ಕಣದಿಂದ ಹಿಂದೆ ಸರಿದ ಶೋಭಾ: ಯಶ್ ಪಾಲ್ ಸುವರ್ಣಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಖಚಿತ.?

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸುವ ಕುರಿತಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಬಿಜೆಪಿ ಹೈಕಮಾಂಡ್ ಯುವ ಮುಖಂಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಅವರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಹಾಲಿ ಸಂಸದೆ ಹಾಗೂ ಪ್ರಬಲ ಟಿಕೆಟ್ ಆಕಾಂಕ್ಷಿಯೂ ಆಗಿದ್ದ ಶೋಭಾ ಕರಂದ್ಲಾಜೆ ಸ್ಪರ್ಧೆಯಿಂದ ಹಿಂದೆ ಸರಿಯುವ ಎಲ್ಲಾ ಲಕ್ಷಣಗಳು ಕಂಡುಬಂದಿದ್ದು, ಅವರಿಗೆ ಹೈಕಮಾಂಡ್ ರಾಜ್ಯಮಟ್ಟದಲ್ಲಿ ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯಶ್ ಪಾಲ್ ಸುವರ್ಣ ಅವರಿಗೆ ತುರ್ತಾಗಿ ದೆಹಲಿಗೆ ಬರುವಂತೆ ಹೈಕಮಾಂಡ್ ನಿಂದ ಕರೆ ಬಂದಿದ್ದು, ಅದರಂತೆ ಯಶ್ ಪಾಲ್ ಅವರು ಇಂದು ದೆಹಲಿಗೆ ತೆರಳಿದ್ದಾರೆ.
ಬಿಜೆಪಿಯ ಆಂತರಿಕ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ ರಾಜ್ಯದಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಕೇವಲ 2 ಹೆಸರುಗಳಷ್ಟೇ ಅಂತಿಮವಾಗಿದ್ದವು. ಮೊದಲ ಹೆಸರು ಶೋಭಾ ಕರಂದ್ಲಾಜೆ ಮತ್ತು ಎರಡನೇ ಹೆಸರು ಯಶ್ಪಾಲ್ ಸುವರ್ಣ ಅವರದ್ದಾಗಿತ್ತು. ಜಯಪ್ರಕಾಶ್ ಹೆಗಡೆ ಮತ್ತಿತರರು ಟಿಕೆಟಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ ಸಂಘ ಪರಿವಾರ ಇವರ ಹೆಸರನ್ನು ಎಲ್ಲೂ ಸೂಚಿಸಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಶೋಭಾ ಮತ್ತು ಯಶ್ ಪಾಲ್ ಹೆಸರಷ್ಟೇ ಅಂತಿಮಗೊಂಡಿತ್ತು.
ಪ್ರಬಲ ಸಮುದಾಯಗಳ ಬಲ:
ಯಶ್ ಪಾಲ್ ಸುವರ್ಣ ಅವರಿಗೆ ಟಿಕೆಟ್ ಸಿಕ್ಕಿದರೆ ಹಿಂದುಳಿದ ವರ್ಗ ಸೇರಿದಂತೆ ಬಂಟ, ಬಿಲ್ಲವ ಎರಡೂ ಪ್ರಬಲ ಸಮುದಾಯಗಳು ಬಿಜೆಪಿಯನ್ನೂ ಪೂರ್ಣ ರೀತಿಯಲ್ಲಿ ಬೆಂಬಲಿಸುವುದರಲ್ಲಿ ಎರಡು ಮಾತಿಲ್ಲ. ಅದಲ್ಲದೇ, ಮೀನುಗಾರರ ಸಮುದಾಯ ಕೂಡ ಬಿಜೆಪಿಯನ್ನು ಬೆಂಬಲಿಸಲಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧಿಸದಿರುವುದರಿಂದ ಬಿಜೆಪಿಯ ಗೆಲುವಿನ ಹಾದಿ ಸುಗಮವಾಗಿದೆ. ಹಾಗಾಗಿ ಬಿಜೆಪಿಯಲ್ಲಿ ಯಾರಿಗೂ ಟಿಕೆಟ್ ಸಿಕ್ಕರೆ ಗೆಲುವು ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಹಾಲಿ ಸಂದೆ ಶೋಭಾ ಅವರ ಸ್ಪರ್ಧೆಗೆ ಸ್ವಪಕ್ಷೀಯರಲ್ಲಿಯೇ ವಿರೋಧವಿದೆ. ಅಲ್ಲದೆ ಸಾರ್ವಜನಿಕ ವಲಯದಲ್ಲೂ ಶೋಭಾ ಅವರ ಬಗ್ಗೆ ಆಕ್ರೋಶ ಇದೆ. ಈ ನಿಟ್ಟಿನಲ್ಲಿ ಬಿಜೆಪಿ ವರಿಷ್ಠರು ಯಶ್ ಪಾಲ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ. ಹಾಗಾಗಿಯೇ ಅವರನ್ನು ದೆಹಲಿಗೆ ಬರಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.