ಬೊರಿವಲಿ: ದೈವ ಸಂಭೂತ ಕಲೆ ಯಕ್ಷಗಾನ ತಾಳಮದ್ದಲೆಗಳು ದೇವಸ್ಥಾನದಲ್ಲಿ ಜರುಗಿದರೆ ಅದರ ಪ್ರಾಮುಖ್ಯತೆಯಿಂದ ಹೆಚ್ಚುತ್ತದೆ. ಯಕ್ಷಗಾನ ಕರಾವಳಿ ಸಂಸ್ಕೃತಿ ಪರಂಪರೆ ಇಂತಹ ಕಾರ್ಯಕ್ರಮಗಳು ದೇವಸ್ಥಾನದಂತಹ ಪುಣ್ಯ ಸ್ಥಳಗಳಲ್ಲಿ ಜರುಗುವುದರಿಂದ ಕಲಾವಿದರಿಗೆ ಕಲಾಮಾತೆಯ ಅನುಗ್ರಹವೂ ದೊರೆಯುವುದು. ಉತ್ತಮ ಕಥಾ ಪ್ರಸಂಗಗಳೊಂದಿಗೆ ಊರಿನ ವೈವಿಧ್ಯ ನುರಿತ ಕಲಾವಿದರನ್ನು ಮಹಾನಗರದ ಯಕ್ಷಗಾನ ಕಲಾಭಿಮಾನಿಗಳಿಗೆ ಪರಿಚಯಿಸುವ ಅಜೇಕಾರು ಕಲಾಭಿಮಾನಿ ಬಳಗದ ಸಂಯೋಜಕರಾದ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ಕಾರ್ಯ ಸಾಧನೆ ಪ್ರಶಂಸನೀಯ ಎಂದು ಮಹಿಷಮರ್ಧಿನಿ ದೇವಸ್ಥಾನ ಜಯರಾಜ್ ನಗರ ಬೊರಿವಿಲಿ ಇದರ ಆಡಳಿತ ಮೋಕ್ತೆಸರ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ ಶೆಟ್ಟಿ ಅಭಿಪ್ರಾಯ ಪಟ್ಟರು.
ಅವರು ಜು. 16ರಂದು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಶ್ರಯದಲ್ಲಿ ಆಯೋಜಿಸಲಾದ ಅಜೆಕಾರು ಕಲಾಭಿಮಾನಿ ಬಳಗದ ಭಕ್ತ ಮಯೂರ ಧ್ವಜ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲರಿಂದಲೂ ಭಾಗವತರಾಗಲು ಸಾಧ್ಯವಿಲ್ಲ. ಅದು ಸಿದ್ದಿ ಕಲೆ. ಅಜೇರು ಕಾವ್ಯಶ್ರೀ ಈ ದೇವಸ್ಥಾನದಲ್ಲಿ ಜರುಗಿದ ತಾಳಮದ್ದಲೆ ಕಾರ್ಯಕ್ರಮದ ಮೂಲಕ ಶ್ರೀದೇವಿಯ ಅನುಗ್ರಹದಿಂದ ಇಂದು ಪ್ರಸಿದ್ಧಿ ಪಡೆದ ಭಾಗವತರಾಗಿದ್ದಾರೆ. ಅಂತೆಯೇ ಇಂದಿನ ಭಾಗವತರಾದ ಸುಶ್ರಾವ್ಯ ಕಂಠಸಿರಿಯ ಭರತ್ ಶೆಟ್ಟಿ ಸಿದ್ದಕಟ್ಟೆ ಇಲ್ಲಿನ ಶ್ರೀ ಮಹಿಷಮರ್ಧಿನಿ ದೇವಿಯ ಅನುಗ್ರಹದಿಂದ ಉದಯೋನ್ಮುಖ ಭಾಗವತರಾಗಿ ಖ್ಯಾತಿ ಪಡೆಯಲಿದ್ದಾರೆ ಎಂದು ಹೇಳಿ ಸುದೀರ್ಘ ಅವಧಿಯಲ್ಲಿ ಜರುಗಿದ ಶ್ರೀ ಕೃಷ್ಣನ ಕಥಾ ಭಾಗವನ್ನು ತನ್ಮಯತೆಯಿಂದ ಆಲಿಸಿದ ಎಲ್ಲಾ ಯಕ್ಷಗಾನ ಕಲಾಭಿಮಾನಿಗಳಿಗೆ ವಂದಿಸಿದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಸ್ಥಾಪಕ ವಂಶಸ್ಥ ಮೊಕ್ತೇಸರ ಕಲ್ಲಮುಂಡ್ಕೂರು ಹರಿಯಾಳ ಗುತ್ತು ಜಯರಾಜ ಶೆಟ್ಟಿ ದಂಪತಿಗಳು, ಪರಿವಾರದವರು, ಮೊಕ್ತೇಸರ ಜಯಪಾಲಿ ಅಶೋಕ್ ಶೆಟ್ಟಿ, ಶಾಲಿನಿ ಪ್ರದೀಪ್ ಶೆಟ್ಟಿ, ಜಯಂತ್ ಶೆಟ್ಟಿ ಅಮೃತ ಜೆ ಶೆಟ್ಟಿ, ವೆಂಕಟರಮಣ ತಂತ್ರಿ ಅರ್ಚಕ ವೃಂದ ದೇವಸ್ಥಾನದ ಆಡಳಿತ ಮಂಡಳಿ ಭಜನಾ ಮಂಡಳಿ ಸದಸ್ಯರು ಸ್ಥಳೀಯ ಗಣ್ಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಯಕ್ಷಗಾನ ಕಲಾಭಿಮಾನಿಗಳು ಬಹುಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಬಳಿಕ ಜರುಗಿದ ಭಕ್ತ ಮಯೂರ ಧ್ವಜ ಪೌರಾಣಿಕ ಕಥಾ ಭಾಗ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಭರತ್ ಶೆಟ್ಟಿ ಸಿದ್ದಕಟ್ಟೆ ಚಂಡೆ ಪ್ರಶಾಂತ್ ಶೆಟ್ಟಿ ಒಗೆನಾಡು ಮದ್ದಳೆ ಸೌಶೀಲ್ ರಾವ್ ಪುತ್ತಿಗೆ ಹಾಗೂ ಅರ್ಥದಾರಿಗಳಾಗಿ ತಾಮ್ರದ್ವ ಜ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ ನಕುಲ ಧ್ವಜ ಮತ್ತು ಕುಮುದ್ವತಿಯಾಗಿ ಶಶಿಕಾಂತ್ ಶೆಟ್ಟಿ ಪೆರ್ಮುದೆ ಶ್ರೀ ಕೃಷ್ಣನಾಗಿ ಹರೀಶ್ ಭಟ್ ಬಳಂತಿ ಮುಗುರು ಅರ್ಜುನನಾಗಿ ಅವಿನಾಶ್ ಶೆಟ್ಟಿ ಶ್ರೀ ಕೃಷ್ಣನಾಗಿ ಪಕಳಕುಂಜ ಶ್ಯಾಮ್ ಭಟ್ ಭಾಗವಹಿಸಿದರು.
ಒಡೆಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬೈ ಘಟಕದ ಗೌರವ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆ ನಿರೂಪಿಸಿದರು.