ರಂಗೇರಿದ ಚುನಾವಣಾ ಕಣ: ಹಿಂದುತ್ವದ ಭದ್ರಕೋಟೆ ಉಡುಪಿಗೆ ಯೋಗಿ ಆದಿತ್ಯನಾಥ್, ಅಣ್ಣಾಮಲೈ ಆಗಮನ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಪರ ಪ್ರಚಾರಕ್ಕೆ ರಾಜ್ಯ ಮತ್ತು ರಾಷ್ಟ್ರ ನಾಯಕರ ದಂಡು ಉಡುಪಿಗೆ ಆಗಮಿಸಲಿದೆ ಎನ್ನಲಾಗಿದೆ.

ಎ. 19ರಂದು ಉಪ್ಪೂರಿಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖೀ ಹಾಗೂ ಸಂಸದೆ ಸುಮಲತಾ, ಎ. 20ರಂದು ಉಡುಪಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಎ. 21ರಂದು ಕಾಪುವಿಗೆ ಸಂಸದ ಪ್ರತಾಪ್‌ ಸಿಂಹ, ಎ. 22ರಂದು ಹಿರಿಯಡಕಕ್ಕೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ಎ. 24ರಂದು ಉಡುಪಿ ನಗರಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆಗಮಿಸಲಿದ್ದಾರೆ.

ಯೋಗಿ ಭಾಗವಹಿಸುವ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ನಡೆಸಲು ಬಿಜೆಪಿ ಚಿಂತನೆ ನಡೆಸುತ್ತಿದ್ದು, ಉಡುಪಿ ನಗರದಲ್ಲಿ ರೋಡ್‌ಶೋ ಅಥವಾ ಬೃಹತ್‌ ಸಮಾವೇಶಕ್ಕೆ ರೂಪರೇಖೆ ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ ಅವರು ತಿಳಿಸಿದ್ದಾರೆ.