ದೇಶಾದ್ಯಂತ ಧೂಳೆಬ್ಬಿಸಿದ ಎರಡು ಮಾಸ್ ಸಿನಿಮಾಗಳು ಎದುರು ಬದುರಾಗಿ ನಿಂತಿವೆ. ಅಲ್ಲು ಅರ್ಜುನ್ ಅಭಿನಯದ ತೆಲುಗು ಚಿತ್ರ ಪುಷ್ಪ ನಿರ್ಮಾಪಕರು ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ನಟ ಫಹಾದ್ ಫಾಸಿಲ್ ಅವರು ಭವಿಷ್ಯದಲ್ಲಿ `ಪುಷ್ಪ 3` ತೆರೆಮೇಲೆ ಮೂಡಿ ಬರುವ ಸಾಧ್ಯತೆಯಿದೆ ಎಂದು ಬಹಿರಂಗಪಡಿಸಿದ್ದರು.
ಒಂದನೇ ಭಾಗದಲ್ಲಿ ಫಹಾದ್ ಭಾಗವಿದ್ದ ಪೊಲೀಸ್ ಸ್ಟೇಷನ್ ದೃಶ್ಯಕ್ಕೆ ವ್ಯಾಪಕ ಮೆಚ್ಚುಗೆ ಸಿಕ್ಕಿದ ಬಳಿಕ ನಿರ್ಮಾಪಕರು ಪುಷ್ಪಾ-2 ಅನ್ನು ತೆರೆಗೆ ತರುವ ನಿರ್ಧಾರ ಮಾಡಿದ್ದರು. ಇದೀಗ ನಿರ್ಮಾಪಕರು ಚಿತ್ರವನ್ನು ಮೂರು ಭಾಗಗಳಾಗಿ ವಿಸ್ತರಿಸಲು ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದ್ದರು.
ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೆ ಕನ್ನಡದ ನಟ ಯಶ್ ಅಭಿನಯದ `ಕೆಜಿಎಫ್` ಚಿತ್ರದ ಅಭಿಮಾನಿಗಳು ‘ಪುಷ್ಪ’ ನಿರ್ಮಾಪಕರನ್ನು “ತಮ್ಮ ಹೆಜ್ಜೆಗಳನ್ನು ಅನುಸರಿಸುತ್ತಿರುವುದಕ್ಕಾಗಿ” ಟ್ರೋಲ್ ಮಾಡಲು ಪ್ರಾರಂಭಿಸಿದರು. ಬ್ರ್ಯಾಂಡ್ ಕೆಜಿಎಫ್ ಹೆಜ್ಜೆಗಳನ್ನು ಅನುಸರಿಸಿ ಬ್ರೋ… ಎಂದು ಒಬ್ಬ ಅಭಿಮಾನಿ ಬರೆದರೆ ಮತ್ತೊಬ್ಬರು ನಿಮ್ಮ ಕಥಾ ಹಂದರವೂ ‘ರಾಅಗ್ಸ್ ಟು ರಿಚಸ್’ ನ ನಮ್ಮ ಕಥೆಯಂತೆಯೆ ಇದೆ ಎಂದು ಟಾಂಗ್ ಕೊಟ್ಟಿದ್ದಾರೆ.
ದೇಶದಲ್ಲಿ ಕ್ರೇಜ್ ಹುಟ್ಟುಹಾಕಿದ ಎರಡು ಸಿನಿಮಾಗಳ ಅಭಿಮಾನಿಗಳು ಮುಖಾಮುಖಿಯಾಗಿದ್ದಾರೆ. ಗಲ್ಲಾಪೆಟ್ಟಿಗೆಯನ್ನು ಧೂಳೆಬ್ಬಿಸಿದ ದಕ್ಷಿಣ ಭಾರತದ ಎರಡು ಸಿನಿಮಾಗಳಲ್ಲಿ ಯಾವುದು ಹೆಚ್ಚು ಎನ್ನುವ ‘ಸ್ಟಾರ್ ವಾರ್’ ಶುರುವಾಗುವ ಲಕ್ಷಣಗಳು ಕಾಣಿಸುತ್ತಿವೆ.