ವೃತ್ತಿ ನಿರತರಿಗೆ ಪ್ರವೃತ್ತಿಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳವುದು ಕಷ್ಟ ಸಾಧ್ಯ. ಪ್ರವೃತ್ತಿಗಳತ್ತ ಮನಸ್ಸು ತುಡಿಯುತ್ತಿದ್ದರೂ ಮಾಡುವ ವೃತ್ತಿಗೆ ಸಂಪೂರ್ಣ ನ್ಯಾಯ ಸಲ್ಲಿಸಬೇಕಾಗುತ್ತದೆ. ವೃತ್ತಿ ಉದರ ಪೋಷಣೆಯ ಮೂಲ. ಪ್ರವೃತ್ತಿ ಮಾನಸಿಕ ಉಲ್ಲಾಸ, ಉತ್ಸಾಹಗಳ ಸೆಲೆ. ಈ ಸೆಲೆಯ ನೆಲೆಯನ್ನು ಕಲಾತ್ಮಕವಾಗಿ ಬೆಳೆಸಿ, ಉಳಿಸಿಕೊಳ್ಳಲು ದೈಹಿಕವಾಗಿ, ಮಾನಸಿಕವಾಗಿ ನಿತ್ಯ ನಿರಂತರ ಶ್ರಮಿಸಬೇಕಾಗುತ್ತದೆ. ವಿಧಿಯಿತ್ತ ತನ್ನ ಪಾಲಿನ ಬದಕುನ್ನು ಹಸನಾಗಿ, ಸೊಗಸಾಗಿ, ತಂಪಾಗಿ ಕಂಪಬೀರುತ್ತ ಬಾಳಬೇಕು. ಅದರೊಂದಿಗೆ ತನ್ನ ಬೊಗಸೆಗೆ ದಕ್ಕುವಷ್ಟು ತನ್ನ ಸುತ್ತ ಮುತ್ತಣದ ಪ್ರಕೃತಿ, ಜೀವಜಗತ್ತು, ಸಮಾಜ ಕೂಡ ತಂಪಾಗಿ, ಸೊಂಪಾಗಿ ಬಾಳುವಂತೆ ಮಾಡಬೇಕು. ತಾನು ಕೇವಲ ಬದುಕುವುದಲ್ಲ. ಉತ್ತಮ ಸ್ತರದಲ್ಲಿ ಆದರ್ಶವೆನಿಸುವಂತೆ ಬದುಕಬೇಕು. ಹಾಗೆಯೇ ತನ್ನ ಸುತ್ತಲ ಸಮಾಜ ಆ ಪರಿಯ ಬದುಕು ಬದುಕುವ ಕಾಣ್ಕೆಯ ಕನಸನ್ನು ಕಾಣುವ ಒಳಗಣ್ಣ ಆರ್ದ್ರತೆನ್ನು ಕಾಪಿಟ್ಟುಕೊಂಡಿರಬೇಕು. ಸ್ವಾರ್ಥ, ಲೋಭ, ಸ್ವಜನ ಹಿತಾಸಕ್ತಿ, ಮೇಲರಿಮೆ, ಹೆಸರಿನ ಹಪಹಪಿತನಗಳು ಸನಿಹದಲ್ಲೂ ಸುಳಿಯಬಾರದು. ಸಮಷ್ಟಿ ಪ್ರಜ್ಞೆ, ನಿಸ್ವಾರ್ಥ, ನುಡಿಯಂತೆ ನಡೆ,ಪರಹಿತದ ಮಂತ್ರಗಳ ಸಿದ್ಧಿಯಾಗಬೇಕು.
ಪ್ರಸ್ತುತ ಕಾಲಘಟ್ಟದಲ್ಲಿ ಇಂಥವರ ಸಂಖ್ಯೆ ಹೇಳಿಕೊಳ್ಳುವಷ್ಟು ಇಲ್ಲದಿದ್ದರೂ ಅಲ್ಲೊಂದು ಇಲ್ಲೊಂದು ಕಾನನದ ಪುಷ್ಪಗಳು ಗೋಚರಿಸುವುದಂತು ಸತ್ಯ. ಯಕ್ಷಾರಾಧಕ ಕೆ. ಎಸ್. ಮಂಜುನಾಥ್ ಇಂತಹ ವನಸುಮಗಳಲ್ಲಿ ಒಬ್ಬರು.
ನಿತ್ಯ ಹರಿದ್ವರ್ಣದ ವನಗಳಿಂದ ಸುಶೋಭಿತಗೊಂಡು ಪ್ರಕೃತಿ ತಾಯಿ ಪಚ್ಚನೆ ಸೀರೆ ತೊಟ್ಟು ಕಂಗೊಳಿಸುವ ಮಲೆನಾಡು. ಶೃಂಗೇರಿಯಲ್ಲಿ ವಿದ್ಯಾದೇವಿ ಶ್ರೀಶಾರದೆ, ಹೊರನಾಡಲ್ಲಿ ಅನ್ನಪೂರ್ಣ ದೇವಿಯರು ನೆಲೆಗೊಂಡಿರುವ ಧಾರ್ಮಿಕ, ಸಾತ್ವಿಕತೆಯ ಕೇಂದ್ರಗಳು. ಇಲ್ಲಿಯ ಸಮೀಪದ ಕೊಪ್ಪ ತಾಲ್ಲೂಕಿನ ಹರಿಹರಪುರದ ನಿವಾಸಿ ಮಂಜುನಾಥ್. ಅವರ ಸಾಧನೆಗಳನ್ನು ಪರಿಚಯಿಸಲು ಈ ಪುಟ್ಟ ಲೇಖನದ ಆಳ ಅಗಲಗಳು ಕಿರಿದಾಗುತ್ತವೆ, ಶಬ್ದಗಳು ತಡವರಿಸುತ್ತವೆ. ಹರಿಹರಪುರದಲ್ಲಿ ಜನನ ಮತ್ತು ಪ್ರಾಥಮಿಕ ಶಿಕ್ಷಣ. ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಪ್ರೌಢ ಶಿಕ್ಷಣ. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಿಂದ ವಿಜ್ಞಾನದಲ್ಲಿ ಸ್ನಾತಕ ಪದವಿ. ಸಂಸ್ಕೃತದಲ್ಲಿ ಕೋವಿದ ಪದವಿ. ಬಿ. ಎಸ್. ಎನ್. ಎಲ್. ದೂರಸಂಪರ್ಕ ಸಂಸ್ಥೆಯಲ್ಲಿ ವೃತ್ತಿ ನಿರತರಾಗಿ ಸಬ್. ಡಿವಿಜನಲ್ ಇಂಜಿನಿಯರ್ ಆಗಿ ನಿವೃತ್ತಿಯನ್ನು ಹೊಂದಿದವರು. ವೃತ್ತಿಯಲ್ಲಿ ಇರುವಾಗಲೂ ತನ್ನೊಳಗಿರುವ ಆತ್ಮೀಯ ಯಕ್ಷಕಲೆಯನ್ನು ಉಳಿಸಿ, ಬೆಳೆಸುತ್ತ ಅವಕಾಶ ಸಿಕ್ಕಾಗ ಲೋಕಮುಖಗೊಳಿಸುತ್ತ ಬಂದವರು.
ಮಂಜುನಾಥ್ ಅವರು ಶ್ರೀ ಮಂಜುನಾಥ ಎಂಬ ಅಂಕಿತನಾಮದಲ್ಲಿ 27,000ದಷ್ಟು ಪ್ರಾಸಬದ್ಧವಾಗಿ, ಅರ್ಥಭರಿತವಾದ ವಚನಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಬಹು ಸಂಖ್ಯೆಯ ವಚನಗಳು ವೃತ್ತಿ ನಿಮಿತ್ತ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವಾಗಲೇ ರಚಿತಗೊಂಡವುಗಳು. ಕಾವ್ಯ, ಭಕ್ತಿ, ಭಜನೆ, ದೇವರ ಸ್ತುತಿಗಳಿಗೆ ಸಂಬಂಧಿಸಿದಂತೆ ಸ್ತೋತ್ರ ಮಂಜರಿ, ಭಕ್ತಿ ಮಂಜರಿ, ಕವನ ಮಂಜರಿ ಕಾವ್ಯ ಮಂಜರಿ ಮೊದಲಾದ ಎಂಟು ಕೃತಿಗಳನ್ನು ರಚಿಸಿದ್ದಾರೆ. ಈವರೆಗೆ ಪುರಾಣ, ಸ್ಥಳ ಪುರಾಣ, ಭಾಗವತದ ಕಥೆಗಳಿಗೆ ಸಂಬಂಧಿಸಿದಂತೆ ಶ್ರೀ ಗಣೇಶೊದ್ಭವ, ಗೋವರ್ಧನೋದ್ಧರಣ, ಚಿತ್ರೋಪಾಖ್ಯಾನ, ಕೆರೆಗೆ ಹಾರ, ಹರಿಹರಪುರ ಕ್ಷೇತ್ರ ಮಹಾತ್ಮೆ ಮುಂತಾದ 32 ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ತನ್ನ ನೇತೃತ್ವದಲ್ಲಿ 31 ಯಕ್ಷಗಾನ ಬಯಲಾಟಗಳನ್ನು ಆಡಿಸಿದ್ದಾರೆ. 400ಕ್ಕೂ ಹೆಚ್ಚು ತಾಳಮದ್ದಲೆಗಳಲ್ಲಿ ಸ್ವತಃ ಅರ್ಥಧಾರಿಯಾಗಿ ಪಾಲ್ಗೊಂಡು ನಡೆಸಿಕೊಟ್ಟಿದ್ದಾರೆ.
ಎರಡು ಸಲ ಏಳೇಳು ದಿನಗಳ ಯಕ್ಷಗಾನ ಸಪ್ತಾಹವನ್ನು ಏರ್ಪಡಿಸಿದ ಯಕ್ಷ ಸಂಘಟಕ. ಕರಾವಳಿಯ ಮೇರು ಕಲಾವಿದರನ್ನು ಕರೆದು ಯಕ್ಷಕಲೆಯನ್ನು ಪ್ರಚುರಪಡಿಸಿ, ಸನ್ಮಾನಿಸುವ ಅಪರೂಪದ ವ್ಯಕ್ತಿತ್ವ ಮಂಜುನಾಥರದ್ದು.
ಪ್ರಕೃತಿಯಾರಾಧನೆ ಹಾಗೂ ದೇವತಾರಾಧನೆಗೆ ಸಂಬಂಧಿಸಿ ಕಾಳನಾಯಕನಕಟ್ಟೆ, ಕೋಟೇಶ್ವರ, ನೀಲಾವರಗಳಲ್ಲಿ ನಾಗಪ್ರತಿಷ್ಠೆ ಹಾಗೂ ಕಾಳನಾಯಕನಕಟ್ಟೆ ಇಲ್ಲಿ ದೇವಸ್ಥಾನ ಮಾಡಿಸಿದ್ದಾರೆ. ಭದ್ರಾವತಿ, ಮಂಗಳೂರು ಬಾನುಲಿಗಳಲ್ಲಿ ಚಿಂತನ, ಯುವವಾಣಿ ಕಾರ್ಯಕ್ರಮಗಳಲ್ಲಿ ಹಲವು ಸಲ ಭಾಗವಹಿಸಿದ್ದಾರೆ. ಹತ್ತಕ್ಕಿಂತ ಹೆಚ್ಚು ಸಂಘ ಸಂಸ್ಥೆಗಳನ್ನು ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ. ಮಂಜುನಾಥ ಅವರು ಬರೆದಿರುವ ‘ಸಾಕು ನಿಲ್ಲಿಸಿ ಪ್ರಾಣಿ ಬಲಿಯ’ ಎಂಬ ಗೀತೆಯನ್ನು ಬೀದರಿನ ಜನಪ್ರಿಯ ಪ್ರಕಾಶನದವರು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಿದ್ದಾರೆ. ಭಕ್ತ ಜನತೆಗಾಗಿ ಹಲವು ಬಾರಿ ಧರ್ಮಸ್ಥಳ, ಸುಬ್ರಹ್ಮಣ್ಯ, ಕಟೀಲು ಹಾಗೂ ಪೊಳಲಿ ಕ್ಷೇತ್ರಗಳಿಗೆ ಪಾದಯಾತ್ರೆಗಳನ್ನು ಸಂಯೋಜಿಸಿದ್ದಾರೆ. ಶಾಲೆ ಕಾಲೇಜುಗಳಿಗೆ ಹೋಗಿ ಮಹಾಭಾರತ, ರಾಮಾಯಣ, ಪುರಾಣ ಕತೆಗಳಿಗೆ ಸಂಬಂಧಿಸಿದ ರಸಪ್ರಶ್ನೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತ ಬಂದಿದ್ದಾರೆ.
ವೃತ್ತಿಯಿಂದ ನಿವೃತ್ತಿ ಹೊಂದಿದ ತರುವಾಯ ಮಂಜುನಾಥ್ ಅವರು ಯಕ್ಷಗಾನ, ಸಾಹಿತ್ಯ, ಸಂಘಟನೆಗಳಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ಮಂಜುನಾಥ್ ಅವರ ಸಾಹಿತ್ಯಿಕ, ಸಂಘಟನಾ, ಯಕ್ಷಗಾನದ ಸೇವೆಗಳನ್ನು ಪರಿಗಣಿಸಿ ರಾಜ್ಯಾದ್ಯಂತದ ಮಠಗಳು, ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ರಾಜ್ಯಮಟ್ಟದ ಸದ್ಭಾವನಾ ಪ್ರಶಸ್ತಿ, ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ, ದ. ರಾ. ಬೇಂದ್ರೆ ಕಾವ್ಯ ಪುರಸ್ಕಾರ, ಬಸವಶಾಂತಿ, ಬಸವಜ್ಯೋತಿ ಪ್ರಶಸ್ತಿ, ಸಾಹಿತ್ಯ ಸಿರಿ ಪ್ರಶಸ್ತಿ, ರೋಟರಿ ಮುಕ್ತಕ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ಎಚ್. ಎಸ್. ಕೆ. ಸಾಹಿತ್ಯ ಪ್ರಶಸ್ತಿಗಳು ಲಭಿಸಿವೆ. ಅನೇಕ ಸಂಘ ಸಂಸ್ಥೆಗಳು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಿವೆ.
ಮಂಜುನಾಥ್ ಅವರು ತಮ್ಮ ಮನೆಯಂಗಳ ಹಾಗೂ ಮನದಂಗಳಕ್ಕೆ ಬರುವವರಿಗೆ ನಗು ಮೊಗದ ಸ್ವಾಗತ ನೀಡಿ, ತಮ್ಮಿಂದಾದ ಸಹಾಯವನ್ನು ಮಾಡುತ್ತ ಬಂದವರು. ಓದು, ಬರಹ ಕಲೆ, ಸಾಹಿತ್ಯ, ಯಕ್ಷಗಾನ, ಧಾರ್ಮಿಕ ಕಾರ್ಯಗಳಲ್ಲಿ ನಿರಂತರ ತೊಡಗಿಕೊಂಡಿರುವ ಮಂಜುನಾಥರು ಹಲವಾರು ಯೋಜನೆಗಳಿಗೆ ರೂಪುರೇಷೆಗಳನ್ನು ಹಾಕಿಕೊಂಡಿದ್ದಾರೆ. ವೃತ್ತಿಯಿಂದ ನಿವೃತ್ತಿಹೊಂದಿ ಪ್ರವೃತ್ತಿಗಳಿಂದ ತಾನು ಸದಾ ಉಲ್ಲಾಸಿತನಾಗಿದ್ದೂ ಸಮಾಜದ ಒಲವನ್ನು ಪಡೆಯುತ್ತಿರುವ ಮಂಜುನಾಥ್ ಅವರ ಭವಿಷ್ಯದ ಬದುಕು ಭವ್ಯವಾಗಿರಲಿ. ಯಕ್ಷಗಾನಕ್ಕೆ, ಯಕ್ಷಸಾಹಿತ್ಯಕ್ಕೆ ಹಿರಿದಾದ ಕೊಡುಗೆಗಳು ಸಲ್ಲಲ್ಪಡಲಿ. ಅವರು ಬರೆದಿರುವ ಎಲ್ಲ ಬರಹಗಳು ಕೃತಿ ರೂಪದಲ್ಲಿ ಪ್ರಕಟಗೊಳ್ಳಲಿ ಎಂಬ ಹಾರೈಕೆ ನಮ್ಮದು.
ಲೇಖನ : ಉದಯ ಶೆಟ್ಟಿ, ಪಂಜಿಮಾರು.












