WTC Final 2023: 31ನೇ ಟೆಸ್ಟ್‌ ಶತಕ ದಾಖಲಿಸಿದ ಸ್ಮಿತ್‌, 469 ರನ್​ಗಳಿಗೆ ಆಸ್ಟ್ರೇಲಿಯಾ ಆಲೌಟ್2ನೇ ದಿನ ಭಾರತದ ಬೌಲರ್​​ಗಳ ಮೇಲುಗೈ;

ಓವಲ್ (ಲಂಡನ್​): ಲಂಡನ್​ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡ 469 ರನ್​ಗಳಿಗೆ ಆಲೌಟ್​ ಆಗಿದೆ. ಇಂದು ಭಾರತದ ಬೌಲರ್‌ಗಳು ಅದ್ರಲ್ಲೂ ಮಹಮ್ಮದ್ ಸಿರಾಜ್‌ 4 ವಿಕೆಟ್‌ ಪಡೆದು ಆಸೀಸ್‌ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ಸು ಕಂಡರು.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ (Australia vs India WTC Final) 2023​ ಪಂದ್ಯದಲ್ಲಿ​ ಎರಡನೇ ದಿನ ಭಾರತದ ಬೌಲರ್​ಗಳು ಹಿಡಿತ ಸಾಧಿಸಿದರು. ಪರಿಣಾಮವಾಗಿ ಆಸ್ಟ್ರೇಲಿಯಾ ತಂಡ ಇಂದು ಎರಡನೇ ದಿನದಾಟದಲ್ಲಿ 142 ರನ್​ ಕಲೆ ಹಾಕುವ ಮೂಲಕ ಮೊದಲ ಇನ್ನಿಂಗ್ಸ್​ನಲ್ಲಿ 469 ರನ್​ಗಳಿಗೆ ಆಲೌಟ್​ ಆಯಿತು. ಮೊಹಮ್ಮದ್​ ಸಿರಾಜ್​, ಮೊಹಮ್ಮದ್​ ಶಮಿ ಹಾಗೂ ಶಾರ್ದೂಲ್​ ಠಾಕೂರ್​ ಬಿಗಿ ಬೌಲಿಂಗ್​ ಪ್ರರ್ದಶಿಸಿದ್ದು, ಆಸೀಸ್​ ಬ್ಯಾಟರ್​ಗಳನ್ನು ಕಟ್ಟಿ ಹಾಕುವಲ್ಲಿ ನೆರವಾದರು.

ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ​ ತಂಡವು 85 ಓವರ್​ಗಳಲ್ಲಿ ನಾಲ್ಕು ವಿಕೆಟ್​ ನಷ್ಟಕ್ಕೆ 327 ರನ್​ ಕಲೆ ಹಾಕಿತ್ತು. ಮೊದಲ ದಿನ ಭರ್ಜರಿ ಆಟವಾಡಿ ಕ್ರೀಸ್​ ಕಾಯ್ದುಕೊಂಡಿದ್ದ ಟ್ರಾವಿಸ್ ಹೆಡ್ ಮತ್ತು ಸ್ಟೀವನ್ ಸ್ಮಿತ್ ಜೋಡಿಯನ್ನು ಇಂದು ಬೇಗ ಬೇರ್ಪಡಿಸುವಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಯಶಸ್ವಿಯಾದರು. ಇದರಿಂದ ಊಟದ ವಿರಾಮದ ಹೊತ್ತಿಗೆ ಆಸ್ಟ್ರೇಲಿಯಾ ತಂಡ 24 ಓವರ್​ಗಳಲ್ಲಿ ನಾಲ್ಕು ವಿಕೆಟ್​ ಕಳೆದುಕೊಂಡು 95 ರನ್ ಪೇರಿಸಲು ಮಾತ್ರ ಸಾಧ್ಯವಾಯಿತು.

ಇದಕ್ಕೂ ಮುನ್ನ ತಮ್ಮ ಎರಡನೇ ದಿನದ ಬ್ಯಾಟಿಂಗ್​ ಆರಂಭಿಸಿದ್ದ ಸ್ಟೀವನ್ ಸ್ಮಿತ್ ಶತಕ ಪೂರೈಸಿದರೆ ಮತ್ತು ಟ್ರಾವಿಸ್ ಹೆಡ್ 150 ರನ್​ ಬಾರಿಸಿದರು. ನಿನ್ನೆ 95 ರನ್ ಕಲೆ ಹಾಕಿದ್ದ ಸ್ಮಿತ್ ಇಂದಿನ ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲೇ (85.3 ಓವರ್​ನಲ್ಲಿ) ಬೌಂಡರಿ ಬಾರಿಸಿ ಟೆಸ್ಟ್‌ ಕ್ರಿಕೆಟ್​ನಲ್ಲಿ 31ನೇ ಶತಕ ಸಿಡಿಸಿದರು. ಅಲ್ಲದೇ, ಇಂಗ್ಲೆಂಡ್​ ನೆಲದಲ್ಲಿ 7ನೇ ಹಾಗೂ ಭಾರತದ ವಿರುದ್ಧ 9ನೇ ಶತಕವನ್ನು ಅವರು ದಾಖಲಿಸಿದರು.

ನಂತರದಲ್ಲಿ ಮುಂದಿನ ಮೂರು ವಿಕೆಟ್​ಗಳನ್ನು ಟೀಂ ಇಂಡಿಯಾ ಮಿಂಚಿನ ವೇಗದಲ್ಲಿ ಕಬಳಿಸಿತು. ಉತ್ತಮ ಬ್ಯಾಟಿಂಗ್​ ಪ್ರರ್ದಶಿಸಿದ ವಿಕೆಟ್​ ಕೀಪರ್​ ಅಲೆಕ್ಸ್ ಕ್ಯಾರಿ ಅರ್ಧಶತಕದ ಹೊಸ್ತಿಲಿನಲ್ಲಿ ಎಡವಿದರು. 69 ಬಾಲ್​ಗಳಲ್ಲಿ 48 ರನ್​ ಬಾರಿಸಿದ್ದ ಕ್ಯಾರಿ ಅವರನ್ನು ರವೀಂದ್ರ ಜಡೇಜಾ ಎಲ್​ಬಿ ಬಲೆಗೆ ಕೆಡವಿದರು. ನಾಥನ್ ಲಿಯಾನ್ (9) ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಸಿರಾಜ್​ ಔಟ್​ ಮಾಡುವ ಮೂಲಕ ಆಸೀಸ್​ ಇನ್ನಿಂಗ್​ಗೆ ಪೂರ್ಣ ವಿರಾಮ ಇಟ್ಟರು. ಭಾರತದ ಪರ ಮೊಹಮ್ಮದ್​ ಸಿರಾಜ್​ 4, ಮೊಹಮ್ಮದ್​ ಶಮಿ ಹಾಗೂ ಶಾರ್ದೂಲ್​ ಠಾಕೂರ್​ ತಲಾ 2 ವಿಕೆಟ್​, ರವೀಂದ್ರ ಜಡೇಜಾ ಒಂದು ವಿಕೆಟ್​ ಪಡೆದರು.
ಮತ್ತೊಂದೆಡೆ, ನಿನ್ನೆ (ಬುಧವಾರ) 146 ರನ್‌ಗಳ ಮೂಲಕ ಬ್ಯಾಟಿಂಗ್ ವೈಭವ ಪ್ರದರ್ಶಿಸಿದ್ದ ಟ್ರಾವಿಸ್ ಹೆಡ್​ 88.2ನೇ ಓವರ್​ನಲ್ಲಿ 150 ರನ್​ ಪೂರೈಸಿದರು. ಆದರೆ, ಇದಾದ ಸ್ವಲ್ಪ ಹೊತ್ತಲ್ಲೇ ಸಿರಾಜ್​ ಬೌಲಿಂಗ್​ನಲ್ಲಿ ಹೆಡ್​ ಕ್ಯಾಚಿತ್ತು ನಿರ್ಮಿಸಿದರು. 175 ಎಸೆತಗಳಲ್ಲಿ 163 ರನ್​ ಬಾರಿಸಿದ ಹೆಡ್ ಆಟದಲ್ಲಿ 25 ಬೌಂಡರಿಗಳು ಮತ್ತು ಒಂದು ಸಿಕ್ಸರ್​ ಒಳಗೊಂಡಿತ್ತು. ನಂತರ ಬಂದ ಕ್ಯಾಮರಾನ್ ಗ್ರೀನ್​ (6) ಅವರಿಗೆ ಮೊಹಮ್ಮದ್ ಶಮಿ ಪೆವಿಲಿಯನ್​ ದಾರಿ ತೋರಿಸಿದರು. ಇದರ ಬೆನ್ನಲ್ಲೇ 121 ರನ್​ ಗಳಿಸಿ ಆಡುತ್ತಿದ್ದ ಸ್ಟೀವನ್ ಸ್ಮಿತ್ ಅವರನ್ನು ಶಾರ್ದೂಲ್​ ಠಾಕೂರ್​ ಬೌಲ್ದ್​ ಮಾಡಿದರು. ಮಿಚೆಲ್ ಸ್ಟಾರ್ಕ್ (5) ರನೌಟ್​ ಬಲೆಗೆ ಬಿದ್ದರು. ಊಟದ ವಿರಾಮದ ವೇಳೆಗೆ ಏಳು ವಿಕೆಟ್​ ನಷ್ಟಕ್ಕೆ 422 ರನ್​ ಕಲೆ ಹಾಕಿತ್ತು.