ಉಡುಪಿ: ಉದ್ಯೋಗ ನಿಮಿತ್ತ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಬೈಂದೂರು ತಾಲೂಕಿನ ಚುಂಗಿಗುಡ್ಡೆ ನಿವಾಸಿ ಪ್ರತಿಭಾವಂತ ಯುವ ಇಂಜಿನಿಯರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪ ಸಂಭವಿಸಿದೆ.
ಮೃತರನ್ನು ಚುಂಗಿಗುಡ್ಡೆ ನಿವಾಸಿ ನಾರಾಯಣ ಹೆಬ್ಬಾರ್ ಅವರ ಪುತ್ರ ಅಕ್ಷಯ್ ಎನ್. ಹೆಬ್ಬಾರ್ (26) ಎಂದು ಗುರುತಿಸಲಾಗಿದೆ.
ಭಾನುವಾರ ಬೆಳಗಿನ ಜಾವ ಚುಂಗಿಗುಡ್ಡೆಯಲ್ಲಿರುವ ಮನೆಯಿಂದ ಬೈಕ್‌ನಲ್ಲಿ ಬೆಂಗಳೂರಿನತ್ತ ಪ್ರಯಾಣ ಆರಂಭಿಸಿದ್ದ ಅಕ್ಷಯ್, ಪ್ರಯಾಣದ ನಡುವೆ ಅಪಘಾತ ಸಂಭವಿಸುವುದಕ್ಕೂ ಮುನ್ನ ತಾಯಿಗೆ ದೂರವಾಣಿ ಕರೆ ಮಾಡಿದ್ದರು ಎನ್ನಲಾಗಿದೆ.
ಚನ್ನರಾಯಪಟ್ಟಣ ಸಮೀಪ ಟ್ರಕ್‌ಗೆ ಬೈಕ್‌ನ ಹ್ಯಾಂಡಲ್‌ನ ಭಾಗ ತಾಗಿ, ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ. ಆದರೆ ಅಪಘಾತದ ನಿಖರ ಕಾರಣ ಹಾಗೂ ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ಇನ್ನಷ್ಟೇ ಖಚಿತವಾಗಬೇಕಿದೆ.
ಓದಿನಲ್ಲಿ ಪ್ರತಿಭಾವಂತನಾಗಿ, ಉತ್ತಮ ಉದ್ಯೋಗ ಪಡೆದು ತಂದೆ-ತಾಯಿಯ ಕನಸುಗಳಿಗೆ ಆಸರೆಯಾಗಿದ್ದ ಯುವಕನ ಬದುಕು ಹೀಗೆ ಅರ್ಧದಲ್ಲೇ ಅಂತ್ಯಗೊಂಡಿರುವುದು ಬಂಧುಮಿತ್ರರು ಹಾಗೂ ಊರಿನವರನ್ನು ದುಃಖಕ್ಕೀಡು ಮಾಡಿದೆ. ಅಕ್ಷಯ್ ಅವರ ಅಕಾಲಿಕ ನಿಧನದಿಂದ ಚುಂಗಿಗುಡ್ಡೆ ಹಾಗೂ ಪಡುಕೋಣೆ ಪರಿಸರದಲ್ಲಿ ಶೋಕದ ಛಾಯೆ ಆವರಿಸಿದೆ.















