ಕಾರ್ಕಳ: ಮನೆಯಲ್ಲಿ ತಾಯಿ ನೆಮ್ಮದಿಯಾಗಿದ್ದರೆ ಇಡೀ ಮನೆ, ಮನೆಯ ವಾತಾವರಣ ಸುಖ ಶಾಂತಿಯಿಂದಿರುತ್ತದೆ. ಆದರೆ ತಾಯಿಯೇ ನೆಮ್ಮದಿಯಾಗಿಲ್ಲದಿದ್ದರೆ ಆ ಮನೆಯಲ್ಲೂ ನೆಮ್ಮದಿ ಸಾಧ್ಯವಿಲ್ಲ. ಸದ್ಯ ಪ್ರಕೃತಿ ಅನ್ನೋ ತಾಯಿ ಕಷ್ಟದಲ್ಲಿದ್ದಾಳೆ. ಮನೆ ಹೊತ್ತಿ ಉರಿದರೂ ನಮಗೂ ಆ ಮನೆಯೂ ಸಂಬಂಧವಿಲ್ಲ ಎನ್ನುವ ಪರಿಸ್ಥತಿ ಇದೆ. ಪ್ರಕೃತಿ ತಾಯಿ ಸುಖದಿಂದಿರದಿದ್ದರೆ ಲೋಕಕ್ಕೂ ಸುಖವಿಲ್ಲ ಎಂದು ಪರಿಸರ ತಜ್ಙ, ಲೇಖಕ ಪರಿಸರ ಹೋರಾಟಗಾರರಾದ ದಿನೇಶ್ ಹೊಳ್ಳ ಹೇಳಿದ್ದಾರೆ.
ಅವರು ಮಾಳ ಕಾಡಿನ ಪರಿಸರದ ರಮ್ಯ ಮಡಿಲಿನಲ್ಲಿ ಸಾಂಪ್ರದಾಯಿಕ ಜಾರಿಗೆ ಮನೆಯ ಆವರಣದಲ್ಲಿ ಯುವ ಬರಹಗಾರ ಪ್ರಸಾದ್ ಶೆಣೈ ಅವರ “ಒಂದು ಕಾಡಿನ ಪುಷ್ಪಕ ವಿಮಾನ” ಕಾಡಿನ ಕಥಾನಕ ಕೃತಿಯನ್ನು ಅನಾವರಣಗೊಳಿಸಿ ಮಾತನಾಡಿದರು.
ಕಳೆದ ಕೆಲವೊಂದು ವರ್ಷಗಳಿಂದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಜಲಸ್ಪೋಟಗಳು ಜಾಸ್ತಿಯಾಗುತ್ತಿವೆ. ಅರಣ್ಯ ಇಲಾಖೆಯ ಪ್ರಕಾರ ಸೂಕ್ಷ್ಮ ಪ್ರದೇಶಗಳಲ್ಲಿ ಮಾನವ ಚಟುವಿಟಿಕೆಗಳಿಗೆ ಅವಕಾಶವೇ ಇಲ್ಲ, ಆದರೆ ಕಳೆದ ಹತ್ತು ವರ್ಷಗಳಿಂದ ನೇತ್ರಾವತಿ ನದಿ ಮೂಲವಿರುವ ಕಡೆಗಳಲ್ಲೆಲ್ಲಾ ಅರಣ್ಯ ಒತ್ತುವರಿ, ರೆಸಾರ್ಟ್ ಮತ್ತು ಮೋಜು ಮಾಡುವವರಿಗೆ ಸರಕಾರವೇ ಪ್ರೋತ್ಸಾಹಿಸುತ್ತಿರುವುದು ಪಶ್ಚಿಮಘಟ್ಟಕ್ಕೆ ಆಗುತ್ತಿರುವ ದೊಡ್ಡ ಗಾಯ ಎಂದರು.
ಪರಿಸರವನ್ನು ಉಳಿಸಲು ನಮ್ಮ ಕರ್ತವ್ಯವೂ ಬಹಳಷ್ಟಿದೆ. ಆದರೆ ನಾವು ಅದನ್ನು ಮರೆಯುತ್ತಿದ್ದೇವೆ. ಮೋಜು ಮಸ್ತಿ ಮಾಡುತ್ತ ಕಾಡು ಸುತ್ತುವುದು ಮಾತ್ರ ಚಾರಣ ಎನ್ನುವಂತಾಗಿದೆ. ಸರಕಾರದ ಯೋಜನೆಗಳು ಪರಿಸರಕ್ಕೆ ಬರೆ ಎಳೆಯುತ್ತಿರುವುದು ಒಂದೆಡೆಯಾದರೆ ಜನಸಾಮಾನ್ಯರಾದ ನಾವೇ ಇವೆಲ್ಲವನ್ನು ಪ್ರಶ್ನಿಸದೇ ಸುಮ್ಮನೇ ಮೌನವಾಗಿರುವುದು ಸರಕಾರಕ್ಕೆ ಅವೈಜ್ಙಾನಿಕ ಯೋಜನೆಗಳನ್ನು ಜಾರಿ ತರಲು ಇನ್ನಷ್ಟು ದಾರಿಯಾಗುತ್ತಿದೆ ಎಂದರು.
ನಕಲಿ ಚಾರಣಿಗರು ಜಾಸ್ತಿಯಾಗಿದ್ದಾರೆ:
ಕಾಡು, ಪರಿಸರ ಅಂತೆಲ್ಲಾ ಹೇಳಿಕೊಂಡು ಕಾಡಿಗೆ ಹೋಗಿ ಮಸ್ತಿ ಮಾಡುವ, ಭೇಟೆ ಮಾಡುವ ನಕಲಿ ಚಾರಣಿಗರು ಜಾಸ್ತಿಯಾಗಿರುವುದು ದುರಂತ. ಇದರಿಂದ ನಿಜವಾಗಿ ಪರಿಸರ ಪ್ರೀತಿಯಿಂದ, ಪರಿಸರವನ್ನು ಸಂರಕ್ಷಿಸಬೇಕು ಎನ್ನುವ ಉದ್ದೇಶದಿಂದ ಕಾಡಿನತ್ತ ಹೋಗುವ ಚಾರಣಿಗರಿಗೆ ಸಮಸ್ಯೆಯಾಗಿದೆ. ಇಂದು ಕಾಡು ಅವೈಜ್ಞಾನಿಕ ಯೋಜನೆಗಳಿಂದ ಅನುಭವಿಸುತ್ತಿರುವ ವೇದನೆಗಳೇನು ಎನ್ನುವುದು ನಿಜವಾದ ಚಾರಣಿಗರಿಗೆ, ಪ್ರಕೃತಿ ಪ್ರೀಯರಿಗೆ ಮಾತ್ರ ಅರ್ಥವಾಗುತ್ತದೆ ಎಂದು ಹೊಳ್ಳರು ನಕಲಿ ಚಾರಣಿಗರಿಗೆ ಮಾತಲ್ಲೇ ಚಾಟಿ ಬೀಸಿದರು.
”ಒಂದು ಕಾಡಿನ ಪುಷ್ಪಕ ವಿಮಾನದಂತಹ ಪರಿಸರದ ಕಾಳಜಿ ಮತ್ತು ಕಳಕಳಿ ಹೊಂದಿರುವ ಕೃತಿಗಳು ಸಾಮಾನ್ಯರಲ್ಲಿ ಎಚ್ಚರ ಮೂಡಿಸಲಿ.ಬರಹಗಳಿಗಂತಲೂ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಿದೆ. ಪರಿಸರ ದೇವಿಯ ಮಡಿಲಿನಲ್ಲೇ ಹಮ್ಮಿಕೊಂಡ ಪುಸ್ತಕ ಬಿಡುಗಡೆ ಕಾರ್ಯಕ್ರಮ ಎಲ್ಲರಲ್ಲೂ ಪರಿಸರದ ಕುರಿತು ಇನ್ನಷ್ಟು ಪ್ರೀತಿ ಮೂಡಿಸಲಿ ಎಂದರು.
ಖ್ಯಾತ ಚಿತ್ರ ಕಲಾವಿದ ಪುರುಷೋತ್ತಮ ಅಡ್ವೆ ಮಾತನಾಡಿ, ಕಾಡುಗಳಲ್ಲಿರುವ ಹಳೆ ಮನೆ ಸಂಸಂಸ್ಕೃತಿ ವಸ್ತುಗಳನ್ನು ಉಳಿಸಿಕೊಳ್ಳುವುದರ ಮೂಲಕ ಒಂದು ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಬಹುದು. ಕಾಡು, ಗ್ರಾಮೀಣ ಕೌಶಲ್ಯಗಳು, ನದಿ, ಜಲಪಾತ ಎಲ್ಲವನ್ನೂ ಉಳಿಸಲು ಹೋರಾಟ ಮಾಡಬೇಕಿಲ್ಲ. ಅವುಗಳನ್ನು ಕಾಪಾಡುವ ಮನಸ್ಸಿದ್ದರೆ ಸಾಕು, ಎಂದರು. ಇಡೀ ಕಾರ್ಯಕ್ರಮ ಸಾಂಪ್ರದಾಯಿಕ ಶೈಲಿಯಲ್ಲಿ ಜರಗಿತು.
ಲೇಖಕ ಪ್ರಸಾದ್ ಶೆಣೈ ಆರ್.ಕೆ ತಮ್ಮ ಕೃತಿಯ ಕುರಿತು ಮಾತನಾಡಿದರು. ಕಾಡು-ಪರಿಸರದ ಕುರಿತು ಸಂವಾದ ನಡೆಯಿತು. ರಾಧಾಕೃಷ್ಣ ಜೋಶಿ ಕಾರ್ಯಕ್ರಮ ನಿರೂಪಿಸಿದರು.