ಕುಂದಾಪುರ: ರಾಜ್ಯದಲ್ಲಿ ಬಂಟ ಸಮುದಾಯದ ಐವರು ಅಭ್ಯರ್ಥಿಗಳು ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಯಡಿಯೂರಪ್ಪನವರ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ರಚನೆಯಲ್ಲಿ ಬಂಟ್ ಸಮುದಾಯದ ಶಾಸಕರನ್ನು ಸಂಪೂರ್ಣ ಕಡೆಗಣಿಸಲಾಗಿದ್ದು ಇದು ಬಂಟ ಸಮುದಾಯಕ್ಕೆ ಸರ್ಕಾರ ಮಾಡಿದ ಅನ್ಯಾಯ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಂಟ್ ಸಮುದಾಯದ ಹಿರಿಯ ಮುಖಂಡ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಅವಕಾಶ ಕೊಡದಿದ್ದಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳುತ್ತೇವೆ ಎಂದು ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಸುನೀಲ್ ಹೇರಿಕುದ್ರು ಆರೋಪಿಸಿದ್ದಾರೆ.
ಈ ಬಗ್ಗೆ ಬುಧವಾರ ಸಂಜೆ ಕುಂದಾಫುರದ ಪ್ರೆಸ್ ಕ್ಲಬ್‌ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕುಂದಾಫುರ ವಿಧಾನಸಭಾ ಕ್ಷೇತ್ರದಲ್ಲಿ ೧೯೮೪ರಿಂದಲೂ ಬಂಟ ಸಮುದಾಯದ ಪ್ರತಿನಿಧಿಗಳು ಕುಂದಾಪುರ ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸುತ್ತಿದ್ದಾರೆ. ಪ್ರತಾಪಚಂದ್ರ ಶೆಟ್ಟರು ನಾಲ್ಕು ಬಾರಿ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟರು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸತತ ಒಂಭತ್ತು ಬಾರಿ ಬಂಟ ಸಮುದಾಯದದವರು ಶಾಸಕರಾಗಿ ಆಯ್ಕೆಯಾದರು ಸರ್ಕಾರಗಳು ಬಂಟ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಲು ನಿರಾಕರಿಸಿದೆ. ಬಂಟ ಸಮುದಾಯಕ್ಕೆ ಆದ ಅನ್ಯಾಯವನ್ನು ತಾಲೂಕು ಯುವ ಬಂಟರ ಸಂಘ ಖಂಡಿಸುತ್ತದೆ ಎಂದರು.
ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಶಾಸಕರಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುವುದರ ಮೂಲಕ ಬಂಟ ಸಮುದಾಯಕ್ಕೆ ಹೆಮ್ಮೆಯನ್ನು ತಂದವರು. ಕೊನೆ ಗಳಿಗೆಯವರೆಗೂ ಹಾಲಾಡಿಯವರಿಗೆ ಸಚಿವಸ್ಥಾನ ಸಿಗುವ ಎಲ್ಲಾ ನಿರೀಕ್ಷೆಗಳಿತ್ತು. ಐದು ಬಾರಿ ಶಾಸಕರಾಗಿ ಆಯ್ಕೆಯಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರನ್ನು ಈ ಬಾರಿಯೂ ಕಡೆಗಣಿಸಲಾಗಿದೆ. ದ.ಕ ಹಾಗು ಉಡುಪಿ ಜಿಲ್ಲೆಯಲ್ಲಿ ಬಂಟ ಸಮುದಾಯ ಪ್ರಭಲವಾದ ಸಮುದಾಯ. ಮುಂದೆ ಹೊರಡಿಸುವ ಸಚಿವಸಂಪುಟ ವಿಸ್ತರಣೆಯ ಪಟ್ಟಿಯಲ್ಲಿ ಬಂಟ ಸಮುದಾಯದ ಹಿರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಅವಕಾಶ ನೀಡಬೇಕೆಂದು ಸುನೀಲ್ ಕುಮಾರ್ ಶೆಟ್ಟಿ ಆಗ್ರಹಿಸಿದರು.
ನೂತನವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಶುಭಾಶಯಗಳನ್ನು ಕೋರುತ್ತಿದ್ದೇವೆ. ಶ್ರೀನಿವಾಸ ಪೂಜಾರಿಯವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಬಂಟ ಸಮುದಾಯದ ವಿರೋಧವಿಲ್ಲ. ಇದರಲ್ಲಿ ಯಾವುದೇ ಗೊಂದಲ ಬೇಡ. ಬಂಟ ಸಮುದಾಯದ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎನ್ನುವುದು ನಮ್ಮ ಮನವಿ. ಒಂದು ವೇಳೆ ನಮ್ಮ ಮನವಿಗೆ ಸರ್ಕಾರ ಸ್ಪಂದಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳುತ್ತೇವೆ. ಈಗಾಗಲೇ ಮೊದಲ ಹಂತದ ಸಭೆಯನ್ನೂ ನಡೆಸಿದ್ದೇವೆ ಎಂದು ಸುನೀಲ್ ಶೆಟ್ಟಿ ಹೇರಿಕುದ್ರು ಹೇಳಿದ್ದಾರೆ.












