯಾಂಪ್ ಗೆ ಟ್ರೈನರ್ ಆಗಿ ಭಾಗವಹಿಸಿದ್ದಾರೆ.

ಚಿರಶ್ರೀ ಪ್ರಸ್ತುತ ಎಂಜಿಎಂ ಕಾಲೇಜಿನಲ್ಲಿ ಅಂತಿಮ ಬಿಸಿಎ ಅಧ್ಯಯನ ನಡೆಸುತ್ತಿದ್ದಾರೆ. ಈಗಾಗಲೇ ಕ್ಯಾಂಪಸ್ ಆಯ್ಕೆ ಪ್ರಕ್ರಿಯೆಯಲ್ಲಿ ಐಟಿ ಕ್ಷೇತ್ರದ ಉದ್ಯೋಗಕ್ಕೆ ಆಯ್ಕೆ ಆಗಿದ್ದಾರೆ.

ಆದರೆ, “ನನಗೆ ಪಟ್ಟಣದ ಬದುಕಿನ ಕುರಿತು ಆಸಕ್ತಿ ಕಡಿಮೆ. ಈ ಹವ್ಯಾಸಗಳನ್ನು ಬಿಡಲು ಮನಸಿಲ್ಲ. ಹಾಗಾಗಿ ಊರಲ್ಲೇ ಇದ್ದುಕೊಂಡು, ಬಿಎಡ್ ಕಲಿತು, ಶಿಕ್ಷಕಿಯಾಗಬೇಕೆಂದು ಇದ್ದೇನೆ. ಸೈನ್ಯಕ್ಕೆ ಸೇರುವ ಆಸೆಯೂ ಸಣ್ಣದಿನಿಂದ ಇದೆ. ಆ ಬಗ್ಗೆಯೂ ಯೋಚಿಸಿ ಮುನ್ನಡೆಯುತ್ತೇನೆ” ಎಂದು ಹೇಳುತ್ತಾರೆ.

ಗಣಪತಿ ದಿವಾಣ