ಒಂದಷ್ಟು ಪ್ರಶ್ನೆಗಳ ಜೊತೆಗೆ ಕಾಡುವ ಮೋಹಕ ಕಿರುಚಿತ್ರ “ಯಕ್ಷ ಪ್ರಶ್ನೆ”:ಅಂತದ್ದೇನಿದೆ ಈ ಸಿನಿಮಾದಲ್ಲಿ?

ನೂರಾರು ಪ್ರಶ್ನೆಗಳನ್ನು ನಮ್ಮಲ್ಲಿ ಹುಟ್ಟಿಸುತ್ತ,ಪ್ರತಿಯೊಂದು ಪಾತ್ರವನ್ನು ಕಾಡಿಸುತ್ತ ತುಳುನಾಡಿನ ಸೊಗಡು,ಪರಂಪರೆ, ಪ್ರಾಕೃತಿಕ ವೈಭವಗಳನ್ನು ಕಣ್ಣೊಳಗೆ ಶಾಶ್ವತವಾಗಿ ಮೂಡಿಸುವ ಕಿರುಚಿತ್ರ “ಯಕ್ಷಪ್ರಶ್ನೆ”. ಸಂತೋಷ್ ಎಂ ಪುಚೇರ್ ಅವರು ನಿರ್ದೇಶಿಸಿರುವ “ಯಕ್ಷಪ್ರಶ್ನೆ ಜು.9 ರಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿ ಸದ್ದು ಮಾಡಿದೆ.ಆ ಕಿರುಚಿತ್ರದ ಕುರಿತು ಉಡುಪಿXPRESS ನ ಕಿರುನೋಟ

ಈ ಹೊಸ ಕಾಲಘಟ್ಟದಲ್ಲಿ ಹೊಸ ಹೊಸ ಕನಸುಗಳನ್ನು ಹೊತ್ತು ಒಂದಷ್ಟು ಹೊಸ ಮನಸ್ಸುಗಳು ಸೇರಿ ನಿರ್ಮಿಸಿದ ಕಿರುಚಿತ್ರಗಳು ರಾಶಿ ರಾಶಿಯಾಗಿ ಬರುತ್ತಲೇ ಇದೆ.ಅವುಗಳಲ್ಲಿ ಒಂದಷ್ಟು ಕಿರುಚಿತ್ರಗಳು ಹಾಗೆ ಒಂದು ಹೀಗೆ ಹೋಗುತ್ತದೆ ಬಿಟ್ಟರೆ ಪ್ರೇಕ್ಷಕರ ಮೇಲೆ ಅಂತಹ ಪರಿಣಾಮವನ್ನೇನೂ ಬೀರುವುದೇ ಇಲ್ಲ. ಆದರೆ ಕೆಲವು ಚಿತ್ರಗಳು ಮಾತ್ರ ಪ್ರೇಕ್ಷಕನನ್ನು ಕಾಡಿಸುತ್ತದೆ,ಅಳಿಸುತ್ತದೆ,ಅರಳಿಸುತ್ತದೆ, ನಗಿಸುತ್ತದೆ.ಯಕ್ಷಪ್ರಶ್ನೆ ಅನ್ನೋ ಹೊಸ ಛಾಪುಳ್ಳ ಕಿರುಚಿತ್ರಕ್ಕೆ ಕೂಡ ನಮ್ಮನ್ನು ಅಳಿಸುವ, ಅರಳಿಸುವ ಎಲ್ಲಾ ಗುಣಗಳಿದೆ.ಎಷ್ಟೆಂದರೆ ಇಡೀ ಚಿತ್ರಕ್ಕೆ ಪ್ರೇಕ್ಷಕನ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯಿದೆ.ಮನಸ್ಸನ್ನು ಮೀಟುವ ಪ್ರಖರತೆ ಇದೆ.

ಯಸ್, ಇದೊಂದು ಪಕ್ಕಾ ಗ್ರಾಮೀಣ ಸೊಗಡಿದ ಸೊಗಸಿರುವ ಚಿತ್ರ. ಅಪ್ಪನ ಸಿಟ್ಟಿನಿಂದ ಮನೆಯಿಂದ ಹೊರಹಾಕಲ್ಪಟ್ಟ ಮಗ ತನ್ನದೇ ಆಸಕ್ತಿಯಲ್ಲಿ ಯಕ್ಷಗಾನ ಕಲಾವಿದನಾಗುತ್ತಾನೆ. ಆದರೂ ಅಪ್ಪನಿಂದ ದೂರಾದ ಚಿಂತೆ ಮಗನಿಗೆ,ಮಗನನ್ನು ನೋಡಲಾಗದ ಸ್ಥಿತಿ ಅಮ್ಮನಿಗೆ. ಇಂತಹ ಸ್ಥಿತಿಯಲ್ಲಿ ಊರಲ್ಲಿ “ಮಗನ ಯಕ್ಷಗಾನ ಪ್ರದರ್ಶನವನ್ನು ನೋಡಲು ಹೊರಡುತ್ತಾಳೆ ಅಮ್ಮ. ಮುಂದೇನಾಗಲಿದೆ?ನಿಜವಾಗಲೂ ಪ್ರೇಕ್ಷಕನಿಗೆ “ಯಕ್ಷಪ್ರಶ್ನೆ”ಕಾಡುವುದು ಯಾವಾಗ,ಸಿನಿಮಾದ ಜೀವವಿರೋದು ಎಲ್ಲಿ, ಕುತೂಹಲವಿರೋದು ಎಲ್ಲಿ ಎನ್ನುವುದಕ್ಕೆ ನೀವೇ  ಕಿರುಚಿತ್ರ ನೋಡಿ ಉತ್ತರ ಕಂಡುಕೊಳ್ಳಿ.

ಅವಿನಾಶ್ ಬಂಗೇರ ನಿರ್ಮಾಣದ”ಯಕ್ಷಪ್ರಶ್ನೆ”ಕಿರುಚಿತ್ರಕ್ಕೆ ಮೂಲ ಕತೆ ಸುಶಾಂತ್ ಕೋಟ್ಯಾನ್ ಬರೆದಿದ್ದಾರೆ. ಸಂತೋಷ್ ಎಂ ಪುಚೇರ್  ಚಿತ್ರಕಥೆ ಮತ್ತು ನಿರ್ಧೇಶನ ಸೊಗಸಾಗಿದೆ. ಸಿನಿಮಾ ಟೋಗ್ರಫಿಯಲ್ಲಿ ದರ್ಶನ್ ಆಚಾರ್ಯ,ಸುಮಂತ್ ಪೂಜಾರಿ,ಡ್ರೋಣ್ ಕ್ಯಾಮರಾದಲ್ಲಿ ಮಹೇಶ್ ಶೆಣೈ ಕಾರ್ಕಳ ದುಡಿದಿದ್ದಾರೆ. ರಾಜೇಶ್ ಭಟ್ ಮೂಡಬಿದ್ರೆ ಅವರ ಉತ್ತಮ ಸಂಗೀತವಿದೆ.

ಕದ್ರಿ ನವನೀತ್ ಶೆಟ್ಟಿ ಕಿರುಚಿತ್ರದಲ್ಲಿ ಮೊದಲ ಬಾರಿ ಬಣ್ಣ ಹಚ್ಚಿದ್ದಾರೆ, ತುಳುನಾಡಿನ ಕ್ರಿಯಾಶೀಲ ಕಲಾವಿದೆ ರೂಪಶ್ರೀ ವರ್ಕಾಡಿ, ರಂಗ ಭೂಮಿ ಕಲಾವಿದ ಶಿವಪ್ರಕಾಶ್ ಪೂಂಜ, ಮೊದಲಾದ ಕಲಾವಿದರ ಪಾತ್ರಗಳು ಇಡೀ ಕಿರುಚಿತ್ರಕ್ಕೆ ಪ್ರಬುದ್ಧತೆ ನೀಡಿದೆ.

ಒಟ್ಟಾರೆ ಯಕ್ಷಪ್ರಶ್ನೆ ಎಲ್ಲರೂ ನೋಡಬಹುದಾದ ಚಂದದ ಚಿತ್ರ, ನೀವೂ ಒಮ್ಮೆ ಈ ಚಿತ್ರ ನೋಡಿ, ಚಿತ್ರದ ಸೊಗಡು ನಿಮ್ಮನ್ನು ಕಾಡಲಿ.

-ಪ್ರಸಾದ್ ಶೆಣೈ

ಚಿತ್ರ ನೋಡಲು ಯುಟ್ಯೂಬ್ ಲಿಂಕ್ ಇಲ್ಲಿದೆ:

https://youtu.be/26FY3QEGGjY