ಶಿರ್ವ: ಮನೆಬಿಟ್ಟು ಹೋಗಿ ನಾಪತ್ತೆಯಾದ ಯುವತಿ ನದಿಯಲ್ಲಿ ಶವವಾಗಿ ಪತ್ತೆ

ಶಿರ್ವ: ಅಕ್ಟೋಬರ್ 9ರಂದು ತನ್ನ ಅಕ್ಕನಲ್ಲಿ ಉಡುಪಿಗೆ ಹೋಗಿ ಬರತ್ತೇನೆಂದು ಹೇಳಿ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಶಿರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಮೀಪದ ಸೇತುವೆಯ ಬಳಿ ಪಾಪನಾಶಿನಿ ನದಿಯ ಗುಂಡಿಯಲ್ಲಿ ಪತ್ತೆಯಾಗಿದೆ.

ಮೂಡುಬೆಳ್ಳೆ ಕೊಂಗಿಬೈಲು ನಿವಾಸಿ ಸದಾಶಿವ ಪೂಜಾರಿ ಅವರ ಪುತ್ರಿ ವಿನಿತಾ (22) ಮೃತಪಟ್ಟ ಯುವತಿಯಾಗಿದ್ದು, ವಿನಿತಾ ಅಕ್ಟೋಬರ್ 9ರಂದು ಮಧ್ಯಾಹ್ನ 3 ಗಂಟೆಗೆ ತನ್ನ ಮನೆಯಿಂದ ಉಡುಪಿಗೆ ಹೋಗುತ್ತೇನೆ ಎಂದು ಹೋದವರು ಮತ್ತೆ ವಾಪಾಸ್ ಮನೆ ಬಂದಿಲ್ಲ. ಈ ಹಿನ್ನಲೆಯಲ್ಲಿ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಮತ್ತು ಪೊಲೀಸರು ಯುವತಿಯ ಪತ್ತೆಗೆ ಮುಂದಾಗಿದ್ದರು. ಇದೀಗ ನದಿಯಲ್ಲಿ ಆಕೆಯ ಶವ ಪತ್ತೆಯಾಗಿದೆ.

ಮುಳುಗು ತಜ್ಞ ಈಶ್ವರ್ ಮಲ್ಪೆ ಶವವನ್ನು ಮೇಲ್ತತಲು ಸಹಾಯ ಮಾಡಿದ್ದಾರೆ.

ಬಿ.ಕಾಂ. ಪದವೀಧರೆಯಾಗಿದ್ದ ವಿನಿತಾ ಉಡುಪಿ ಎಂಜಿಎಂ ಕಾಲೇಜ್‌ ಬಳಿಯ ಎಲೆಕ್ಟ್ರಿಕಲ್‌ ಬೈಕ್‌ ಶೋರೂಂನಲ್ಲಿ ಸುಮಾರು 4 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದು, ವಾರದ ಹಿಂದೆ ಕೆಲಸಬಿಟ್ಟಿದ್ದರು ಎನ್ನಲಾಗಿದೆ. ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಶಿರ್ವ ಪೊಲೀಸ್‌ ಠಾಣಾಧಿಕಾರಿ ಸಕ್ತಿವೇಲು ಮತ್ತು ಕ್ರೈಂ ವಿಭಾಗದ ಪಿಎಸ್‌ಐ ಅನಿಲ್‌ ಕುಮಾರ್‌ ತನಿಖೆ ಮುಂದುವರಿಸಿದ್ದಾರೆ.