ದೇವರ ದಯೆ ಇದ್ದರೆ ದೇವೇಗೌಡರೂ ಕೂಡ ಮನೆಗೆ ಹೋಗ್ತಾರೆ: ಯಡಿಯೂರಪ್ಪ ಭವಿಷ್ಯ

ಕುಂದಾಪುರ: ಈ ಬಾರಿಯ ಚುನಾವಣೆಯಲ್ಲಿ ಮುನ್ನೂರಕ್ಕೂ ಅಧಿಕ ಲೋಕಸಭಾ ಕ್ಷೇತ್ರವನ್ನು ಗೆದ್ದು ಮತ್ತೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸುತ್ತದೆ. ರಾಜ್ಯದ ಉದ್ದಗಲಕ್ಕೂ ಮೋದಿ ಗಾಳಿ ಬೀಸುತ್ತಿದ್ದು, ರಾಜ್ಯದಲ್ಲಿ ೨೨ ಲೋಕಸಭಾ ಕ್ಷೇತ್ರ ಗೆಲ್ಲುತ್ತೇವೆ. ದೇವರ ದಯೆ ಇದ್ದರೆ ಮಾಜಿ ಪ್ರಧಾನಿ ದೇವೇಗೌಡರೂ ಕೂಡ ತುಮಕೂರಿನಲ್ಲಿ ಮನೆಗೆ ಹೋಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಅವರು ಭಾನುವಾರ ಸಂಜೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೆಂಪುವಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರರವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುತ್ತಿರುವ ಕಲ್ಬುರ್ಗಿ ಕ್ಷೇತ್ರ, ಮುನಿಯಪ್ಪ ಸ್ಪರ್ಧಿಸುತ್ತಿರುವ ಕೋಲಾರ ಜಿಲ್ಲೆ ಸೇರಿದಂತೆ ೨೨ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲ್ಲುತ್ತಾರೆ. ಅಂಬರೀಶ್ ಸಾವನ್ನಪ್ಪಿದಾಗ ಮಂಡ್ಯದಲ್ಲಿ ಅವರ ಪಾರ್ಥೀವ ಶರೀರಿ ನೋಡಲು ಲಕ್ಷಾಂತರ ಮಂದಿಗೆ ಅವಕಾಶ ಕಲ್ಪಿಸಿಕೊಟ್ಟ ಮುಖ್ಯಮಂತ್ರಿ ಇಂದು ಅಂಬರೀಶ್ ಮಂಡ್ಯ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಕೇಳುತ್ತಿದ್ದಾರೆ. ಹೆಣ್ಣುಮಗಳನ್ನು ಅಪಮಾನ ಮಾಡುವ ಕೆಲಸಕ್ಕೆ ಕುಮಾರಸ್ವಾಮಿ ಮುಂದಾಗಿದ್ದಾರೆ. ಇದನ್ನು ಮಂಡ್ಯ ಜಿಲ್ಲೆಯ ಜನ ಸಹಿಸೋದಿಲ್ಲ. ಅಂಬಿರೀಶ್ ಇದ್ದಾಗಲೂ ನಾವು ಗೌರವ ಕೊಟ್ಟಿದ್ದೇವೆ. ಮಂಡ್ಯದಲ್ಲಿ ಸುಮಲತಾ ಗೆಲ್ಲಲು ನಾವು ಬೇಷರತ್ ಬೆಂಬಲ ಕೊಟ್ಟಿದ್ದೇವೆ ಎಂದರು.

 ಕಮಿಶನ್ ಸರ್ಕಾರ:
ಕುಮಾರಸ್ವಾಮಿಯವರು ಹಾಸನ ಜಿಲ್ಲೆಯಲ್ಲಿ ಐದು ನೀರಾವರಿ ಯೋಜನೆಗಳಿಗೆ ಸಾವಿರದ ಮುನ್ನೂರ ನಲವತ್ತನಾಲ್ಕು ಕೋಟಿ ಕಾಮಗಾರಿ ಆರಂಭಕ್ಕೂ ಮುನ್ನಾ ೨೦ ಪರ್ಸೆಂಟ್ ಕಮಿಶನ್ ಪಡೆದುಕೊಂಡು ಮುಂಗಡ ಹಣ ಕೊಟ್ಟಿದ್ದಾರೆ. ನರೇಂದ್ರ ಮೋದಿಯವರು ರಾಜ್ಯ ಸರ್ಕಾರವನ್ನು ೧೦ ಪರ್ಸೆಂಟ್ ಕಮಿಶನ್ ಸರ್ಕಾರ ಎಂದಿದ್ದರು. ಆದರ ನಾನು ಹೇಳುತ್ತಿದ್ದೇನೆ. ಇದು ೨೦ ಪರ್ಸೆಂಟ್ ಕಮಿಶನ್ ಸರ್ಕಾರ. ಎಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರುದ್ದ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಕಾರ್ಕಳ ಶಾಸಕ ಸುನೀಲ್ ಕುಮಾರ್, ರಾಜ್ಯ ಯುವಮೋರ್ಚಾ ಅಧ್ಯಕ್ಷ ವಿಜಯೇಂದ್ರ, ಬಿಜೆಪಿ ಮುಖಂಡರುಗಳಾದ ಭಾರತಿ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಸಂದ್ಯಾ ಕಾಮತ್, ಡಾ.ಅತುಲ್ ಕುಮಾರ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಯಶ್‌ಪಾಲ್ ಸುವರ್ಣ, ಸುಪ್ರಸಾದ್ ಶೆಟ್ಟಿ, ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.