ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷರಾಗಿ ಶಾಸಕ ಯಶ್ ಪಾಲ್ ಸುವರ್ಣ ಪುನರಾಯ್ಕೆ

ಮಲ್ಪೆ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರಿ ರಂಗದ ಹಿರಿಯ ಸಂಸ್ಥೆಯಾದ ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ನ 2024-29ನೇ ಸಾಲಿನ ಅಧ್ಯಕ್ಷರಾಗಿ ಸತತ 4ನೇ ಬಾರಿಗೆ ಅವಿರೋಧವಾಗಿ ಯಶ್‌ಪಾಲ್‌ ಎ. ಸುವರ್ಣ ಪುನರಾಯ್ಕೆಯಾಗಿದ್ದಾರೆ.

ಮಾ. 13ರಂದು ಫೆಡರೇಶನ್‌ನ ಆಡಳಿತ ಮಂಡಳಿಯ ಸಭೆಯಲ್ಲಿ ಮಂಗಳೂರಿನ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಸುಧೀರ್‌ ಕುಮಾರ್‌ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.

ರಾಜ್ಯ ಸರಕಾರದ ಮತ್ತು ಕೇಂದ್ರ ಸರಕಾರದ ಹಲವಾರು ಯೋಜನೆಗಳನ್ನು ಸಂಸ್ಥೆಗೆ ಪಡೆದು ಅನುಷ್ಠಾನ ಗೊಳಿಸಿ 46 ಕೋ.ರೂ. ಇದ್ದ ಸಂಸ್ಥೆಯ ವ್ಯವಹಾರವನ್ನು ಸುಮಾರು 350 ಕೋ. ರೂ. ಮೀರುವಂತೆ ಮಾಡಲಾಗಿದೆ.

15 ವರ್ಷಗಳಲ್ಲಿ ಫೆಡರೇಷನ್‌ ಕಾರ್ಯ ಚಟುವಟಿಕೆಗಳಿಗೆ ಹಲವಾರು ರಾಷ್ಟ್ರ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, 2023ನೇ ಸಾಲಿನಲ್ಲಿ ಕೇಂದ್ರ ಸರಕಾರದ ಮೀನುಗಾರಿಕೆ ಇಲಾಖೆಯ ರಾಷ್ಟ್ರೀಯ ಅತ್ಯು ತ್ತಮ ಮೀನುಗಾರಿಕೆ ಮಹಾ ಮಂಡಲ ಪ್ರಶಸ್ತಿ, 2020ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಮೀನುಗಾರಿಕೆ ಮಹಾ ಮಂಡಲ ಪ್ರಶಸ್ತಿ ಸಹಿತ ಸಹಕಾರ ಕ್ಷೇತ್ರದ ಸಾಧನೆಯನ್ನು ಗುರುತಿಸಿ 2022ನೇ ಸಾಲಿನ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಯಶ್‌ ಪಾಲ್‌ ಸುವರ್ಣ ಭಾಜನರಾಗಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಂಸ್ಥೆಯ ಸದಸ್ಯರಿಗೆ ಉಚಿತ ಆರೋಗ್ಯಕಾರ್ಡ್‌ ವಿತರಣೆ, ಸದಸ್ಯ ಸಹಕಾರ ಸಂಸ್ಥೆಗಳಿಗೆ ಮತ್ತು ಗ್ರಾಹಕರಿಗೆ ಪ್ರೋತ್ಸಾಹಕ ಉಡುಗೊರೆಗಳನ್ನು ನೀಡುತ್ತಾ ಬಂದಿದ್ದು, ವಿಶಿಷ್ಟ ಕಾರ್ಯ ಚಟುವಟಿಕೆಯ ಮೂಲಕ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಜತೆ ಜತೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಮೀನುಗಾರಿಕೆ ಹಾಗೂ ಮೀನುಗಾರರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರಕಾರ ಹಾಗೂ ಮೀನುಗಾರರ ನಡುವಿನ ಕೊಂಡಿಯಾಗಿ ಸೇವೆ ಸಲ್ಲಿಸುವ ಉದ್ದೇಶ ನೂತನ ಆಡಳಿತ ಮಂಡಳಿಯ ಮುಂದಿದೆ.

ಪ್ರಸ್ತುತ ಉಡುಪಿ ಶಾಸಕರಾಗಿ, ಮಹಾಲಕ್ಷ್ಮೀ ಕೋ. ಆಪರೇಟಿವ್‌ ಬ್ಯಾಂಕಿನ ಅಧ್ಯಕ್ಷರಾಗಿ, ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾದ ರಾಷ್ಟ್ರೀಯ ಪ್ರ. ಕಾರ್ಯದರ್ಶಿಯಾಗಿ, ಜಿಲ್ಲಾ ಸಹಕಾರಿ ಯೂನಿಯನ್‌ ನಿರ್ದೇಶಕರಾಗಿದ್ದಾರೆ.

ಫೆಡರೇಶನ್‌ನ ಆಡಳಿತ ಮಂಡಳಿ ಸಭೆಯಲ್ಲಿ ಉಪಾಧ್ಯಕ್ಷರಾಗಿ ಆಯ್ಕೆ ಯಾದ ದೇವಪ್ಪ ಕಾಂಚನ್‌, ನಿರ್ದೇಶಕರಾಗಿ ಆಯ್ಕೆಯಾದ ರಾಮಚಂದ್ರ ಕುಂದರ್‌, ಶಿವಾಜಿ ಎಸ್‌. ಅಮೀನ್‌, ಸುರೇಶ್‌ ಸಾಲ್ಯಾನ್‌, ಚಿದಾನಂದ, ಉಷಾರಾಣಿ ಡಿ.ಕೆ., ಹೇಮಚಂದ್ರ ಸಾಲ್ಯಾನ್‌, ಟಿ. ನಾರಾಯಣ, ಜಯರಾಜ್‌ ಮೆಂಡನ್‌, ಬೇಬಿ ಎಚ್‌. ಸಾಲ್ಯಾನ್‌, ಇಂದಿರಾ, ಸುಧಾಕರ, ಸುಧೀರ್‌ ಶ್ರೀಯಾನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ದರ್ಶನ್‌ ಕೆ.ಟಿ. ಉಪಸ್ಥಿತರಿದ್ದರು.