ಡಿ.15: ಯರ್ಲಪಾಡಿಯಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಕಾರ್ಕಳ: ಯರ್ಲಪಾಡಿ ಗ್ರಾ.ಪಂ. ಹಾಗೂ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಹೊನಲು ಬೆಳಕಿನ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟ ಸ್ವಚ್ಛ ಯರ್ಲಪಾಡಿ ಟ್ರೋಪಿ-೨೦೧೮ ಡಿ. ೧೫ ರಂದು ಯರ್ಲಪಾಡಿ ಹಿಲ್ ವಿವ್ ಗಾರ್ಡನ್‌ನಲ್ಲಿ ನಡೆಯಲಿದೆ.

ಈ ಬಗ್ಗೆ ಪಂಚಾಯತ್ ಪಿಡಿಒ ಪ್ರಮೀಳಾ ಅವರು ಡಿ. ೧೩ರಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಸ್ವಚ್ಛಭಾರತ- ಸ್ವಚ್ಛ ಯರ್ಲಪಾಡಿ ಅಭಿಯಾನದಡಿ ಸ್ವಚ್ಛತೆಗಾಗಿ ಕ್ರೀಡೆಯನ್ನು ಗ್ರಾಮದ ಸುಮಾರು ೬೪ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ. ಆ ಮೂಲಕ ಸಂಪನ್ಮೂಲವನ್ನು ಕ್ರೋಢಿಕರಣ ಮಾಡಿ ಪಂಚಾಯತ್ ಮೂಲ ಸೌಕರ್ಯವನ್ನು ಉತ್ತಮ ಪಡಿಸಲು ಬಳಸಲಾಗುವುದು. ಅಂದು ರಾತ್ರಿ ಮಸ್ಕಿರಿ ಕುಡ್ಲ ಇವರಿಂದ ತೆಲಿಕೆ ಬಂಜಿ ನಿಲಿಕೆ ತುಳು ಹಾಸ್ಯ ನಾಟಕ ನಡೆಯಲಿದೆ ಎಂದರು.

ಯರ್ಲಪಾಡಿ ಗ್ರಾಮದವರಿಗೆ ಗ್ರಾಮಮಟ್ಟದ ಶಿವಾಜಿ ಟ್ರೋಪಿ-೨೦೧೮ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿದೆ. ಮುಂಬಯಿ ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ ಅವರು ವಾಲಿಬಾಲ್ ಪಂದ್ಯಾಟ ಉದ್ಘಾಟಿಸಲಿದ್ದು, ಶಾಸಕ ವಿ. ಸುನಿಲ್ ಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹತ್ತಾರು ಗಣ್ಯರು ಉಪಸ್ಥಿತರಿರುವರು. ಡಿ. ೧೬ರಂದು ಪೂರ್ವಾಹ್ನ ೯ಗಂಟೆಯಿಂದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದರು.