ಮೈಸೂರು: ನಾಡಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸುತ್ತಿರುವುದಕ್ಕೆ ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಸರಾ ಸಂದರ್ಭದಲ್ಲಿ ಕರಾವಳಿಯ ಕಂಬಳವನ್ನು ಆಯೋಜಿಸುವುದು ಮೈಸೂರಿನ ಜನರ ಭಾವನೆಗಳಿಗೆ ಧಕ್ಕೆ ತಂದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು ದಸರಾ ಹಾಗೂ ಅರಮನೆಯಲ್ಲಿನ ಸಾಂಪ್ರದಾಯಿಕ ಆಚರಣೆಗಳ ಕುರಿತು ‘ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ಈ ಬಾರಿಯೂ ಪ್ರತಿವರ್ಷದಂತೆ ದಸರಾ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ, ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸುವ ವಿಚಾರ ಸ್ಥಳೀಯವಾಗಿ ವಿರೋಧಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಕಂಬಳವನ್ನು ಬೇರೆ ಸಮಯದಲ್ಲಿ ಆಯೋಜಿಸಬಹುದಾದರೂ ದಸರಾ ಸಂದರ್ಭದಲ್ಲೇ ನಡೆಸುವ ಅಗತ್ಯವೇನಿದೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ. ದಸರಾ ಆಚರಣೆಯ ಸಂದರ್ಭದಲ್ಲಿ ಕರಾವಳಿ ಭಾಗದ ಕ್ರೀಡಾ ಸಂಪ್ರದಾಯವನ್ನು ಮೈಸೂರಿಗೆ ತರುವ ಉದ್ದೇಶವೇನು? ಇದರಿಂದ ಕರಾವಳಿ ಮತ್ತು ಮೈಸೂರು ಭಾಗದ ಜನರ ನಡುವೆ ವಿಭಜನೆ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆಯೇ ಎಂದು ಅವರು ಪ್ರಶ್ನಿಸಿದರು.
ಈ ವಿಚಾರದಿಂದ ಸಮಸ್ಯೆ ಉಂಟಾಗಬಹುದು ಎಂಬುದು ಕಾಂಗ್ರೆಸ್ಗೂ ತಿಳಿದಿದೆ. ಆದರೂ ಉದ್ದೇಶಪೂರ್ವಕವಾಗಿ ಕಂಬಳ ಆಯೋಜಿಸಲಾಗುತ್ತಿದೆ ಎಂದು ಆರೋಪಿಸಿದ ಯದುವೀರ್, ಹೊಸ ಪದ್ಧತಿಗಳನ್ನು ಆರಂಭಿಸುವುದಕ್ಕೆ ವಿರೋಧವಿಲ್ಲ. ಕರಾವಳಿ ಭಾಗದ ಸಂಪ್ರದಾಯಗಳ ಬಗ್ಗೆ ತಮಗೆ ಅಪಾರ ಗೌರವವಿದೆ. ಆದರೆ, ಮೈಸೂರು ದಸರಾ ನಡೆಯುವ ಸಮಯದಲ್ಲೇ ಕಂಬಳ ಆಯೋಜಿಸುವ ಅಗತ್ಯವೇನು ಎಂದು ಪ್ರಶ್ನಿಸಿದರು.
ಕಂಬಳ ಆಯೋಜನೆಗೆ ತಮ್ಮ ಪಕ್ಷಕ್ಕಿಂತ ಸ್ಥಳೀಯ ಸಂಘಟನೆಗಳಿಂದಲೇ ಹೆಚ್ಚಿನ ವಿರೋಧ ವ್ಯಕ್ತವಾಗುತ್ತಿದೆ ಎಂದು ಹೇಳಿದ ಅವರು, ಸ್ಥಳೀಯರ ಭಾವನೆಗಳನ್ನು ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟರು.















