ತಾಕತ್ ಇದ್ದರೆ ಕೇಸ್ ರೀ-ಓಪನ್ ಮಾಡಿ: ಕುಮಾರಸ್ವಾಮಿಗೆ ಯಡಿಯೂರಪ್ಪ ಸವಾಲು

ಕುಂದಾಪುರ: ನನ್ನ ವಿರುದ್ದದ ಕೇಸು ತಾಕತ್ತಿದ್ದರೆ ರೀ ಓಪನ್ ಮಾಡಲಿ. ಮಾಡುವುದಿದ್ದರೆ ೨೩ರ ಮೊದಲು ಮಾಡಲಿ. ಮೇ ೨೩ ರ ಬಳಿಕ ಕುಮಾರಸ್ವಾಮಿ ಮನೆಗೆ ಹೋಗ್ತಾರೆ. ಆಮೇಲೆ ಕೇಸು ನಾವು ಓಪನ್ ಮಾಡಿಸುತ್ತೇವೆ ಎಂದು ಕುಮಾರಸ್ವಾಮಿ ವಿರುದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗುಡುಗಿದ್ದಾರೆ.

ಚುನಾವಣೆ ನಂತರ ಯಡಿಯೂರಪ್ಪನವರ ಕೇಸು ರೀ ಓಪನ್ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಭಾನುವಾರ ನೆಂಪುವಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆ, ತಾಕತ್ತು ಮುಖ್ಯಮಂತ್ರಿಯವರಿಗಿಲ್ಲ. ಈ ಹಿಂದೆ ಎಲ್ಲವನ್ನೂ ಎದುರಿಸಿದ್ದೇನೆ, ಮುಂದೆಯೂ ಎದುರಿಸುತ್ತೇನೆ ಎಂಬ ಛಲ ಇದೆ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಮೋದಿ ಅಲೆ ಇಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಬಿಎಸ್‌ವೈ, ಮೋದಿಯವರ ಬಗ್ಗೆ ಕುಮಾರಸ್ವಾಮಿಯವರಿಗೆ ಏಕೆ ಚಿಂತೆ. ರಾಜ್ಯದಲ್ಲಿ ಅಪ್ಪ ಮಕ್ಕಳ ಅಲೆ ಇದೆಯಾ. ಅಪ್ಪ, ಮಕ್ಕಳ ಅಲೆ ಎಲ್ಲಿದೆ ಎಂದು ಮೊದಲು ಹೇಳಲಿ ಎಂದರು.

ಮಂಡ್ಯದಲ್ಲಿ ಸಚಿವ ಪುಟ್ಟರಾಜು ಬಳಿ ಹಣಕ್ಕಾಗಿ ಬೇಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ಮಂಡ್ಯದಲ್ಲಿ ದುಡ್ಡಿನ ಮೇಲೆ ಚುನಾವಣೆ ನಡೆಯುತ್ತಿದೆ. ಮಂಡ್ಯ -ಮೈಸೂರು ತುಮಕೂರಲ್ಲಿ ಹಣದ ಹೊಳೆ ಹರಿಯುತ್ತಿದ್ದು, ಕುಮಾರಸ್ವಾಮಿ, ದೇವೇಗೌಡರ ಹಣದ ರಾಜಕೀಯದ ಸ್ಯಾಂಪಲ್ ಇದು. ಭ್ರಷ್ಟಾಚಾರ ರಾಜ್ಯದಲ್ಲಿ ಮುಗಿಲು ಮುಟ್ಟಿದೆ. ಅಜ್ಜ- ಮೊಮ್ಮಕ್ಕಳು ಸೋಲುವುದು ಖಚಿತ ಎಂದು ಯಡಿಯೂರಪ್ಪ ದೇವೇಗೌಡರ ಕುಟುಂಬ ರಾಜಕೀಯದ ವಿರುದ್ದ ಹರಿಹಾಯ್ದರು.