ಚೀನಾದಲ್ಲಿದೆ ವಿಶ್ವದ ಮೊದಲ ಮತ್ತು ಏಕೈಕ ಸಂಪೂರ್ಣ ಬಿಳಿ ಬಣ್ಣದ ಪಾಂಡಾ!

ವಿಶ್ವದ ಮೊದಲ ಮತ್ತು ಏಕೈಕ ಅಲ್ಬಿನೋ ಪಾಂಡಾ ಅಂತಿಮವಾಗಿ ಚೀನಾದ ಪರ್ವತಗಳಲ್ಲಿ ಚಲನೆ-ಸೂಕ್ಷ್ಮ ಕ್ಷೇತ್ರ ಕ್ಯಾಮೆರಾದ ಮುಂದೆ ಕಾಣಿಸಿಕೊಂಡಿದೆ. 2019 ರಲ್ಲಿ ಪತ್ತೆಯಾದ ಬಳಿಕ ಇದು ಮೊದಲ ಬಾರಿಗೆ ಕ್ಯಾಮರಾ ಮುಂದೆ ಬಂದಿದೆ. ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ವೊಲಾಂಗ್ ನ್ಯಾಷನಲ್ ನೇಚರ್ ರಿಸರ್ವ್‌ನಲ್ಲಿ ಸಂಪೂರ್ಣ ಬಿಳಿ ಬಣ್ಣದ ಪಾಂಡಾವನ್ನು ಗುರುತಿಸಲಾಗಿದೆ.

Sciencealert.com ವರದಿಯ ಪ್ರಕಾರ, ಈ ಅಪರೂಪದ ಪ್ರಾಣಿ ತನ್ನ ವಿಶಿಷ್ಟ ನೋಟದ ಹೊರತಾಗಿಯೂ ಚೀನಾದ ಸಿಚುವಾನ್ ಪ್ರಾಂತ್ಯದ ವೊಲಾಂಗ್ ನ್ಯಾಷನಲ್ ನೇಚರ್ ರಿಸರ್ವ್‌ನಲ್ಲಿ ಆರೋಗ್ಯಕರವಾಗಿರುವಂತೆ ಮತ್ತು ಸಂತೋಷದಿಂದ ಇರುವಂತೆ ಕಾಣುತ್ತದೆ.

2006 ರಿಂದ ಈ ಪ್ರದೇಶವನ್ನು ಯುನೆಸ್ಕೊ ವಿಶ್ವ ಪರಂಪರೆಯ ತಾಣ ಎಂದು ಘೋಷಿಸಲಾಗಿದ್ದು 150 ದೈತ್ಯ ಪಾಂಡಾಗಳನ್ನು ಹೊಂದಿರುವ ಸಂರಕ್ಷಿತ ಪ್ರದೇಶದಲ್ಲಿ ಒಂದು ಮಾತ್ರ ಬಿಳಿಯಾಗಿದೆ. ಸಾಮಾನ್ಯವಾಗಿ ಪಾಂಡಾಗಳು ಕಪ್ಪು-ಬಿಳಿ ಬಣ್ಣವನ್ನು ಹೊಂದಿರುತ್ತವೆ.

Albino panda caught on camera in China in world first | China | The Guardian

ಎಲ್ಲರ ಗಮನ ಸೆಳೆಯುವ ಈ ಏಕೈಕ ಬಿಳಿ ಬಣ್ಣದ ಪಾಂಡಾ ಆನುವಂಶಿಕ ರೂಪಾಂತರವನ್ನು ಹೊಂದಿದ್ದು ಇದು ಅಪರೂಪವಾಗಿದೆ. ವಂಶವಾಹಿಗಳಲ್ಲಿನ ಈ ರೂಪಾಂತರವು ಕಪ್ಪು-ಬಿಳುಪು ತುಪ್ಪಳವನ್ನು ಏಕರೂಪದ ತೆಳು ಕೆನೆ ಬಣ್ಣಕ್ಕೆ ಬದಲಾಯಿಸುತ್ತದೆ. ಮಾತ್ರವಲ್ಲ, ಅದರ ಕಣ್ಣುಗಳು, ಕೂದಲು ಮತ್ತು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಬಹುಶಃ ಕಾಯಿಲೆಯ ಕಾರಣವೂ ಹೀಗಾಗಿರಬಹುದು ಎನ್ನಲಾದರೂ ನಾಲ್ಕು ವರ್ಷಗಳ ನಂತರವೂ ಪಾಂಡಾದಲ್ಲಿ ಯಾವುದೇ ಕಾಯಿಲೆಯ ಲಕ್ಷಣಗಳು ಕಂಡುಬಂದಿಲ್ಲ ಎಂದು ವರದಿಯಾಗಿದೆ.

ಚೀನಾದ ಸ್ಟೇಟ್ ಬ್ರಾಡ್‌ಕಾಸ್ಟರ್ ಬಿಡುಗಡೆ ಮಾಡಿರುವ ವಿಡೀಯೋ ತುಣುಕಿನಲ್ಲಿ ಸಂಪೂರ್ಣ ಬಿಳಿ ಪಾಂಡಾವು ತಾಯಿ ಪಾಂಡಾ ಮತ್ತು ಅವಳ ಎರಡು ವರ್ಷದ ಮರಿಯೊಂದಿಗೆ ಬೆರೆಯುತ್ತಿರುವುದು ಕಾಣಿಸುತ್ತದೆ. ಈ ತಾಯಿ ಪಾಂಡಾ ಅಲ್ಬಿನೋ ಪಾಂಡಾದ ತಾಯಿಯಾಗಿರಬಹುದು ಮತ್ತು ಮರಿ ಅದರ ಸಹೋದರ/ರಿ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ವಿಜ್ಞಾನಿಗಳಿಗೆ ಅಲ್ಬಿನೊದ ಲಿಂಗ ತಿಳಿದಿಲ್ಲ ಆದರೆ ಭವಿಷ್ಯದ ದೃಶ್ಯಾವಳಿಗಳು ಸೂಚನೆಯನ್ನು ನೀಡಬಹುದು ಎಂದು ಅವರು ಭಾವಿಸಿದ್ದಾರೆ. ಒಂದೊಮ್ಮೆ ಲಿಂಗ ಪರೀಕ್ಷೆಗಾಗಿ ಅದರ ಮೇಲೆ ಡಿಎನ್‌ಎ ಪರೀಕ್ಷೆಯನ್ನು ನಡೆಸಬೇಕಾಗಬಹುದು ಎನ್ನಲಾಗಿದೆ. ಒಂದು ವೇಳೆ ಅಲ್ಬಿನೊಗೆ ಮರಿಗಳಾದರೆ ಅವು ಸಾಮಾನ್ಯ ಕಪ್ಪು-ಬಿಳುಪು ಬಣ್ಣ ಹೊಂದಿರುತ್ತವೆಯೆ ಅಥವಾ ಸಂಪೂರ್ಣ ಬಿಳಿಯದ್ದಾಗಿರುತ್ತದೆಯೋ ಎನ್ನುವುದು ಖಚಿತವಾಗಿಲ್ಲ.