ಉಡುಪಿ: ದ.ಕ ಜಿಲ್ಲೆ ವ್ಯಾಪ್ತಿಗೆ ಭೂ ಪರಿವರ್ತನೆ ಸಂದರ್ಭದಲ್ಲಿ 11 ಇ ನಕಾಶೆ ಅಗತ್ಯ ಇಲ್ಲ ಎಂದು ಹೈ ಕೋಟ್೯ ನೀಡಿದ ಆದೇಶವನ್ನು ಪರಿಗಣಿಸಿ ಉಡುಪಿ ಜಿಲ್ಲೆಗೂ ಅನ್ವಯವಾಗುವಂತೆ ಈ ಬಗ್ಗೆ ಜಿಲ್ಲಾಡಳಿತ ಗಮನ ಕೊಡುವಂತೆ ಸಾಮಜಿಕ ಹೋರಾಟಗಾರ, ಪ್ರಗತಿಪರ ಚಿಂತಕ ಬೆಳ್ಮಣ್ಣು ಕ್ಸೇವಿಯರ್ ಡಿ ಮೆಲ್ಲೋ ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕೃಷಿತೇರ ಚಟುವಟಿಕೆ ಸಂದರ್ಭದಲ್ಲಿ ಭೂ ಪರಿವರ್ತನೆ ಮಾಡಬೇಕಾದಲ್ಲಿ ಸ್ಥಳೀಯ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಹಾಗೂ ಸರ್ವೇ ಇಲಾಖೆಯಿಂದ 11ಇ ನಕ್ಷೆ ಯನ್ನು ಹಾಜರು ಪಡಿಸಬೇಕು ಎಂಬ ನಿಯಮವನ್ನು ಅಧಿಕಾರಿಗಳು ಕಡ್ಡಾಯ ಮಾಡಿದ ಪರಿಣಾಮ ಇಂದಿಗೂ ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ದ.ಕ ಜಿಲ್ಲೆಗೆ ಹೈ ಕೋಟ್೯ ನೀಡಿದ ಆದೇಶ ವನ್ನು ಉಡುಪಿ ಜಿಲ್ಲೆಗೂ ಪರಿಗಣಿಸಿ 11 ನಕಾಶೆಯಿಂದ ಮುಕ್ತಿ ನೀಡುವಂತೆ ಅವರು ಕೇಳಿಕೊಂಡಿದ್ದಾರೆ.

ಧೂಳು ತಿನ್ನುತ್ತಾ ಕುಳಿತಿವೆ ಅರ್ಜಿಗಳು: 11 ಇ ನಕಾಶೆ ಸಿಗದೇ ಸಾರ್ವಜನಿಕರು ವರ್ಷನ್ನೂ ಗಟ್ಟಲೆ ಕಾದು ಹೈರಾಣಾಗಿದ್ದಾರೆ. ಅಷ್ಟೇ ಅಲ್ಲದೇ ಈಗಾಗಲೇ 11 ಇ ನಕ್ಷಾಶೆಯ ಕುರಿತು ಸಲ್ಲಿಸಿದ ಸಾವಿರಕ್ಕೂ ಅರ್ಜಿಗಳು ಇತ್ಯರ್ಥವಾಗದೇ ಕಡತಗಳು ದೂಳು ಹಿಡಿದು ಹೋಗಿದೆ. ಕೆಲ ಅಧಿಕಾರಿ ಹಾಗೂ ಮಧ್ಯವರ್ತಿಗಳು 11 ನಕಾಶೆಯನ್ನೇ ಬಂಡವಾಳ ಮಾಡಿಕೊಂಡು ಸಾರ್ವಜನಿಕರಿಂದ ಹಣವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಡಳಿತದ ಸಂದರ್ಭದಲ್ಲಿ ಕಂದಾಯ ಸಚಿವರಿಗೆ ಅಂದು ಉಡುಪಿ ಜಿಲ್ಲಾ ಸಚಿವರಾಗಿದ್ದ ಪ್ರಮೋದ್ ಮದ್ವರಾಜ್ ಮೂಲಕ ಮನವಿ ಸಲ್ಲಿಸಲಾಗಿತ್ತು. ಬಳಿಕ ಎರಡು ಹೊಸ ಸರ್ಕಾರಗಳು ರಚನೆಯಾದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಇಂತಹ ದುಸ್ಥಿತಿ ಕಾರಣವಾಗಿತ್ತು ಎಂದು ಆರೋಪಿಸಿದ್ದಾರೆ.
ಈ ಹಿಂದೆ ಸ್ಥಳೀಯ ಗ್ರಾಮಲೆಕ್ಕಿಗ, ತಾಹಸೀಲ್ದಾರ್ ಅಧಿಕಾರಿಗಳು ನಿರಾಕ್ಷೇಪಣಾ ಪತ್ರ ನೀಡುತ್ತಿದ್ದು ಅದೇ ರೀತಿಯಲ್ಲಿ ಮುಂದುವರೆಸಿ ಕೊಂಡು ಹೋಗವಂತೆ ಸಲಹೆ ನೀಡಿದ್ದಾರೆ. ಕೂಡಲೇ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಶಾಸಕರು ಈ ಬಗ್ಗೆ ಜಿಲ್ಲಾಡಳಿತ ಮೇಲೆ ಒತ್ತಡ ಹೇರುವ ಮೂಲಕ ಯೋಜನೆಯನ್ನು ಅನುಷ್ಟಾನ ಗೊಳಿಸವಲ್ಲಿ ಪ್ರಯತ್ನಿಸಬೇಕು ಎಂದವರು ಒತ್ತಾಯಿಸಿದ್ದಾರೆ.

















