ಯಾಂತ್ರೀಕೃತ ಮೀನುಗಾರಿಕೆ ನಿಷೇಧ: ಉಲ್ಲಂಘಿಸಿದರೆ ಸಬ್ಸಿಡಿ ಇಲ್ಲ

ಉಡುಪಿ, ಮೇ 27: ಕರ್ನಾಟಕ ಕರಾವಳಿ ಮೀನುಗಾರಿಕೆ (ನಿಯಂತ್ರಣ) ಕಾಯ್ದೆಯನ್ವಯ ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಎಲ್ಲಾ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮಥ್ರ್ಯಕ್ಕಿಂತ ಮೇಲ್ಪಟ್ಟ ಇನ್‍ಬೋರ್ಡ್ ಅಥವಾ ಔಟ್‍ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂನ್ 1 ರಿಂದ ಜುಲೈ 31 ರವರೆಗೆ ಒಟ್ಟು 61 ದಿನಗಳ ನಿಷೇಧ ಆದೇಶ ಹೊರಡಿಸಿರುತ್ತಾರೆ.

ಅಲ್ಲದೆ ಕೇಂದ್ರ ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯವು ಕರ್ನಾಟಕ ಸೇರಿದಂತೆ ಪಶ್ಚಿಮ ಕರಾವಳಿಯ EEZ (12 ರಿಂದ 200 ನಾಟಿಕಲ್ ಮೈಲಿ) ಜಲಪ್ರದೇಶದಲ್ಲಿ ಜೂನ್ 1 ರಿಂದ ಜುಲೈ 31 ರವರೆಗೆ ಒಟ್ಟು 61 ದಿನಗಳ ಏಕರೂಪದ ಮೀನುಗಾರಿಕೆ ನಿಷೇದವನ್ನು ಜಾರಿಗೊಳಿಸಿದೆ.

ಈ ಮೀನುಗಾರಿಕೆ ನಿಷೇಧದ ಸರ್ಕಾರದ ಆದೇಶವನ್ನು ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು/ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆಯಲ್ಲಿ ವಿಧಿಸಲಾಗಿರುವ ದಂಡನೆಗಳಿಗೆ ಹೊಣೆಯಾಗುವುದಲ್ಲದೇ ಒಂದು ವರ್ಷದ ಅವಧಿಗೆ ಡೀಸೆಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗುತ್ತಾರೆ. ಎಲ್ಲಾ ಮೀನುಗಾರರು ಈ ಆದೇಶವನ್ನು ಪಾಲಿಸಿ ಸರ್ಕಾರದೊಂದಿಗೆ ಸಹಕರಿಸುವಂತೆ ಉಡುಪಿ ಮೀನುಗಾರಿಕಾ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.