ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರೈಲ್ವೇ ಇಲಾಖೆ ಸದಾ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇದೀಗ ಐಆರ್ಸಿಟಿಸಿ (IRCTC) ನಿರ್ವಹಿಸುವ ಐಷಾರಾಮಿ “ಗೋಲ್ಡನ್ ಚಾರಿಯಟ್” ರೈಲು ಮತ್ತೆ ಸುದ್ದಿಯಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿರುವ ಈ ವಿಶೇಷ ರೈಲು, 2026-27ರ ಪ್ರವಾಸ ಸೀಸನ್ಗೆ ಹೊಸ ಉತ್ಸಾಹದೊಂದಿಗೆ ಸಜ್ಜಾಗಿದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಮಾಲೀಕತ್ವದಲ್ಲಿರುವ ಹಾಗೂ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೋರೇಷನ್ (IRCTC) ನಿರ್ವಹಿಸುವ ಈ ರೈಲು, ದಕ್ಷಿಣ ಭಾರತದ ಸಂಸ್ಕೃತಿ, ಇತಿಹಾಸ ಹಾಗೂ ಪ್ರಕೃತಿ ಸೌಂದರ್ಯವನ್ನು ಐಷಾರಾಮಿ ಅನುಭವದೊಂದಿಗೆ ಪ್ರವಾಸಿಗರಿಗೆ ಪರಿಚಯಿಸುತ್ತದೆ.

ಕರ್ನಾಟಕ ರೈಲ್ವೇ ಇತಿಹಾಸದಲ್ಲಿ ವಿಶೇಷಸ್ಥಾನ
ಗೋಲ್ಡನ್ ಚಾರಿಯಟ್ ರೈಲು ಮೊದಲ ಬಾರಿಗೆ 2008ರಲ್ಲಿ ಉದ್ಘಾಟನೆಯಾಗಿತ್ತು. 2008ರ ಜನವರಿ 23ರಂದು ಅಂದಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಚಾಲನೆ ನೀಡಿದ್ದರು. ಹಂಪಿಯ ವಿಜಯ ವಿಠಲ ದೇವಾಲಯದಲ್ಲಿರುವ ಪ್ರಸಿದ್ಧ ಕಲ್ಲಿನ ರಥದ ಪ್ರೇರಣೆಯಿಂದ ಈ ರೈಲಿಗೆ “ಗೋಲ್ಡನ್ ಚಾರಿಯಟ್” ಎಂಬ ಹೆಸರು ಇಡಲಾಗಿದೆ.
ನಂತರ ಕೆಲವು ವರ್ಷಗಳ ವಿರಾಮದ ಬಳಿಕ, 2024ರ ಡಿಸೆಂಬರ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರೈಲಿಗೆ ಪುನಃ ಚಾಲನೆ ನೀಡಿದರು. ಇದೀಗ ಹೊಸ ಮಾರ್ಗಗಳು ಮತ್ತು ಆಕರ್ಷಕ ಸೌಲಭ್ಯಗಳೊಂದಿಗೆ 2026-27ರ ಪ್ರವಾಸಿಗರನ್ನು ಸೆಳೆಯಲು ರೈಲು ಸಜ್ಜಾಗಿದೆ.

ಗೋಲ್ಡನ್ ಚಾರಿಯಟ್ನ ಪ್ರಮುಖ ಪ್ರವಾಸ ಮಾರ್ಗಗಳು:
ಪ್ರೈಡ್ ಆಫ್ ಕ ರ್ನಾಟಕ(5 ರಾತ್ರಿ/ 6 ಹಗಲು)
ಬೆಂಗಳೂರು – ಬಂಡೀಪುರ – ಮೈಸೂರು – ಹಳೆಬೀಡು – ಚಿಕ್ಕಮಗಳೂರು – ಹಂಪಿ – ಪಟ್ಟದಕಲ್ಲು – ಐಹೊಳೆ – ಗೋವಾ – ಬೆಂಗಳೂರು ಮಾರ್ಗವಾಗಿ ಈ ಪ್ರವಾಸ ಸಾಗಲಿದೆ.
ಈ ಪ್ರವಾಸದಲ್ಲಿ ವನ್ಯಜೀವಿ ಸಫಾರಿ, ಅರಮನೆಗಳು, ಐತಿಹಾಸಿಕ ದೇವಾಲಯಗಳು ಹಾಗೂ ಕರಾವಳಿಯ ಸೌಂದರ್ಯವನ್ನು ಒಂದೇ ಪ್ರಯಾಣದಲ್ಲಿ ಅನುಭವಿಸಬಹುದು.

ಜ್ಯುವೆಲ್ಸ್ ಆಫ್ ಸೌತ್(5 ರಾತ್ರಿ/ 6 ಹಗಲು)
ಬೆಂಗಳೂರು – ಮೈಸೂರು – ಕಾಂಚಿಪುರಂ – ಮಹಾಬಲಿಪುರಂ – ತಂಜಾವೂರು – ಚೆಟ್ಟಿನಾಡ್ – ಕೊಚ್ಚಿ – ಕುಮರಕೋಮ್ – ಬೆಂಗಳೂರು ಮಾರ್ಗದಲ್ಲಿ ಈ ಪ್ರವಾಸ ನಡೆಯಲಿದೆ.
ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳು, ಸಂಸ್ಕೃತಿ ಹಾಗೂ ಕರಾವಳಿ ಪ್ರದೇಶಗಳ ಸೌಂದರ್ಯವನ್ನು ನೋಡಲು ಇದು ವಿಶೇಷ ಅವಕಾಶವಾಗಿದೆ.
ಗ್ಲಿಂಪ್ಸಸ್ಆಫ್ ಕರ್ನಾಟಕ(3 ರಾತ್ರಿ/ 4 ಹಗಲು)
ಬೆಂಗಳೂರು – ಬಂಡೀಪುರ – ಮೈಸೂರು – ಹಂಪಿ – ಬೆಂಗಳೂರು ಮಾರ್ಗದಲ್ಲಿ ಈ ಚಿಕ್ಕ ಅವಧಿಯ ಪ್ರವಾಸ ಆಯೋಜಿಸಲಾಗಿದೆ.
ಕಡಿಮೆ ದಿನಗಳಲ್ಲಿ ಕರ್ನಾಟಕದ ಪ್ರಮುಖ ಪ್ರವಾಸಿತಾಣಗಳನ್ನು ವೀಕ್ಷಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

ಅಕ್ಟೋಬರ್ನಿಂದ ಮಾರ್ಚ್ವರೆಗೆ ಸಂಚಾರ
ಗೋಲ್ಡನ್ ಚಾರಿಯಟ್ ರೈಲು ಅಕ್ಟೋಬರ್ನಿಂದ ಮಾರ್ಚ್ವರೆಗೆ ಪ್ರವಾಸ ಸೀಸನ್ನಲ್ಲಿ ಸಂಚರಿಸಲಿದೆ. ಪ್ರತೀ ಭಾನುವಾರ ಬೆಂಗಳೂರಿನಿಂದ ಪ್ರಯಾಣ ಆರಂಭವಾಗುತ್ತದೆ. ಭವಿಷ್ಯದಲ್ಲಿ ಮುಂಬೈ–ಔರಂಗಾಬಾದ್ ಮಾರ್ಗವನ್ನು ಸೇರಿಸುವ ಯೋಜನೆಯೂ ಇದೆ ಎಂದು ವರದಿಯಾಗಿದೆ.

ರೈಲಿನಲ್ಲೇ ಅರಮನೆ ಅನುಭವ!
ಹೊರಗೆ ನೋಡಲು ಸಾಮಾನ್ಯ ರೈಲಿನಂತಿದ್ದರೂ, ಒಳಗಿನ ಸೌಲಭ್ಯಗಳು ಐಷಾರಾಮಿ ಹೋಟೆಲ್ಗೆ ಸಮಾನವಾಗಿವೆ. ಸುಮಾರು 18ರಿಂದ 19 ಕೋಚ್ಗಳನ್ನು ಹೊಂದಿರುವ ಈ ರೈಲು, 80ಕ್ಕೂ ಹೆಚ್ಚು ಪ್ರವಾಸಿಗರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.
ಪ್ರತಿ ಕ್ಯಾಬಿನ್ನ್ನು ಅರಮನೆ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಡಬಲ್ ಅಥವಾ ಕ್ವೀನ್ ಬೆಡ್, ಏರ್ಕಂಡೀಷನರ್, ಎಲ್ಸಿಡಿ ಟಿವಿ, ವೈ-ಫೈ ಹಾಗೂ ಖಾಸಗಿ ಬಾತ್ರೂಮ್ ಸೌಲಭ್ಯಗಳಿವೆ.

ಇದಲ್ಲದೆ,
- ಎರಡು ಫೈನ್ ಡೈನಿಂಗ್ ರೆಸ್ಟೋರೆಂಟ್ಗಳು
- ಬಾರ್ ಕಾರ್
- ಸ್ಪಾ ಮತ್ತು ಫಿಟ್ನೆಸ್ ಸೆಂಟರ್
- ದಕ್ಷಿಣ ಭಾರತೀಯ, ಉತ್ತರ ಭಾರತೀಯ ಹಾಗೂ ಕಾಂಟಿನೆಂಟಲ್ ಆಹಾರ ವ್ಯವಸ್ಥೆ
ಪ್ರಯಾಣದ ಬೆಲೆ ಎಷ್ಟು?
ಗೋಲ್ಡನ್ ಚಾರಿಯಟ್ನಲ್ಲಿ 5 ರಾತ್ರಿ / 6 ಹಗಲು ಪ್ರವಾಸಕ್ಕೆ ಡೀಲಕ್ಸ್ ಕ್ಯಾಬಿನ್ ದರ ಒಬ್ಬ ವ್ಯಕ್ತಿಗೆ ಸುಮಾರು 4 ಲಕ್ಷ ರೂಪಾಯಿಗೂ ಅಧಿಕವಾಗಿದೆ. “ಗ್ಲಿಂಪ್ಸಸ್ ಆಫ್ ಕರ್ನಾಟಕ” ಪ್ಯಾಕೇಜ್ಗೆ ಸುಮಾರು 3.31 ಲಕ್ಷ ರೂಪಾಯಿ ದರವಿದೆ.
ವಿಶೇಷ ಸಂದರ್ಭಗಳಲ್ಲಿ ರಿಯಾಯಿತಿ ಹಾಗೂ ಆಫರ್ಗಳನ್ನು ಕೂಡ ಪ್ರಕಟಿಸಲಾಗುತ್ತದೆ. ಪ್ರವಾಸ ಎಂದರೆ ಕೇವಲ ಸ್ಥಳಗಳನ್ನು ನೋಡುವುದಲ್ಲ, ಅದೊಂದು ವಿಶಿಷ್ಟ ಅನುಭವ ಎಂಬ ಕಾರಣಕ್ಕೆ ಈ ರೈಲು ತನ್ನದೇ ಆದ ವಿಶೇಷತೆ ಮತ್ತು ಬೆಲೆಯನ್ನು ಹೊಂದಿದೆ.

















