ಲೋಕಸಭೆ ಚುನಾವಣೆ: ಎರಡನೇ ಹಂತದಲ್ಲಿ ಯುಪಿಪಿ ಪಕ್ಷದಿಂದ 14 ಮಂದಿ ಕಣಕ್ಕೆ: ಉಪೇಂದ್ರ

ಉಡುಪಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಈಗಾಗಲೇ  ಪಕ್ಷದ 14 ಮಂದಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದು, ಎರಡನೆ ಹಂತದಲ್ಲಿ ಮತ್ತೆ 14 ಮಂದಿಯ ಅಭ್ಯರ್ಥಿಯ ಹೆಸರನ್ನು ಎ.7ರ ನಂತರ ಘೋಷಣೆ ಮಾಡಲಾಗುವುದು ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ಚಿತ್ರನಟ ಉಪೇಂದ್ರ ಹೇಳಿದರು.
ಉಡುಪಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಯೊಂದು ಕ್ಷೇತ್ರಗಳಿಗೂ ಭೇಟಿ ನೀಡಿ ಅಭ್ಯರ್ಥಿಗಳನ್ನು ಮಾಧ್ಯಮದ ಮೂಲಕ ಜನರಿಗೆ ಪರಿಚಯಿಸಿ ಪಕ್ಷ ವಿಚಾರವನ್ನು ತಿಳಿಸುವ ಕಾರ್ಯ ಮಾಡುತ್ತಿದ್ದೇನೆ. ನಮ್ಮ ಪಕ್ಷ ವಿಭಿನ್ನ ಅಲ್ಲ. ಇಂದಿನ ಸುಳ್ಳಿನ ಪ್ರಪಂಚದಲ್ಲಿ ನಮಗೆ ಸತ್ಯವೇ ವಿಭಿನ್ನವಾಗಿ ಕಾಣುತ್ತಿದೆ. ನಾವು ಸಂವಿಧಾನದಲ್ಲಿರುವುದನ್ನೇ ಮಾತನಾಡುತ್ತಿದ್ದೇವೆ. ಮತದಾನದ ಒಂದು ದಿನ ಮಟ್ಟಿಗೆ ಮಾತ್ರ ಪ್ರಜೆಗಳು ರಾಜರಾಗ ಬಾರದು. ಐದು ವರ್ಷ ಕೂಡ ಅವರ ಮಾತಿಗೆ ಬೆಲೆ ನೀಡುವ ನಿಜವಾದ ಪ್ರಜಾಪ್ರಭುತ್ವ ಈ ದೇಶದಲ್ಲಿ ಬರಬೇಕು ಎಂದರು.
ರಾಜಕೀಯದಲ್ಲಿ ಯುವಕರು ಮುಂದೆ ಬರಬೇಕು. ನಾವು ಯಾರನ್ನು ಕೂಡ ದೂರುವುದಿಲ್ಲ. ಯಾವುದೇ ಪಕ್ಷವನ್ನು ಟೀಕೆ ಮಾಡಲ್ಲ. ನಮ್ಮ ವಿಚಾರಗಳ ಬಗ್ಗೆ ಚರ್ಚೆ ಆಗಬೇಕು. ಆಗಲೇ ದೇಶ ಅಭಿವೃದ್ಧಿ ಸಾಧ್ಯ. ಬದಲಾವಣೆ ಜನ ರಿಂದಲೇ ಆಗಬೇಕೆಂಬುದು ನಮ್ಮ ಪ್ರಯತ್ನವಾಗಿದೆ ಎಂದರು.
ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ಉದ್ಯೋಗ, ಕೃಷಿ ಕ್ಷೇತ್ರಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಯಾವುದೇ ಕ್ಷೇತ್ರದಲ್ಲಿ ಬದಲಾವಣೆ ತರಬೇಕಾದರೆ ಜ್ಞಾನ, ಹಣ, ಶ್ರಮ ಅತಿ ಮುಖ್ಯ. ಇವು ಮೂರು ಸರಿಯಾಗಿ ಸೇರಿದರೆ ಬದಲಾವಣೆ ಸಾಧ್ಯ. ಅದೇ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ ಎಂದು ಅವರು ಅಭಿಪ್ರಾಯ ಪಟ್ಟರು.
ತೆರಿಗೆ ಪಾವತಿಸುವ ಪ್ರತಿಯೊಬ್ಬರು ಕೂಡ ಸಮಾಜ ಸೇವೆ ಮಾಡುತ್ತಿದ್ದಾರೆ. ಆದುದರಿಂದ ನಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕು. ಈ ಮೂಲಕ ರಾಜಕೀಯವೇ ಬದಲಾಗಬೇಕಾಗಿದೆ. ಆಗ ಸರಕಾರದಲ್ಲಿ ತಂತ್ರ ಜ್ಞಾನವನ್ನು ಬಳಸಿ ಸಂಪೂರ್ಣ ಪಾರದರ್ಶಕತೆ ತರಲು ಸಾಧ್ಯ. ಜನರಿಗೆ ಪಾರದರ್ಶಕತೆ, ಉತ್ತರ ನೀಡುವಂತಾದರೆ ಜನರೇ ರಾಜಕೀಯದಲ್ಲಿ ಸೇರಿ ಕೊಳ್ಳುತ್ತಾರೆ. ಅದೇ ರೀತಿ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳು ನ್ಯಾಯಾಲಯ ದಲ್ಲಿ ನೋಂದಾಣಿಯಾಬೇಕು ಎಂದು ಅವರು ಹೇಳಿದರು.
ರಾಜ್ಯಕ್ಕೆ ಪ್ರಬಲ ಪ್ರಾದೇಶಿಕ ಪಕ್ಷ ಅಗತ್ಯ
ಕರ್ನಾಟಕ ರಾಜ್ಯಕ್ಕೆ ಪ್ರಬಲವಾದ ಒಂದು ಪ್ರಾದೇಶಿಕ ಪಕ್ಷದ ಅಗತ್ಯ ಇದೆ. ಮುಂದೆ ಆ ನಿರ್ಧಾರವನ್ನು ಕೂಡ ಜನರ ತೆಗೆದುಕೊಳ್ಳುತ್ತಾರೆ. ಯಾವ ಪಕ್ಷ ಬೇಕು, ಕೇಂದ್ರದಲ್ಲಿ ಯಾವ ಸರಕಾರ ಬರಬೇಕು ಎಂಬುದನ್ನು ಜನರೇ ನಿರ್ಧಾರ ಮಾಡುತ್ತೇವೆ. ರಾಜನ ಕೈಯಲ್ಲಿರುವ ಕೀಯನ್ನು ಪ್ರಜೆಗಳ ಕೈ ನೀಡುವುದೇ ಪ್ರಾಕೀಯ ಎಂದು ಉಪೇಂದ್ರ ಹೇಳಿದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಸುರೇಶ್ ಕುಂದರ್ ಮಾತನಾಡಿ, ರಾಜಕೀಯ ಎಂಬುದು ವ್ಯಾಪರೀಕರಣ ಆಗುತ್ತಿದೆ. ಹಣ, ಜಾತಿ ಬಲವೇ ಮುಖ್ಯವಾಗುತ್ತಿದೆ. ಹಾಗಾಗಿ ನಿಜವಾದ ಅರ್ಹರು ರಾಜಕೀಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಆದುದರಿಂದ ರಾಜಕೀಯದಲ್ಲಿ ವೃತ್ತಿಪರತೆ ತರ ಬೇಕಾಗಿದೆ. ಸತ್ಯ ಜನರಿಂದ ಜನರಿಗೆ ತಲುಪಬೇಕೆಂದು ಹೇಳಿದರು.
ನಾವು ಸಾಮಾಜಿಕ ಜಾಲ ತಾಣ ಹಾಗೂ ಕರಪತ್ರಗಳನ್ನು ಹಂಚಿ ಪ್ರಚಾರ ಕಾರ್ಯ ನಡೆಸುತ್ತಿದ್ದೇವೆ. ಎಲ್ಲೂ ಸಾರ್ವಜನಿಕ ಸಭೆ, ಸಮಾರಂಭಗಳನ್ನು ನಡೆಸುವುದಿಲ್ಲ. ಬದಲಾವಣೆ ಬಯಸುವ ಜನರಿಗೆ ಅರಿವು ಆಗಿ ಅವರಿಗಾಗಿಯೇ ಮತ ಹಾಕಬೇಕೆ ಹೊರತು ನಮಗಾಗಿ ಅಲ್ಲ. ನಾವು ಅವರ ಪರವಾಗಿ ನಾವು ಕೆಲಸ ಮಾಡುತ್ತೇವೆ. ಹಣದ ಪ್ರತಿನಿಧಿಗಳ ಬದಲು ಜನರ ಪ್ರತಿನಿಧಿಗಳು ಸಂಸತ್ತಿಗೆ ಕಳುಹಿಸಬೇಕು ಎಂದು ಹೇಳಿದರು.