ಮುನಿಯಾಲ್ ಆಯುರ್ವೇದ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಉಡುಪಿ: ಮುನಿಯಾಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಮುನಿಯಾಲ್ ಯೋಗ ಮತ್ತು ನ್ಯಾಚುರೋಪತಿ ಕಾಲೇಜು ಇದರ ಜಂಟಿ ಆಶ್ರಯದಲ್ಲಿ 9ನೇ ಅಂತಾರಾಷ್ಟೀಯ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಡಾ.ಗಣಪತಿ ಜೋಯಿಸ, (ನಿವೃತ್ತ ಮುಖ್ಯಸ್ಥರು, ಯೋಗ ವಿಭಾಗ, ಕೆ ಎಂ ಸಿ ಮಣಿಪಾಲ), ಮುನಿಯಾಲ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಸತ್ಯನಾರಾಯಣ ಬಿ, ಮುನಿಯಾಲ್ ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನ ಪ್ರಾಂಶುಪಾಲ ಡಾ.ಅಪರ್ಣ ಸುರೇಂದ್ರ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಚಂದ್ರಕಾಂತ್ ಭಟ್, ಸ್ನಾತಕ ಪೂರ್ವ ವಿಭಾಗದ ಮುಖ್ಯಸ್ಥ ಡಾ.ಶುಭ ಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಡಾ.ಗಣಪತಿ ಜೋಯಿಸ್ ಮಾತನಾಡಿ, ಯೋಗದ ಮಹತ್ವ ಮತ್ತು ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಧ್ಯೇಯವಾದ “ವಸುದೈವ ಕುಟುಂಬಕಮ್” ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಡಾ. ಸತ್ಯನಾರಾಯಣ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಯೋಗಶಿಕ್ಷಕಿ ಶ್ರೀಮತಿ ಜ್ಯೋತ್ಸ್ನಾ ಯೋಗ ಪ್ರಾತ್ಯಕ್ಷಿಕೆಯನ್ನು ಸಂಸ್ಥೆಯ ವಿದ್ಯಾರ್ಥಿಗಳಿಂದ ನಡೆಸಿಕೊಟ್ಟರು. ಸ್ವಸ್ಥವೃತ್ತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಆಶಿತಾ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಯೋಗನೃತ್ಯ, ಯೋಗ ಆಸನಗಳನ್ನು ಪ್ರದರ್ಶಿಸಲಾಯಿತು. ಈ ಸಂದರ್ಭದಲ್ಲಿ ಉಭಯ ಸಂಸ್ಥೆಯ ವೈದ್ಯರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಎಚ್ ಪಿ ಆರ್ ನರ್ಸಿಂಗ್ ಮತ್ತು ಪ್ಯಾರಮೆಡಿಕಲ್ ಕಾಲೇಜು ಮಣಿಪಾಲ ಹಾಗೂ ಕ್ರೈಸ್ಟ್ ಶಾಲೆ ಮಣಿಪಾಲದಲ್ಲಿ ಸಂಸ್ಥೆಯ ಸ್ವಸ್ಥವೃತ್ತ ವಿಭಾಗದಿಂದ ರೋಟರಾಕ್ಟ್ ಘಟಕದ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಂದ ಯೋಗದ ಮಹತ್ವ ಮತ್ತು ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಾಯಿತು.