ಚೆನ್ನೈ (ತಮಿಳುನಾಡು): ಇಂಗ್ಲೆಂಡ್ ವಿರುದ್ಧ ಪ್ರಬಲ ಬೌಲಿಂಗ್ ದಾಳಿಯಿಂದ ಗೆಲುವು ದಾಖಲಿಸಿದ್ದ ಅಫ್ಘಾನ್ ಚೆನ್ನೈನ ಚೆಪಾಕ್ ಪಿಚ್ನಲ್ಲಿ ಕಿವೀಸ್ಗೆ ಆರಂಭಿಕ ಆಘಾತ ನೀಡಿತು.ಇಂಗ್ಲೆಂಡ್ ಮಣಿಸಿದ ಅಫ್ಘಾನಿಸ್ತಾನ ಚೆನ್ನೈನ ಚೆಪಾಕ್ ಸ್ಪಿನ್ ಟ್ರ್ಯಾಕ್ನಲ್ಲಿ ನ್ಯೂಜಿಲ್ಯಾಂಡ್ ಎದುರಿಸಿದ್ದು, ಮೊದಲು ಬ್ಯಾಟ್ ಮಾಡಿದ ಕಿವೀಸ್ 288 ರನ್ ಗಳಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಕಿವೀಸ್ಗೆ ಉತ್ತಮ ಆರಂಭ ಸಿಗಲಿಲ್ಲ. ಬೌಲಿಂಗ್ ಶಕ್ತಿಯಿಂದ ಇಂಗ್ಲೆಂಡ್ ಮಣಿಸಿದ್ದ ಅಫ್ಘಾನಿಸ್ತಾನದ ಬೌಲರ್ಗಳ ಅದೇ ಆತ್ಮವಿಶ್ವಾಸದಲ್ಲಿ ಕಾಣಿಸಿಕೊಂಡರು. ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಶತಕ ಗಳಿಸಿದ್ದ ಡೆವೊನ್ ಕಾನ್ವೇ (20) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಎರಡನೇ ವಿಕೆಟ್ಗೆ ರಚಿನ್ ರವೀಂದ್ರ ಮತ್ತು ಇನ್ನೋರ್ವ ಆರಂಭಿಕ ಆಟಗಾರ ವಿಲ್ ಯಂಗ್ 79 ರನ್ಗಳ ಜೊತೆಯಾಟವಾಡಿದರು. ಆದರೆ, ಕಿವೀಸ್ನ ಮೂರು ವಿಕೆಟ್ ಒಮ್ಮೆಲೇ ಪತನವಾಯಿತು.ಆದರೆ ವಿಲ್ ಯಂಗ್, ಟಾಮ್ ಲ್ಯಾಥಮ್ ಮತ್ತು ಗ್ಲೆನ್ ಫಿಲಿಪ್ಸ್ ಅವರ ಅರ್ಧಶತಕ ನೆರವಿನಿಂದ ನ್ಯೂಜಿಲ್ಯಾಂಡ್ ನಿಗದಿತ ಓವರ್ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿದೆ. ಆಫ್ಘನ್ ತನ್ನ ಜಯದ ಲಯವನ್ನು ಮುಂದುವರೆಸಲು 289 ರನ್ಗಳ ಕೋಟೆಯನ್ನು ಭೇದಿಸಬೇಕಿದೆ.
ಟಾಮ್ – ಗ್ಲೆನ್ ಶತಕದ ಜೊತೆಯಾಟ: 110 ರನ್ಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಕಿವೀಸ್ಗೆ ನಾಯಕ ಟಾಮ್ ಲ್ಯಾಥಮ್ ಮತ್ತು ಗ್ಲೆನ್ ಫಿಲಿಪ್ಸ್ ಆಸರೆ ಆದರು. ಈ ಜೋಡಿ ತಂಡವನ್ನು ಆತಂಕದಿಂದ ಹೊರ ತಂದಿತು. 110 ರಿಂದ ತಂಡವನ್ನು 254 ವರೆಗೆ 144 ರನ್ನ ಪಾಲುದಾರಿಕೆಯೊಂದಿಗೆ ಕೊಂಡೊಯ್ಯದರು. ಇಬ್ಬರು ಬ್ಯಾಟರ್ಗಳು ಅರ್ಧಶತಕ ದಾಖಲಿಸಿ ಸಂಭ್ರಮಿಸಿದರು. ಅಂತಿಮ ಓವರ್ಗಳಲ್ಲಿ ರನ್ನ ಗತಿ ಹೆಚ್ಚಿಸಲು ಪ್ರಯತ್ನಿಸಿದ ಜೋಡಿ ವಿಕೆಟ್ ಕಳೆದುಕೊಂಡಿತು. ಇನ್ನಿಂಗ್ಸ್ನಲ್ಲಿ ಫಿಲಿಪ್ಸ್ 80 ಬಾಲ್ ಆಡಿ 4 ಬೌಂಡರಿ ಮತ್ತು 4 ಸಿಕ್ಸ್ನಿಂದ 71 ರನ್ ಗಳಿಸಿದರೆ, ಟಾಮ್ ಲ್ಯಾಥಮ್ 74 ಬಾಲ್ನಿಂದ 3 ಬೌಂಡರಿ ಮತ್ತು 2 ಸಿಕ್ಸ್ನ ಸಹಾಯದಿಂದ 68 ರನ್ ಕಲೆಹಾಕಿದರು.
ಕೊನೆಯನ್ನು ಮಾರ್ಕ್ ಚಾಪ್ಮನ್ (25*) ಮತ್ತು ಮಿಚೆಲ್ ಸ್ಯಾಂಟ್ನರ್ (7*) ತಂಡಕ್ಕೆ ದೊಡ್ಡ ಹೊಡೆತಗಳ ಮೂಲಕ ರನ್ ಸೇರಿಸಿದರು. ಇದರಿಂದ ನ್ಯೂಜಿಲ್ಯಾಂಡ್ ನಿಗದಿತ ಓವರ್ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 288 ರನ್ ಕಲೆಹಾಕಿತು.ಏಕಾಏಕಿ ಕುಸಿದ ಮಧ್ಯಮ ಕ್ರಮಾಂಕ: ತಂಡದ ಮೊತ್ತ 109 ಆಗಿದ್ದಾಗ ರಚಿನ್ ರವೀಂದ್ರ (32) ವಿಕೆಟ್ ಕಳೆದುಕೊಂಡರೆ, 110 ರನ್ ಆದಾಗ ಅರ್ಧಶತಕ ಗಳಸಿದ್ದ ವಿಲ್ ಯಂಗ್ (54) ಸಹ ಔಟ್ ಆದರು. ಅವರ ಬೆನ್ನಲ್ಲೇ ಡೇರಿಲ್ ಮಿಚೆಲ್ (1) ಸಹ ಪೆವಿಲಿಯನ್ ಹಾದಿ ಹಿಡಿದರು. ಮೂರು ವಿಕೆಟ್ಗಳು ಒಟ್ಟಿಗೆ ಉರುಳಿದ್ದರಿಂದ ತಂಡದ ಮೇಲೆ ಒತ್ತಡ ಹೆಚ್ಚಾಯಿತು. ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಇಂತಹ ಸಂದರ್ಭದಲ್ಲಿ ಕಮ್ಬ್ಯಾಕ್ ಮಾಡುವಲ್ಲಿ ಎಡವಿತ್ತು. ಆದರೆ, ಕಿವೀಸ್ನ ಕೆಳ ಕ್ರಮಾಂಕದ ಬ್ಯಾಟರ್ಗಳು ಆಸರೆ ಆದರು. ಈ ಮೂಲಕ ಗೌರವಯುತ ಮೊತ್ತ ಕಲೆ ಹಾಕುವಲ್ಲಿ ಕಿವೀಸ್ ಪಡೆ ಯಶಸ್ವಿಯಿತು.