ಓವಲ್ (ಲಂಡನ್): ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡ 469 ರನ್ಗಳಿಗೆ ಆಲೌಟ್ ಆಗಿದೆ. ಇಂದು ಭಾರತದ ಬೌಲರ್ಗಳು ಅದ್ರಲ್ಲೂ ಮಹಮ್ಮದ್ ಸಿರಾಜ್ 4 ವಿಕೆಟ್ ಪಡೆದು ಆಸೀಸ್ ಬ್ಯಾಟರ್ಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ಸು ಕಂಡರು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (Australia vs India WTC Final) 2023 ಪಂದ್ಯದಲ್ಲಿ ಎರಡನೇ ದಿನ ಭಾರತದ ಬೌಲರ್ಗಳು ಹಿಡಿತ ಸಾಧಿಸಿದರು. ಪರಿಣಾಮವಾಗಿ ಆಸ್ಟ್ರೇಲಿಯಾ ತಂಡ ಇಂದು ಎರಡನೇ ದಿನದಾಟದಲ್ಲಿ 142 ರನ್ ಕಲೆ ಹಾಕುವ ಮೂಲಕ ಮೊದಲ ಇನ್ನಿಂಗ್ಸ್ನಲ್ಲಿ 469 ರನ್ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ ಹಾಗೂ ಶಾರ್ದೂಲ್ ಠಾಕೂರ್ ಬಿಗಿ ಬೌಲಿಂಗ್ ಪ್ರರ್ದಶಿಸಿದ್ದು, ಆಸೀಸ್ ಬ್ಯಾಟರ್ಗಳನ್ನು ಕಟ್ಟಿ ಹಾಕುವಲ್ಲಿ ನೆರವಾದರು.
ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡವು 85 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 327 ರನ್ ಕಲೆ ಹಾಕಿತ್ತು. ಮೊದಲ ದಿನ ಭರ್ಜರಿ ಆಟವಾಡಿ ಕ್ರೀಸ್ ಕಾಯ್ದುಕೊಂಡಿದ್ದ ಟ್ರಾವಿಸ್ ಹೆಡ್ ಮತ್ತು ಸ್ಟೀವನ್ ಸ್ಮಿತ್ ಜೋಡಿಯನ್ನು ಇಂದು ಬೇಗ ಬೇರ್ಪಡಿಸುವಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಯಶಸ್ವಿಯಾದರು. ಇದರಿಂದ ಊಟದ ವಿರಾಮದ ಹೊತ್ತಿಗೆ ಆಸ್ಟ್ರೇಲಿಯಾ ತಂಡ 24 ಓವರ್ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 95 ರನ್ ಪೇರಿಸಲು ಮಾತ್ರ ಸಾಧ್ಯವಾಯಿತು.
ಇದಕ್ಕೂ ಮುನ್ನ ತಮ್ಮ ಎರಡನೇ ದಿನದ ಬ್ಯಾಟಿಂಗ್ ಆರಂಭಿಸಿದ್ದ ಸ್ಟೀವನ್ ಸ್ಮಿತ್ ಶತಕ ಪೂರೈಸಿದರೆ ಮತ್ತು ಟ್ರಾವಿಸ್ ಹೆಡ್ 150 ರನ್ ಬಾರಿಸಿದರು. ನಿನ್ನೆ 95 ರನ್ ಕಲೆ ಹಾಕಿದ್ದ ಸ್ಮಿತ್ ಇಂದಿನ ಇನ್ನಿಂಗ್ಸ್ನ ಮೂರನೇ ಎಸೆತದಲ್ಲೇ (85.3 ಓವರ್ನಲ್ಲಿ) ಬೌಂಡರಿ ಬಾರಿಸಿ ಟೆಸ್ಟ್ ಕ್ರಿಕೆಟ್ನಲ್ಲಿ 31ನೇ ಶತಕ ಸಿಡಿಸಿದರು. ಅಲ್ಲದೇ, ಇಂಗ್ಲೆಂಡ್ ನೆಲದಲ್ಲಿ 7ನೇ ಹಾಗೂ ಭಾರತದ ವಿರುದ್ಧ 9ನೇ ಶತಕವನ್ನು ಅವರು ದಾಖಲಿಸಿದರು.
ನಂತರದಲ್ಲಿ ಮುಂದಿನ ಮೂರು ವಿಕೆಟ್ಗಳನ್ನು ಟೀಂ ಇಂಡಿಯಾ ಮಿಂಚಿನ ವೇಗದಲ್ಲಿ ಕಬಳಿಸಿತು. ಉತ್ತಮ ಬ್ಯಾಟಿಂಗ್ ಪ್ರರ್ದಶಿಸಿದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಅರ್ಧಶತಕದ ಹೊಸ್ತಿಲಿನಲ್ಲಿ ಎಡವಿದರು. 69 ಬಾಲ್ಗಳಲ್ಲಿ 48 ರನ್ ಬಾರಿಸಿದ್ದ ಕ್ಯಾರಿ ಅವರನ್ನು ರವೀಂದ್ರ ಜಡೇಜಾ ಎಲ್ಬಿ ಬಲೆಗೆ ಕೆಡವಿದರು. ನಾಥನ್ ಲಿಯಾನ್ (9) ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ಸಿರಾಜ್ ಔಟ್ ಮಾಡುವ ಮೂಲಕ ಆಸೀಸ್ ಇನ್ನಿಂಗ್ಗೆ ಪೂರ್ಣ ವಿರಾಮ ಇಟ್ಟರು. ಭಾರತದ ಪರ ಮೊಹಮ್ಮದ್ ಸಿರಾಜ್ 4, ಮೊಹಮ್ಮದ್ ಶಮಿ ಹಾಗೂ ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್, ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.
ಮತ್ತೊಂದೆಡೆ, ನಿನ್ನೆ (ಬುಧವಾರ) 146 ರನ್ಗಳ ಮೂಲಕ ಬ್ಯಾಟಿಂಗ್ ವೈಭವ ಪ್ರದರ್ಶಿಸಿದ್ದ ಟ್ರಾವಿಸ್ ಹೆಡ್ 88.2ನೇ ಓವರ್ನಲ್ಲಿ 150 ರನ್ ಪೂರೈಸಿದರು. ಆದರೆ, ಇದಾದ ಸ್ವಲ್ಪ ಹೊತ್ತಲ್ಲೇ ಸಿರಾಜ್ ಬೌಲಿಂಗ್ನಲ್ಲಿ ಹೆಡ್ ಕ್ಯಾಚಿತ್ತು ನಿರ್ಮಿಸಿದರು. 175 ಎಸೆತಗಳಲ್ಲಿ 163 ರನ್ ಬಾರಿಸಿದ ಹೆಡ್ ಆಟದಲ್ಲಿ 25 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಒಳಗೊಂಡಿತ್ತು. ನಂತರ ಬಂದ ಕ್ಯಾಮರಾನ್ ಗ್ರೀನ್ (6) ಅವರಿಗೆ ಮೊಹಮ್ಮದ್ ಶಮಿ ಪೆವಿಲಿಯನ್ ದಾರಿ ತೋರಿಸಿದರು. ಇದರ ಬೆನ್ನಲ್ಲೇ 121 ರನ್ ಗಳಿಸಿ ಆಡುತ್ತಿದ್ದ ಸ್ಟೀವನ್ ಸ್ಮಿತ್ ಅವರನ್ನು ಶಾರ್ದೂಲ್ ಠಾಕೂರ್ ಬೌಲ್ದ್ ಮಾಡಿದರು. ಮಿಚೆಲ್ ಸ್ಟಾರ್ಕ್ (5) ರನೌಟ್ ಬಲೆಗೆ ಬಿದ್ದರು. ಊಟದ ವಿರಾಮದ ವೇಳೆಗೆ ಏಳು ವಿಕೆಟ್ ನಷ್ಟಕ್ಕೆ 422 ರನ್ ಕಲೆ ಹಾಕಿತ್ತು.