ಉಡುಪಿ: ವಿಶ್ವ ಹೃದಯ ದಿನದ ಅಂಗವಾಗಿ ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗ, ಕಡೆಕಾರು ಗ್ರಾಮೀಣ ಹೆರಿಗೆ ಮತ್ತು ಶಿಶು ಕಲ್ಯಾಣ ಕೇಂದ್ರ, ಅಂಬಲಪಾಡಿ ಮತ್ತು ಕಡೆಕಾರು ಗ್ರಾಮ ಪಂಚಾಯ್ತಿ, ಸಾಫಲ್ಯ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ‘ಆರೋಗ್ಯದೆಡೆ ನಮ್ಮ ನಡಿಗೆ’ ಎಂಬ ಧ್ಯೇಯ ವಾಕ್ಯದಡಿ ಜನಜಾಗೃತಿ ಜಾಥಾ ಭಾನುವಾರ ನಡೆಯಿತು.
ಅಂಬಲಪಾಡಿ ಗ್ರಾಮ ಪಂಚಾಯ್ತಿನಿಂದ ಕಡೆಕಾರಿನ ಗ್ರಾಮೀಣ ಹೆರಿಗೆ ಮತ್ತು ಶಿಶು ಕಲ್ಯಾಣ ಕೇಂದ್ರದವರೆಗೆ ನಡೆದ ಜನಜಾಗೃತಿ ಜಾಥಾಗೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ಡೀನ್ ಡಾ. ಶರತ್ ರಾವ್ ಚಾಲನೆ ನೀಡಿದರು. ಅನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಬದಲಾದ ಜೀವನ ಪದ್ಧತಿ, ಆಹಾರ ಪದ್ಧತಿ, ದುಶ್ಚಟಗಳಿಗೆ ದಾಸರಾಗಿರುವುದರಿಂದ ಇಂದು ಮನುಷ್ಯನಲ್ಲಿ ಹೃದಯ ಸಂಬಂಧಿ ರೋಗಗಳು ಹೆಚ್ಚಾಗಿ ಕಂಡು ಬರುತ್ತಿದೆ. ಆದ್ದರಿಂದ ಆರೋಗ್ಯಕರ ಜೀವನ ಪದ್ಧತಿ, ದಿನನಿತ್ಯ ನಿಯಮಿತ ವ್ಯಾಯಾಮ, ತಂಬಾಕು, ಮದ್ಯಪಾನ ಸೇವನೆಯನ್ನು ತ್ಯಜಿಸಿ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು ಎಂದರು.
ಕಡೆಕಾರು ಗ್ರಾಮ ಪಂಚಾಯ್ತಿ ಅಧ್ಯಕ್ಷ ರಘುನಾಥ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆ ಡಾ. ಸುಮಾ ನಾಯರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಸಾಫಲ್ಯ ಟ್ರಸ್ಟ್‌ನ ನಿರುಪಮಾ
ಪ್ರಸಾದ್ ಶೆಟ್ಟಿ, ತಾಪಂ ಸದಸ್ಯೆ ಶಿಲ್ಪಾ ರವೀಂದ್ರ, ಮಾಜಿ ಸದಸ್ಯ ದಿವಾಕರ ಕುಂದರ್, ಉದ್ಯಾವರ ಲಯನ್ಸ್ ಕ್ಲಬ್‌ನ ಪ್ರತಾಪ್ ಕುಮಾರ್, ಚೈತನ್ಯ ವೆಲ್ಫೇರ್ ಟ್ರಸ್ಟ್‌ನ ಪ್ರವರ್ತಕ ಸುನಿಲ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಲಾವಿದ ಶ್ರೀನಾಥ್ ಮಣಿಪಾಲ ರಚಿಸಿದ ಹೃದಯ ಜಾಗೃತಿ ಕಲಾಕೃತಿಯನ್ನು ಅನಾವರಣಗೊಳಿಸಲಾಯಿತು. ಸಮುದಾಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮುರಳೀಧರ್ ಕುಲಕರ್ಣಿ
ಸ್ವಾಗತಿಸಿದರು. ಶ್ಯಾಮಸುಂದರ್ ವಂದಿಸಿದರು. ಸಮಾಜ ಸೇವಕಿ ನೀಲಾವತಿ ಕಾರ್ಯಕ್ರಮ ನಿರೂಪಿಸಿದರು.