ಎಳ್ಳಾರೆ ಶ್ರೀ‌ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸ‌ವ

ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಸುಮಾರು 1,450 ವರ್ಷಗಳ ಹಿಂದಿನ ಇತಿಹಾಸವಿರುವ ಎರಡನೇ ವೈಕುಂಠ ಖ್ಯಾತಿಯ ಶ್ರೀಕ್ಷೇತ್ರ ಇರ್ವತ್ತೂರು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಎ. 8ರಿಂದ ಆರಂಭಗೊಂಡಿದ್ದು ಎ.18ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಇಲ್ಲಿ ಪ್ರಧಾನ ದೇವರಾಗಿ ಅಂಗೈಯಲ್ಲಿ ಅನ್ನ ಮುದ್ದೆ ಹಿಡಿದು ನಿಂತಿರುವ ಶ್ರೀ ಲಕ್ಷ್ಮೀ ಜನಾರ್ದನ ದೇವರು ಹಾಗೂ ಪರಿವಾರ ದೇವರಾಗಿ ಶ್ರೀ ಮಹಾಗಣಪತಿ, ಶ್ರೀ ಜಲದುರ್ಗೆ ಹಾಗೂ ಪರಿವಾರ ದೈವಗಳಿದ್ದು, ನಿತ್ಯ ತ್ರಿಕಾಲ ಪೂಜೆ, ಪಂಚಪರ್ವಗಳೊಂದಿಗೆ ನಿತ್ಯ ಅನ್ನದಾನ ನಡೆಯುತ್ತಿದೆ. ಸುಮಾರು 4,000 ಮುಡಿ ಅಕ್ಕಿಯ ಹುಟ್ಟುವಳಿ ದೇವಸ್ಥಾನಕ್ಕೆ ಸಂದಾಯವಾಗುತ್ತಿದ್ದ ವಿಚಾರ ಶಾಸನಗಳಿಂದ ತಿಳಿದುಬಂದಿದೆ. ಸಂಪದ್ಭರಿತವಾಗಿದ್ದ ಶ್ರೀ ಕ್ಷೇತ್ರವು 1970ರ ದಶಕದಲ್ಲಿ ಎಲ್ಲ ಪಂಚಪರ್ವ ಜಾತ್ರಾದಿ ಮಹೋತ್ಸವಗಳು ಸ್ಥಗಿತಗೊಂಡ ಸಂದರ್ಭದಲ್ಲಿ 1976ರಲ್ಲಿ ಕಾರ್ಲ ಕನ್‌ಸ್ಟ್ರಕ್ಷನ್‌ನ ಮಾಲಕ ಮುಳ್ಳಾಡು ಶಿವರಾಮ ಶೆಟ್ಟಿಯವರು ಶ್ರೀ ಕ್ಷೇತ್ರದ ಮುಂದಾಳತ್ವ ವಹಿಸಿಕೊಂಡು ಅಳಿವಿನ ಅಂಚಿಗೆ ಸರಿದಿದ್ದ ಕ್ಷೇತ್ರವನ್ನು ಏಳೂವರೆ ಮಾಗಣೆಗೆ ಉಳಿಸಿಕೊಟ್ಟರು.
ಅನಂತರ ಹಂತಹಂತವಾಗಿ ಶ್ರೀಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸಿ ಈ ಬಾರಿ ದೇವಸ್ಥಾನವು ಸಂಪೂರ್ಣವಾಗಿ ಶಿಲಾಮಯಗೊಂಡು ಕರಾವಳಿ ಜಿಲ್ಲೆಯಲ್ಲೇ ಕೆತ್ತನೆ ಮತ್ತು ವಿನ್ಯಾಸದಲ್ಲಿ ಅಗ್ರಪಂಕ್ತಿಯಲ್ಲಿದೆ. ಸಂಪೂರ್ಣ ಶಿಲಾಮಯಗೊಂಡ ಅನಂತರದಲ್ಲಿ ಶ್ರೀ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವ ಹಾಗೂ ಬ್ರಹ್ಮರಥೋತ್ಸವವು ಕುಕ್ಕಿಕಟ್ಟೆ ವಿದ್ವಾನ್‌ ಶ್ರೀ ರಾಮಕೃಷ್ಣ ತಂತ್ರಿ ಅವರು ಮತ್ತು ವಿದ್ವಾನ್‌ ಶ್ರೀ ಕುಮಾರ ಗುರು ತಂತ್ರಿ ಅವರ ನೇತೃತ್ವದಲ್ಲಿ ಪರಂಪರೆ, ಸಾಂಪ್ರದಾಯಿಕ ನಿಯಮಾನುಸಾರದಲ್ಲಿ ನಡೆಯುತ್ತಿದೆ ಎಂದು‌ ದೇವಸ್ಥಾನದ ಪ್ರಕಟನೆ ತಿಳಿಸಿದೆ.