ಮೇ 16 ರಂದು ಸಂಪೂರ್ಣ ಚಂದ್ರಗ್ರಹಣ: ಪ್ರಪಂಚದ ಹಲವೆಡೆ ರಕ್ತ ಚಂದಿರನ ನೋಡುವ ಭಾಗ್ಯ

ದೆಹಲಿ: ಮೇ 15-16ರ ಮಧ್ಯರಾತ್ರಿಯಲ್ಲಿ ಈ ವರ್ಷದ ಮೊದಲ ಸಂಪೂರ್ಣ ಚಂದ್ರಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಲಿದೆ. timeanddate.com ಪ್ರಕಾರ, ಈ ರಕ್ತ ಚಂದಿರ ಚಂದ್ರಗ್ರಹಣದ ಒಟ್ಟು ಹಂತವು ಉತ್ತರ ಮತ್ತು ದಕ್ಷಿಣ ಅಮೆರಿಕಾದಾದ್ಯಂತ ಮತ್ತು ಯುರೋಪ್ ಮತ್ತು ಆಫ್ರಿಕಾದ ಭಾಗಗಳಿಂದ ಗೋಚರಿಸುತ್ತದೆ. ದಕ್ಷಿಣ/ಪಶ್ಚಿಮ ಯುರೋಪ್, ದಕ್ಷಿಣ/ಪಶ್ಚಿಮ ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕದ ಬಹುಭಾಗ, ದಕ್ಷಿಣ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾ ಖಂಡಗಳು ಗ್ರಹಣದ ಕೆಲವು ಭಾಗಗಳನ್ನು ನೋಡುವ ಅವಕಾಶವನ್ನು ಪಡೆಯಲಿದೆ.

ಸಂಪೂರ್ಣ ಗ್ರಹಣದ ಅವಧಿಯು 1 ಗಂಟೆ 25 ನಿಮಿಷಗಳು ಮತ್ತು ಭಾಗಶಃ ಗ್ರಹಣದ ಹಂತವು ಎರಡು ಗಂಟೆಗಳಿಗಿಂತ ಹೆಚ್ಚಾಗಿರುತ್ತದೆ. ಈ ಬಾರಿ ಭಾರತದಲ್ಲಿ ಗ್ರಹಣವು ಗೋಚರಿಸುವುದಿಲ್ಲ. ಭಾರತೀಯ ಕಾಲಮಾನದ ಪ್ರಕಾರ ಗ್ರಹಣವು ಮೇ 16 ರಂದು ಬೆಳಿಗ್ಗೆ 7:02 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12:20 ಕ್ಕೆ ಕೊನೆಗೊಳ್ಳುತ್ತದೆ.

ಖಗೋಳ ಕುತೂಹಲಿಗಳಿಗಾಗಿ ಅಮೇರಿಕಾದ ನಾಸಾ ಸಂಸ್ಥೆಯು, ಆಕಾಶ ಘಟನೆಯ ನೇರ ಪ್ರಸಾರವನ್ನು ಮಾಡಲಿದೆ.

ಭಾರತದಲ್ಲಿ ಸೂರ್ಯ ಮತ್ತು ಚಂದ್ರಗಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಪಂಚಾಗದ ಪ್ರಕಾರ ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಮತ್ತು ಚಂದ್ರಗ್ರಹಣಕ್ಕೆ 9 ಗಂಟೆಗಳ ಮೊದಲು ಸೂತಕವನ್ನು ಆಚರಿಸಲಾಗುತ್ತದೆ.