5 ದಶಕಗಳಿಂದ ಸ್ನಾನ ಮಾಡದ ವಿಶ್ವದ ಅತ್ಯಂತ ಕೊಳಕು ವ್ಯಕ್ತಿ 94 ನೇ ವಯಸ್ಸಿನಲ್ಲಿ ನಿಧನ

ಟೆಹ್ರಾನ್: ಸರಿಸುಮಾರು 5 ದಶಕಗಳಿಂದ ಸ್ನಾನ ಮಾಡದಿದ್ದಕ್ಕಾಗಿ “ವಿಶ್ವದ ಅತ್ಯಂತ ಕೊಳಕು ಮನುಷ್ಯ” ಎಂದು ಕರೆಯಲ್ಪಡುತ್ತಿದ್ದ ಇರಾನಿನ ವ್ಯಕ್ತಿಯೊಬ್ಬರು ತಮ್ಮ 94 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಸ್ನಾನವನ್ನೇ ಮಾಡದ ಅಮೌ ಹಾಜಿ ಭಾನುವಾರ ದೇಜ್ಗಾ ಗ್ರಾಮದಲ್ಲಿ ನಿಧನರಾದರು ಎಂದು ಐ.ಆರ್. ಎನ್. ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಮೌ ಹಾಜಿ ಅವರು “ಅನಾರೋಗ್ಯಕ್ಕೆ ಒಳಗಾಗುವ” ಭಯದಿಂದ ಸ್ನಾನ ಮಾಡುವುದನ್ನು ತಪ್ಪಿಸುತ್ತಿದ್ದರು ಎಂದು ಸ್ಥಳೀಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಸಂಸ್ಥೆ ವರದಿ ಮಾಡಿದೆ. ಆದರೆ ಈಗ್ಗೆ ಕೆಲವು ತಿಂಗಳ ಹಿಂದೆ ಮೊದಲ ಬಾರಿಗೆ, ಗ್ರಾಮಸ್ಥರು ಅವರನ್ನು ಶುಚಿಮಾಡಲು ಸ್ನಾನಗೃಹಕ್ಕೆ ಕರೆದೊಯ್ದಿದ್ದರು ಎಂದು ವರದಿ ಹೇಳಿದೆ.

World's Dirtiest Man' Is in Perfect Health

ಮತ್ತೆ ಕೆಲವರ ಪ್ರಕಾರ ಹಾಜಿ ಚಿಕ್ಕ ವಯಸ್ಸಿನಲ್ಲಿ ಯಾವುದೋ ಅಹಿತಕರ ಘಟನೆಯಿಂದ ಆಘಾತಕ್ಕೊಳಗಾಗಿದ್ದರು, ಹಾಗಾಗಿ ಅವರು ಸ್ನಾನ ಮಾಡಲು ಹಿಂದೇಟು ಹಾಕುತ್ತಿದ್ದರು. 2013 ರಲ್ಲಿ ಅವರ ಜೀವನದ ಬಗ್ಗೆ “ದಿ ಸ್ಟ್ರೇಂಜ್ ಲೈಫ್ ಆಫ್ ಅಮೌ ಹಾಜಿ” ಎಂಬ ಕಿರು ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ.

ಹಾಜಿ ತಾಜಾ ಆಹಾರವನ್ನು ಕೂಡಾ ಸೇವಿಸುತ್ತಿರಲಿಲ್ಲ. ತಮ್ಮ ಕೊಳಕು ಅವತಾರದಲ್ಲಿ ಅವರು ಬೀದಿಗಳಲ್ಲಿ ತಿರುಗುತ್ತಿದ್ದರು ಮತ್ತು ಗ್ರಾಮಸ್ಥರು ಅವರಿಗಾಗಿ ನಿರ್ಮಿಸಿಕೊಟ್ಟಿದ್ದ ಗುಡಿಸಲಿನಲ್ಲಿ ಅವರು ವಾಸಿಸುತ್ತಿದ್ದರು ಎಂದು ಟೆಹ್ರಾನ್ ನ ಸುದ್ದಿ ಸಂಸ್ಥೆ ತಿಳಿಸಿದೆ.