ಇವತ್ತು ಮನೆ ಮಂದಿಗೆಲ್ಲಾ ಅಚ್ಚುಮೆಚ್ಚಾಗಿರುವ ಆಧುನಿಕ ಬೆಕ್ಕು (ಫೆಲಿಸ್ ಸಿಲ್ವೆಸ್ಟ್ರಿಸ್ ಕ್ಯಾಟಸ್) ನಾಲ್ಕು ಅಥವಾ ಐದು ಪ್ರತ್ಯೇಕ ಕಾಡು ಬೆಕ್ಕುಗಳಲ್ಲಿ ಒಂದು ಅಥವಾ ಹೆಚ್ಚಿನವು ಪ್ರಬೇಧಗಳಿಂದ ಬಂದಿದೆ ಎಂದು ಅಂದಾಜಿಸಲಾಗಿದೆ.
ಕಾಡುಬೆಕ್ಕುಗಳ ವಿಭಿನ್ನ ಪ್ರಜಾತಿಗಳಾದ ಸಾರ್ಡಿನಿಯನ್ ವೈಲ್ಡ್ ಕ್ಯಾಟ್ (ಫೆಲಿಸ್ ಸಿಲ್ವೆಸ್ಟ್ರಿಸ್ ಲಿಬಿಕಾ), ಯುರೋಪಿಯನ್ ವೈಲ್ಡ್ ಕ್ಯಾಟ್ (ಎಫ್. ಎಸ್. ಸಿಲ್ವೆಸ್ಟ್ರಿಸ್), ಮಧ್ಯ ಏಷ್ಯಾದ ಕಾಡು ಬೆಕ್ಕು (ಎಫ್.ಎಸ್. ಓರ್ನಾಟಾ) , ಉಪ-ಸಹಾರನ್ ಆಫ್ರಿಕನ್ ವೈಲ್ಡ್ ಕ್ಯಾಟ್ ಎಫ್. ಎಸ್. ಕಾಫ್ರಾ), ಮತ್ತು (ಬಹುಶಃ) ಚೀನೀ ಮರುಭೂಮಿ ಬೆಕ್ಕು ಇವುಗಳು ನಮ್ಮ ಇಂದಿನ ಕಾಡು ಬೆಕ್ಕುಗಳ ಪೂರ್ವಜರು.
ಮಾನವ ಮತ್ತು ಬೆಕ್ಕುಗಳ ಒಡನಾಟ 12 ಸಾವಿರ ವರ್ಷ ಪುರಾತನ ಎಂದು ನಂಬಲಾಗಿದೆ. ಮನುಷ್ಯರೊಂದಿಗೆ ವಾಸಿಸುತ್ತಿದ್ದ ಬೆಕ್ಕುಗಳ ಪ್ರಾಚೀನ ಪುರಾತತ್ತ್ವ ಶಾಸ್ತ್ರದ ಪುರಾವೆಗಳು ಸೈಪ್ರಸ್ನ ಮೆಡಿಟರೇನಿಯನ್ ದ್ವೀಪದಲ್ಲಿ ಸಿಕ್ಕಿವೆ. ಅಲ್ಲಿ 9500 ವರ್ಷ ಹಿಂದಿನ ಬೆಕ್ಕುಗಳು ಸೇರಿದಂತೆ ಹಲವಾರು ಪ್ರಾಣಿ ಪ್ರಭೇದಗಳ ಸಾಕ್ಷ್ಯ ಉತ್ಖನನದಲ್ಲಿ ದೊರೆತಿವೆ.
ಬೆಕ್ಕುಗಳ ಆನುವಂಶಿಕ ವಿಶ್ಲೇಷಣೆಯು ಎಲ್ಲಾ ಸಾಕು ಬೆಕ್ಕುಗಳು ಫಲವತ್ತಾದ ಪ್ರದೇಶದಿಂದ ಕನಿಷ್ಠ ಐದು ಸಂಸ್ಥಾಪಕ ಬೆಕ್ಕುಗಳಿಂದ ಹುಟ್ಟಿಕೊಂಡಿವೆ ಮತ್ತು ಅಲ್ಲಿಂದ ಅವುಗಳನ್ನು (ಅಥವಾ ಬದಲಿಗೆ ಅವರ ವಂಶಸ್ಥರು) ಪ್ರಪಂಚದಾದ್ಯಂತ ಸಾಗಿಸಲಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಈ ಕಾಡುಬೆಕ್ಕುಗಳ ವಂಶಾವಳಿಯಲ್ಲೇ ಹುಲಿ, ಚಿರತೆ, ಸಿಂಹ ಮುಂತಾದ ದೊಡ್ಡಬೆಕ್ಕುಗಳೂ ಇವೆ. ಬಹುತೇಕ ಪ್ರಪಂಚದ ಎಲ್ಲಾ ಪ್ರಾಣಿಗಳನ್ನೂ ಪಳಗಿಸಿರುವ ಮನುಷ್ಯನಿಗೆ ಒಂದು ಬೆಕ್ಕನ್ನು ಪಳಗಿಸಲು ಇದುವರೆಗೂ ಸಾಧ್ಯವಾಗಿಲ್ಲ. ಆ ಸೊಕ್ಕಿನ ಬೆಕ್ಕಿನ ಹೆಸರೆ ಮ್ಯಾನುಲ್.
ಮ್ಯಾನುಲ್ ಎಂದೂ ಕರೆಯಲ್ಪಡುವ ಪಲ್ಲಾಸ್ ಬೆಕ್ಕು (ಒಟೊಕೊಲೋಬಸ್ ಮ್ಯಾನುಲ್), ಉದ್ದ ಮತ್ತು ದಟ್ಟವಾದ ತಿಳಿ ಬೂದು ತುಪ್ಪಳವನ್ನು ಹೊಂದಿರುವ ಸಣ್ಣ ಕಾಡು ಬೆಕ್ಕು. ದುಂಡಗಿನ ಕಿವಿ ಮತ್ತು ಕಣ್ಣುಗಳನ್ನು ಹೊಂದಿರುವ ಬೆಕ್ಕಿನ ತಲೆಯಿಂದ ದೇಹದವರೆಗಿನ ಉದ್ದವು 46 ರಿಂದ 65 ಸೆಂ.ಮೀ ಇದ್ದು, 21 ರಿಂದ 31 ಸೆಂ.ಮೀ ಉದ್ದದ ಪೊದೆ ಬಾಲವನ್ನು ಹೊಂದಿದೆ.
1776 ರಲ್ಲಿ ಮೊದಲ ಬಾರಿಗೆ ಪಲ್ಲಾಸ್ ಬೆಕ್ಕನ್ನು ಪೀಟರ್ ಸೈಮನ್ ಪಲ್ಲಾಸ್ ಎಂಬವರು ಬೈಕಲ್ ಸರೋವರದ ಸಮೀಪದಲ್ಲಿ ನೋಡಿದರು. ಕಾಕಸಸ್, ಇರಾನಿನ ಪ್ರಸ್ಥಭೂಮಿ, ಹಿಂದೂ ಕುಶ್, ಹಿಮಾಲಯದ ಕೆಲವು ಭಾಗಗಳು, ಟಿಬೆಟಿಯನ್ ಪ್ರಸ್ಥಭೂಮಿ, ಅಲ್ಟಾಯ್-ಸಯಾನ್ ಪ್ರದೇಶ ಮತ್ತು ದಕ್ಷಿಣ ಸೈಬೀರಿಯನ್ ಪರ್ವತ ವ್ಯಾಪ್ತಿಯಲ್ಲಿ ಕಲ್ಲಿನ ಪರ್ವತಗಳಲ್ಲಿ ಮತ್ತು ಪೊದೆಗಳೊಳಗೆ ಇವು ವಾಸಿಸುತ್ತಿವೆ. ಪಲ್ಲಾಸ್ ಬೆಕ್ಕುಗಳನ್ನು ಅವುಗಳ ದಪ್ಪ ಚರ್ಮಕ್ಕಾಗಿ ಬೇಟೆಯಾಡಿ ಕೊಲ್ಲಾಲಾಗುತ್ತಿತ್ತು. ಇದೀಗ ಈ ಬೆಕ್ಕುಗಳನ್ನು ಬೇಟೆಯಾಡುವುದು ಅಥವಾ ಮನೆಯಲ್ಲಿ ಸಾಕುವುದು ಕಾನೂನಿನ ಪ್ರಕಾರ ಅಪರಾಧವೆಂದು ಪರಿಗಣಿತವಾಗಿದೆ.
ಪಲ್ಲಾಸ್ ಬೆಕ್ಕು ಒಂಟಿಯಾಗಿರಲು ಬಯಸುತ್ತದ್ದಾರಿಂದ ಇವುಗಳನ್ನು ಸಮೀಪಿಸಿ ಮುದ್ದಿಸಿ ಲಾಲಿಸಲು ಸಾಧ್ಯವಿಲ್ಲ. ಬಹುತೇಕ ಬೆಕ್ಕುಗಳು ಮಾನವನ ಜೊತೆ ಒಡನಾಟ ಬಯಸಿದರೆ ಈ ಬೆಕ್ಕುಗಳು ಮನುಷ್ಯರ ಸಹವಾಸಕ್ಕೆ ಮನಸ್ಸು ತೋರುವುದಿಲ್ಲ. ಇವು 15,000 ಅಡಿಗಳಷ್ಟು ಎತ್ತರದ ಪ್ರದೇಶಗಳಲ್ಲಿ ವಾಸಿಸುವುದರಿಂದ ಇವುಗಳನ್ನು ತಗ್ಗು ಪ್ರದೇಶಗಳಲ್ಲಿ ಸಾಕುವುದು ವಾಸ್ತವಿಕವಾಗಿ ಸಾಧ್ಯವಿಲ್ಲ. ಇವುಗಳ ರೋಗ ಪ್ರತಿರಕ್ಷಣಾ ವ್ಯವಸ್ಥೆಯು ಎತ್ತರದ ಶೀತವಲಯದ ಪ್ರದೇಶಗಳಿಗೆ ಮಾತ್ರ ಹೊಂದಿಕೊಂಡಿವೆ. ಬೆದರಿಕೆಯ ಸಂದರ್ಭದಲ್ಲಿ ಅತ್ಯಂತ ಉಗ್ರವಾದ ನಡತೆಯನ್ನು ಈ ಬೆಕ್ಕುಗಳು ತೋರುವುದರಿಂದ ಇವುಗಳನ್ನು ಪಳಗಿಸಿ ಮನೆಯಲ್ಲಿ ಸಾಕುವುದು ಕಷ್ಟಸಾಧ್ಯ.
ಪಲ್ಲಾಸ್ ಬೆಕ್ಕನ್ನು 1950 ರ ದಶಕದ ಆರಂಭದಿಂದಲೂ ಪ್ರಾಣಿಸಂಗ್ರಹಾಲಯಗಳಲ್ಲಿ ಇರಿಸಲಾಗಿದೆ. 2018 ರ ಹೊತ್ತಿಗೆ, ಯುರೋಪ್, ರಷ್ಯಾ, ಉತ್ತರ ಅಮೇರಿಕಾ ಮತ್ತು ಜಪಾನ್ನಲ್ಲಿನ 60 ಪ್ರಾಣಿಸಂಗ್ರಹಾಲಯಗಳು ಪಲ್ಲಾಸ್ನ ಬೆಕ್ಕು ಸಂಬಂಧಿತ ಸಂತಾನೋತ್ಪತ್ತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತವೆ. ಬೆಕ್ಕುಗಳ ಪ್ರಾಥಮಿಕ ಆಹಾರದ ಮೂಲಗಳಾದ ಪಿಕಾಮತ್ತು ವೋಲ್ (ದಂಶಕ ಜಾತಿ) ಗಳನ್ನು ದೊಡ್ಡ ಪ್ರಮಾಣದಲ್ಲಿ ಕೊಲ್ಲುತ್ತಿರುವುದರಿಂದ, ಗಣಿಗಾರಿಕೆಗಳಿಂದ ಆವಾಸಸ್ಥಾನದ ಅವನತಿ ಮತ್ತು ಹವಾಮಾನ ಬದಲಾವಣೆಯಿಂದಾಗಿ ಬೆಕ್ಕುಗಳ ಅಸ್ತಿತ್ವಕ್ಕೆ ಬೆದರಿಕೆ ಉಂಟಾಗುತ್ತಿದೆ.