ವಿಶ್ವಕಪ್‌ ಟೂರ್ನಿಯಿಂದ ಧವನ್ ಹೊರಕ್ಕೆ..! ಋಷಬ್ ಪಂತ್ ತಂಡ ಸೇರ್ಪಡೆ 

ಲಂಡನ್: ಗಾಯದ ಸಮಸ್ಯೆಯಿಂದ ಕಳೆದ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದ ಟೀಂ‌ ಇಂಡಿಯಾದ ಆರಂಭಿಕ ಬ್ಯಾಟ್ಸ್ಮ್ಯಾನ್ ಶಿಖರ್ ಧವನ್ ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಇದುವರೆಗಿನ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನೇಥನ್ ಕೌಲ್ಟರ್ ನೈಲ್ ಎಸೆತದಲ್ಲಿ ಕೈಬೆರಳಿಗೆ ಗಾಯವಾಗಿತ್ತು. ಹೀಗಾಗಿ ಪಾಕಿಸ್ತಾನ ವಿರುದ್ದದ ಪಂದ್ಯದಿಂದ ಹೊರಗುಳಿದಿದ್ದರು. ಬಳಿಕ ಇಂಗ್ಲೆಂಡ್‌ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.
ಸದ್ಯ ಧವನ್ ಬದಲು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ತಂಡ ಸೇರಿಕೊಂಡಿದ್ದಾರೆ. ಧವನ್ ಉತ್ತಮ‌ ಫಾರ್ಮ್ ನಲ್ಲಿದ್ದು, ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವುದು ಟೀಂ ಇಂಡಿಯಾಗೆ ಹಿನ್ನಡೆಯಾಗಿದೆ.