ಗಂಡಸರ ಸಮಸ್ಯೆ ಬಗ್ಗೆ ನೀವು ಯಾವತ್ತಾದ್ರೂ ಯೋಚಿಸಿದ್ದೀರಾ? ಗಂಡಸರ ಮಾನಸಿಕ ಆರೋಗ್ಯ ಕುಸಿಯುತ್ತಿದೆ!

“ನೀನು ಗಂಡು ಹುಡ್ಗ, ನೀನು ಅಳೋ ಹಾಗಿಲ್ಲ”
“ಗಂಡಸರು ಅಂದ್ರೆ ಮನಸ್ಸು ಗಟ್ಟಿ ಇರತ್ತೆ ನಿಮ್ಗೆ.. ಯಾವುದೇ ರೀತಿ ಸಹಾಯ ಬೇಕಾಗಲ್ಲ”
ಇಂತಹ ಮಾತುಗಳನ್ನು ದಿನನಿತ್ಯ ನಾವು ಕೇಳುತ್ತಲೇ ಇರುತ್ತೇವೆ. ಪುರುಷರು ಅಂದ್ರೆ ಮಾನಸಿಕವಾಗಿ ತುಂಬಾ ಗಟ್ಟಿ, ಅವರಿಗೆ ಯಾವುದೇ ರೀತಿಯ ಮಾನಸಿಕ ತೊಂದರೆಗಳು ಬರುವುದಿಲ್ಲ ಎಂಬ ಭಾವನೆ ಬಹುತೇಕರಿಗೆ ಇದೆ. ಇಂದು ನವೆಂಬರ್ ೧೯ನ್ನು ವಿಶ್ವ ಪುರುಷರ ದಿನವನ್ನಾಗಿ ಆಚರಣೆ ಮಾಡುತ್ತೇವೆ. ಈ ಸಂದರ್ಭದಲ್ಲಿ ಪುರುಷರ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಹೊಂದಿ, ನಮ್ಮಲ್ಲಿರುವ ತಪ್ಪು ಕಲ್ಪನೆಗಳನ್ನು ದೂರಮಾಡಿ, ಪುರುಷರ ಸರ್ವತೋಮುಖ ಆರೋಗ್ಯಕ್ಕಾಗಿ ಹಾಗೂ ಕುಟುಂಬದ, ಸಮಾಜದ ಒಳಿತಿಗಾಗಿ ನಾವೆಲ್ಲರೂ ಜಾಗೃತರಾಗಿರುವ ಅನಿವಾರ್ಯತೆ ಇದೆ.

ಪುರುಷರು ಮತ್ತು ಮಾನಸಿಕ ಆರೋಗ್ಯ

ಬಹುತೇಕ ಮಾನಸಿಕ ಆರೋಗ್ಯ ಸಮಸ್ಯೆಗಳು ಕೇವಲ ಮಹಿಳೆಯರಿಗೆ ಮಾತ್ರ ಬಾಧಿಸುತ್ತವೆ ಎಂಬ ನಂಬಿಕೆ ಹಲವರಲ್ಲಿದೆ. ಸಮಾಜದ ನಿರೀಕ್ಷೆಗಳು, ಆಚರಣೆಗಳು ಮತ್ತು ಪದ್ಧತಿಗಳಿಂದಾಗಿ ಪುರುಷರು ಅವರ ಮಾನಸಿಕ ಆರೋಗ್ಯಕ್ಕೆ ಕುರಿತಾದ ವಿಷಯಗಳನ್ನು ಅಥವಾ ಸಮಸ್ಯೆಗಳನ್ನು ಇತರರೊಂದಿಗೆ ಹೇಳಿಕೊಳ್ಳುವುದು, ಚರ್ಚಿಸುವುದು ಅಥವಾ ಸಹಾಯ ಪಡೆದುಕೊಳ್ಳುವುದು ತುಂಬಾ ಕಡಿಮೆ. ಪುರುಷರೂ ಕೂಡಾ ರೂಢಿಗತ, ಬದಲಾಗದ ನಿರೀಕ್ಷೆಗಳಿಂದ ಮಾನಸಿಕವಾಗಿ ತೊಂದರೆಗೊಳಗಾಗುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ.

ಪುರುಷರು ಸಾಮಾನ್ಯವಾಗಿ ಹೊರಗೆ ದುಡಿಯುವವನು, ಗಳಿಸುವವನು, ಕುಟುಂಬದ ನಿಯಂತ್ರಣ ಅಥವಾ ಪ್ರಭುತ್ವ ಸಾಧಿಸುವವನು ಹಾಗಾಗಿ ಅವನು ಎಲ್ಲರಿಗಿಂತಾ ಶಕ್ತಿಶಾಲಿಯಾಗಿ, ಬಲಯುತವಾಗಿರಬೇಕು ಎಂಬ ನಿರೀಕ್ಷೆಗಳಿಂದ ಪುರುಷರು ತಮ್ಮೆಲ್ಲಾ ಭಾವನೆಗಳನ್ನು ವ್ಯಕ್ತಪಡಿಸದೇ ತಮ್ಮೊಳಗೇ ಹಿಡಿದಿಟ್ಟುಕೊಳ್ಳುತ್ತಾರೆ. ಒಂದುವೇಳೆ ಆತ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇ ಆದಲ್ಲಿ, ಹೆಣ್ಣಿಗ, ಸ್ತ್ರೀ ಸ್ವಭಾವದವ, ಪೌರುಷ ಇಲ್ಲದವ ಮುಂತಾದ ಪದಗಳನ್ನ ಆತನಿಗೆ ಅಂಟಿಸುತ್ತಾರೆ.

ಪ್ರಸವಾನಂತರದ ಖಿನ್ನತೆ ಹಾಗೂ ಪುರುಷರು

ಪ್ರಸವಾನಂತರದ ಖಿನ್ನತೆ ಎಂಬುದು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಖಿನ್ನತೆಯಾಗಿದ್ದು, ಹೊಸ ಬದಲಾವಣೆಗೆ ಹೊಂದಿಕೊಳ್ಳುವಲ್ಲಿ ಮಹಿಳೆಯರು ಎದುರಿಸುವ ಸವಾಲು ಹಲವರಿಗೆ ಖಿನ್ನತೆಯನ್ನು ಉಂಟುಮಾಡುತ್ತದೆ. ಅದೇ ರೀತಿ ೮-೧೦ ಶೇಕಡಾ ಪುರುಷರೂ ಕೂಡಾ ಮಗುವಿನ ತಂದೆಯಾಗುತ್ತಿದ್ದಂತೆ ಹೊಸ ಬದಲಾವಣೆ, ಜವಾಬ್ದಾರಿಗಳಿಗೆ ಹೊಂದಿಕೊಳ್ಳಲು ಕಷ್ಟವಾಗಿ ಖಿನ್ನತೆ ಅನುಭವಿಸುತ್ತಾರೆ. ಗರ್ಭಧಾರಣೆ ಹಾಗೂ ಮಗುವಿನ ಜನನದ ಸಮಯದಲ್ಲಿ ಮಹಿಳೆ ಹಾಗೂ ಪುರುಷರಲ್ಲಿಯೂ ಕೂಡಾ ಹಾರ್ಮೋನಿನ ಬದಲಾವಣೆ ಉಂಟಾಗುತ್ತದೆ. ಇದು ತಂದೆ-ಮಗುವಿನ ನಡುವಣ ಬಂಧುತ್ವ ಬಲಗೊಳ್ಳಲು ಸಹಾಯ ಮಾಡುತ್ತದೆ. ಆದರೆ ಈ ಹಾರ್ಮೋನಿನ ಉತ್ಪತ್ತಿಯ ಪ್ರಮಾಣದಲ್ಲಿ ವ್ಯತ್ಯಯ ಉಂಟಾದರೆ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಬೇಜಾರು, ಸಿಟ್ಟು, ಹಿಂಸೆ, ಮಾದಕ, ಮದ್ಯವ್ಯಸನವಾಗಿ ಪರಿವರ್ತನೆ ಆಗುವ ಸಂಭವ ಇರುತ್ತದೆ.

ಪುರುಷರು ಮತ್ತು ಕೌಟುಂಬಿಕ ದುರ್ಬಳಕೆ

ಕೌಟುಂಬಿಕ ದೌರ್ಜನ್ಯ ಎಂಬುದು ಕೇವಲ ಮಹಿಳೆಯರಿಗೆ ಸೀಮಿತವಾಗಿಲ್ಲ. ಅಂತರಾಷ್ಟ್ರೀಯ ಅಧ್ಯಯನಗಳ ಪ್ರಕಾರ ೭ ಪುರುಷರಲ್ಲಿ ಒಬ್ಬರಾದರೂ ಕುಟುಂಬದಲ್ಲಿ ದೈಹಿಕ ದೌರ್ಜನ್ಯವನ್ನು ಅನುಭವಿಸುತ್ತಿದ್ದಾರೆ. ಹರ್ಯಾಣದ ಗ್ರಾಮೀಣ ಪ್ರದೇಶಗಳ ೨೧-೪೯ ವರ್ಷಗಳ ವಿವಾಹಿತ ಪುರುಷರ ಮೇಲೆ ಅಧ್ಯಯನ ಕೈಗೊಂಡಾಗ ೫೨.೪ ಶೇಕಡಾದಷ್ಟು ಪುರುಷರು ಲಿಂಗಾಧಾರಿತ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಕುಟುಂಬದಲ್ಲಿ ಅತಿ ಹೆಚ್ಚು ಪುರುಷರು ಮಾನಸಿಕವಾಗಿ ದೌರ್ಜನ್ಯವನ್ನು ಹೊಂದುತ್ತಿದ್ದರೆ, ದೈಹಿಕ ದೌರ್ಜನ್ಯವನ್ನು ಹೊಂದುತ್ತಿರುವ ಪುರುಷರ ಸಂಖ್ಯೆ ಎರಡನೇ ಸ್ಥಾನದಲ್ಲಿದೆ.

ಪುರುಷರು ಹಾಗೂ ಲೈಂಗಿಕ ದೌರ್ಜನ್ಯ: ಪುರುಷರ ಲೈಂಗಿಕತೆ ಅದರಲ್ಲೂ ಪುರುಷ ಸಲಿಂಗಕಾಮಿಗಳ ಬಗ್ಗೆ ಅತಿಯಾದ ತಪ್ಪು ಕಲ್ಪನೆ, ಮೂಢನಂಬಿಕೆಗಳು ಚಾಲ್ತಿಯಲ್ಲಿದೆ. ಆದ್ದರಿಂದ ಪುರುಷರು ಹಾಗೂ ಗಂಡುಮಕ್ಕಳೂ ಕೂಡಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಆದರೆ ಇದು ಬೆಳಕಿಗೆ ಬರುತ್ತಿಲ್ಲ. ಒಂದು ಅಧ್ಯಯನದ ಪ್ರಕಾರ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿರುವ ಮಕ್ಕಳಲ್ಲಿ ಶೇಕಡಾ ೫೭ರಷ್ಟು ಮಕ್ಕಳು ತಮಗೆ  ಪರಿಚಯವಿರುವ, ತಾವು ನಂಬುವ ವಯಸ್ಕರಿಂದಲೇ ಹಿಂಸೆ ಅನುಭವಿಸುತ್ತಿದ್ದಾರೆ. ಹಾಗೂ ಇದರಲ್ಲಿ ಗಂಡು ಮಕ್ಕಳ ಸಂಖ್ಯೆಯೇ ಹೆಚ್ಚಿದೆ.

ಗಂಡು ಮಕ್ಕಳು ಮತ್ತು ಭಾಷಾ ಬೆಳವಣಿಗೆ

ಗಂಡು ಮಕ್ಕಳಿಗಿಂತಾ ಹೆಣ್ಣು ಮಕ್ಕಳು ಬೇಗನೇ ಮಾತನಾಡಲು ಪ್ರಾರಂಭಿಸಿದರೂ ಕೆಲವು ತಿಂಗಳುಗಳ ವ್ಯತ್ಯಾಸವಷ್ಟೇ. ಸಾಮಾನ್ಯವಾಗಿ ಎಲ್ಲಾ ಮಕ್ಕಳೂ ೧೮-೨೪ ತಿಂಗಳುಗಳ ಒಳಗೆ ಮಾತನಾಡಲು ಪ್ರಾರಂಭಿಸುತ್ತಾರೆ. ಅದರಲ್ಲಿ ಹೆಣ್ಣುಮಕ್ಕಳು ಮುಂಚೂಣಿಯಲ್ಲಿರುತ್ತಾರೆ ಮತ್ತು ಅತಿ ವೇಗವಾಗಿ ಭಾಷಾ ಬೆಳವಣಿಗೆಗೆ ತೆರೆದುಕೊಳ್ಳುತ್ತಾರೆ. ಆದರೆ ಗಂಡುಮಕ್ಕಳೂ ಇದರಲ್ಲಿ ಹಿಂದೆ ಬೀಳುವುದಿಲ್ಲ. ಪೋಷಕರ ಸಲಹೆ, ಪ್ರೋತ್ಸಾಹ, ವಿವಿಧ ರೀತಿಯ ಭಾಷೆಯ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳು ಹಾಗೂ ಆಟಗಳು, ಸಮವಯಸ್ಕರೊಂದಿಗಿನ ಒಡನಾಟ ಭಾಷಾ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ಕೊನೆಯ ಮಾತು

ಒಟ್ಟಾರೆಯಾಗಿ ಹೇಳುವುದಿದ್ದರೆ, ಪುರುಷ-ಮಹಿಳೆ ಯಾರೂ ಮೇಲಲ್ಲ ಯಾರೂ ಕೀಳಲ್ಲ. ಅವರವರಿಗೆ ಅವರದೇ ಆದ ವಿಶೇಷತೆ, ಸಾಮರ್ಥ್ಯ ಇದ್ದೇ ಇದೆ. ಪುರುಷನಾದ ಪಾತ್ರಕ್ಕೆ ಅವನಲ್ಲಿ ಯಾವುದೇ ಭಾವನೆಗಳಿಲ್ಲ ಎನ್ನಲು ಸಾಧ್ಯವೇ ಇಲ್ಲ. ಮನುಷ್ಯನೆಂದ ಮೇಲೆ ಮನಸ್ಸು ಇದ್ದೇ ಇರುತ್ತದೆ. ಮನಸ್ಸಿಗೆ, ಮನಸ್ಸಿನ ಸಮಸ್ಯೆಗಳಿಗೆ ಯಾವುದೇ ಲಿಂಗ ಭೇದವಿಲ್ಲ. ಹಾಗಾಗಿ ತಪ್ಪು ಕಲ್ಪನೆಗಳಿಗೆ ಎಡೆಮಾಡಿಕೊಡದೇ ಮಾನಸಿಕ ಆರೋಗ್ಯದ ಕಡೆ ಗಮನ ಕೊಡುವುದು ಪ್ರತಿಯೊಬ್ಬರ ಕರ್ತವ್ಯ. ಮಾನಸಿಕವಾಗಿ ನೋವನ್ನನುಭವಿಸುತ್ತಿದ್ದರೆ ಸಾಧ್ಯವಾದಷ್ಟು ನಿಮ್ಮ ಸಂಗಾತಿಯೊಂದಿಗೆ, ಹಿತೈಷಿಗಳೊಂದಿಗೆ ಹಂಚಿಕೊಳ್ಳಿ, ಆಪ್ತಸಮಾಲೋಚಕರನ್ನು ಬೇಟಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಹಿಂಜರಿಕೆಯನ್ನು ತೊರೆದು ನೆಮ್ಮದಿಯ ನಾಳೆಗಳನ್ನು ಕಂಡುಕೊಳ್ಳೋಣ.

ಮಾಹಿತಿ: ಅನಿರ್ವೇದ ಆಪ್ತಸಮಾಲೋಚನೆ ಹಾಗೂ ಸಂಪನ್ಮೂಲ ಕೇಂದ್ರ, ಮಂಗಳೂರು.

ಕನ್ನಡಕ್ಕೆ:ಬಿ.ಸಂ.ಸುವರ್ಚಲಾ