ಸುತ್ತಲಿನ ಜಗತ್ತಿನ ಮಹಿಳೆಯರ ಬವಣೆಗಳೆ ಕಥೆಯ ಪಾತ್ರಗಳ ಹಿಂದಿನ ಸ್ಪೂರ್ತಿ: ವೈದೇಹಿ ಜಗತ್ತಿನಲ್ಲಿ ಕಥೆಗಾರ್ತಿಯ ಅಭಿಮತ

ಮಣಿಪಾಲ: ತಮ್ಮ ಮೇಲೆ ನಡೆಯುವ ದುರಾಡಳಿತದ ಬಗ್ಗೆ ಮಹಿಳೆಯರು ಮೌನವಿದ್ದರೂ ಒಂದು ಹಂತದ ನಂತರ ಸ್ಫೋಟಗೊಳ್ಳುತ್ತಾರೆ. ನನ್ನ ಸುತ್ತಲಿನ ಮಹಿಳೆಯರ ಜಗತ್ತು ಅವರ ವಿಧವಿಧದ ಬಳಲುವಿಕೆ ಪ್ರತಿಕ್ರಿಯಿಸಲು ಸಾಹಿತ್ಯವು ನನಗೆ ಅವಕಾಶ ನೀಡಿದೆ ಎಂದು ಖ್ಯಾತ ಲೇಖಕಿ ವೈದೇಹಿ ಹೇಳಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ ವೈದೇಹಿ ಜಗತ್ತು-ಎರಡು ದಿನಗಳ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ವೈದೇಹಿ, ಅಕ್ಕು, ಅಮ್ಮಚ್ಚಿ, ಪುಟ್ಟಮ್ಮತ್ತೆ ಮುಂತಾದ ಪಾತ್ರಗಳು ತಾವು ಕಂಡ ಮನುಜ ಜಗತ್ತಿನ ಹಲವು ಗುಣಗಳನ್ನು ಪ್ರತಿನಿಧಿಸುತ್ತವೆ ಎಂದರು. ಸಂಕಟ ಮತ್ತು ಬದುಕಿನ ಅಡಚಣೆಗಳನ್ನು ಅಂತಹ ಪಾತ್ರಗಳ ಮೂಲಕ ವ್ಯಕ್ತಪಡಿಸಲು ಪ್ರಯತ್ನಿಸಿದ್ದೇನೆ ಎಂದು ಅವರು ಹೇಳಿದರು.

ಪ್ರತಿಯೊಂದು ಭಾಷೆಯ ಸಾಹಿತ್ಯವು ಆ ಭಾಷೆಯೊಂದಿಗೆ ಬೆರೆತಿರುವ ಸಂಸ್ಕೃತಿಯ ಸೂಕ್ಷ್ಮತೆಗಳನ್ನು ಸೆರೆಹಿಡಿಯುತ್ತದೆ; ಆದ್ದರಿಂದ ಪ್ರತಿಯೊಂದು ಭಾಷೆಯ ಸಾಹಿತ್ಯವೂ ಉಳಿಯಬೇಕು, ಹಾಗೆಯೇ ಕನ್ನಡ ಸಾಹಿತ್ಯವೂ ಉಳಿಯಬೇಕು ಎಂದು ಅವರು ಪ್ರತಿಪಾದಿಸಿದರು.

‘ಅಮ್ಮಚ್ಚಿಯೆಂಬ ನೆನಪು’ ಚಿತ್ರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೈದೇಹಿ, ಪುರುಷರ ಪ್ರಾಬಲ್ಯವಿರುವ ಜಗತ್ತಿನಲ್ಲಿ ಮಹಿಳಾ ನಿರ್ದೇಶಕಿ ಸಿನಿಮಾ ಮಾಡುವುದು ಸುಲಭವಲ್ಲ. ನಿರ್ದೇಶಕಿ ಚಂಪಾ ಶೆಟ್ಟಿ ಸಿನಿಮಾ ಮಾಡುವ ಯೋಚನೆಯ ಬಗ್ಗೆ ಹೇಳಿದಾಗ ನಾನು ಒಪ್ಪಿಕೊಂಡೆ ಮತ್ತು ಅದು ಕೆಟ್ಟ ಚಿತ್ರವಾದರೂ ಸರಿ, ಸಿನಿಮಾ ಮಾಡು ಎಂದು ಹೇಳಿದ್ದೆ. ಕೊನೆಗೂ ಈ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮತ್ತು ನನಗೆ ತುಂಬಾ ಇಷ್ಟವಾಗಿದೆ ಎಂದು ವೈದೇಹಿ ಹೇಳಿದರು.

ಈ ಮೊದಲು ವೈದೇಹಿ ಅವರ ಸಣ್ಣ ಕಥೆಗಳನ್ನು ಆಧರಿಸಿದ ಅಮ್ಮಚ್ಚಿಯೆಂಬ ನೆನಪು ಚಿತ್ರ ಪ್ರದರ್ಶನಗೊಂಡಿತು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನಿರ್ದೇಶಕಿ ಚಂಪಾ ಶೆಟ್ಟಿ ಅವರು ಮೂಲ ಕಥೆಗೆ ನಿಷ್ಠರಾಗಿ ಉಳಿದು, ಚಿತ್ರದಲ್ಲಿ ಕಥೆಗಳ ಸೂಕ್ಷ್ಮವನ್ನು ಹೊರತರುವ ಪ್ರಯತ್ನ ಮಾಡಿದ್ದೇವೆ. ಚಿತ್ರ ನೋಡಿದ ನಂತರ ತಾವು ಮಹಿಳೆಯರನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ ಎಂದು ಜನರು ನನಗೆ ಹೇಳಿದ್ದಾರೆ. ಅದೇ ಚಿತ್ರದ ಯಶಸ್ಸು ಎಂದರು.

ಚಿತ್ರತಂಡದ ಗೀತಾ ಸುರತ್ಕಲ್, ಪ್ರಕಾಶ್ ಶೆಟ್ಟಿ, ಡಾ. ರಾಧಾಕೃಷ್ಣ ಉರಾಳ್ ಮತ್ತಿತರರು ಚರ್ಚೆಯಲ್ಲಿದ್ದರು.

ಇದಕ್ಕೂ ಮುನ್ನ ವೈದೇಹಿ ಅವರ ‘ಅಸ್ಪೃಷ್ಯರು’ ಕಾದಂಬರಿ ಕುರಿತು ಮಾತನಾಡಿದ ಪ್ರೊ.ಎನ್ ಮನು ಚಕ್ರವರ್ತಿ ,
ಕಾದಂಬರಿಯಲ್ಲಿ ದಲಿತ ಜಗತ್ತಿನ ಪ್ರಶ್ನೆಗಳ ಸಂಕೀರ್ಣ ಅನ್ವೇಷಣೆಯನ್ನು ಗಮನಿಸಬಹುದು. ಈ ಕಾದಂಬರಿ ಶಿವರಾಮ ಕಾರಂತರ ಚೋಮನ ದುಡಿ ಮತ್ತು ಯು ಆರ್ ಅನಂತಮೂರ್ತಿಯವರ ಭಾರತೀಪುರದೊಂದಿಗೆ ನಿರ್ದಿಷ್ಟ ಸಮೀಕರಣ ಹೊಂದಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಹೆಯ ಉಪಕುಲಾಧಿಪತಿ ಎಚ್‌ಎಸ್ ಬಲ್ಲಾಳ್, ತಾಂತ್ರಿಕ ಮತ್ತು ಆರೋಗ್ಯ ವಿಜ್ಞಾನಕ್ಕೆ ಸಮನಾಗಿಯೇ ಕಲೆಗಳನ್ನು ಪರಿಗಣಿಸಲು ವಿಶ್ವವಿದ್ಯಾಲಯ ಬದ್ಧವಾಗಿದೆ ಎಂದರು.

ಕೆಎಸ್‌ಡಿಎಸ್‌ಯು, ಬಿಹಾರದ ಮಾಜಿ ಕುಲಪತಿ ಡಾ.ನೀಲಿಮಾ ಸಿನ್ಹಾ ಮಾತನಾಡಿ, ಭೌತವಾದ (ಮಟೀರಿಯಲಿಸ್ಮ್) ಅದರ ನಕಾರಾತ್ಮಕ ಅರ್ಥದಲ್ಲಿ ಅಭಿವೃದ್ಧಿ ಹೊಂದಿದಾಗ, ನಾವು ಮೂಲಭೂತ ಮೌಲ್ಯಗಳಿಗೆ ಮರಳುವುದು ಮುಖ್ಯ ಎಂದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ ವರದೇಶ್ ಹಿರೇಗಂಗೆ ಮಾತನಾಡಿ ನಾವು ಜೇನ್ ಆಸ್ಟಿನ್ ಮತ್ತು ವರ್ಜೀನಿಯಾ ವೂಲ್ಫ್ ಅವರನ್ನು ಮಾತ್ರ ಅಧ್ಯಯನ ಮಾಡಿ, ವೈದೇಹಿ ಬಗ್ಗೆ ಅಧ್ಯಯನ ನಡೆಸದೆ ಹೋದರೆ ಅದು ಪ್ರಮಾದವೇ ಸರಿ ಎಂದರು. ಸಾಹಿತ್ಯಕ್ಕೆ ವೈದೇಹಿ ಅವರು ನೀಡಿದ ಕೊಡುಗೆಯನ್ನು, ವಿಶೇಷವಾಗಿ ಡಾ. ಟಿ ಎಂ ಪೈ- ಸಾಹಿತ್ಯ ಪೀಠಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಮಾಹೆಯ ಜಿಸಿಪಿಎಎಸ್ ವತಿಯಿಂದ ವೈದೇಹಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿ ಅಪರ್ಣಾ ಪರಮೇಶ್ವರನ್ ರಚಿಸಿದ್ದ ವೈದೇಹಿಯವರ ಡಿಜಿಟಲ್ ಪೇಂಟಿಂಗ್ ಅನ್ನು ಅವರಿಗೆ ನೀಡಲಾಯಿತು. ಜಿಸಿಪಿಎಎಸ್ ವಿದ್ಯಾರ್ಥಿಗಳಾದ ಸಾಗರ್, ಶ್ರವಣ್, ಸಂಪದಾ, ಮತ್ತು ವೆಲಿಕಾ ಕಾರ್ಯಕ್ರಮ ಸಂಯೋಜಿಸಿದರು.