ವಿಶ್ವ ಗೇಮ್ಸ್​ 2023ರ ಐಬಿಎಸ್‌ಎ :ಭಾರತದ ಅಂಧರ ಕ್ರಿಕೆಟ್ ತಂಡಗಳ ನಾಯಕರು, ಉಪನಾಯಕರ ಹೆಸರು ಪ್ರಕಟ

ಬೆಂಗಳೂರು :ಭಾರತದ ಅಂಧರ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ನಾಯಕರು ಮತ್ತು ಉಪನಾಯಕರುಗಳ ಹೆಸರು ಪ್ರಕಟವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುರುಷರ ಕ್ರಿಕೆಟ್ ತಂಡದ ನಾಯಕನಾಗಿ ಅಜಯ್ ಕುಮಾರ್ ರೆಡ್ಡಿ ಇಲ್ಲೂರಿ ಮತ್ತು ವೆಂಕಟೇಶ್ವರ ರಾವ್ ದುನ್ನಾ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಬಿ 2 ವಿಭಾಗದ ಇಬ್ಬರೂ ಆಟಗಾರರು ಆಂಧ್ರಪ್ರದೇಶ ಮೂಲದವರಾಗಿದ್ದಾರೆ. ಕರ್ನಾಟಕ ಮೂಲದ ವರ್ಷಾ ಉಮಾಪತಿ (ಬಿ1 ವಿಭಾಗ) ಮಹಿಳಾ ಕ್ರಿಕೆಟ್ ತಂಡ ನಾಯಕಿಯಾಗಿ, ಒಡಿಶಾದ ಫುಲಾ ಸರನ್ (ಬಿ 3 ವಿಭಾಗ) ರನ್ನು ತಂಡದ ಉಪನಾಯಕಿಯಾಗಿ ನೇಮಿಸಲಾಗಿದೆ. ಈ ಸಂದರ್ಭದಲ್ಲಿ ಪುರುಷರ ಮತ್ತು ಮಹಿಳಾ ತಂಡಗಳ ಜರ್ಸಿಗಳನ್ನು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ ಅನಾವರಣಗೊಳಿಸಿತು.
ಬರ್ಮಿಂಗ್ ಹ್ಯಾಮ್​ನಲ್ಲಿ 2023ರ ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಫೆಡರೇಶನ್ (ಐಬಿಎಸ್‌ಎ) ವಿಶ್ವ ಗೇಮ್ಸ್ ನಡೆಯಲಿದೆ. ಈ ಹಿನ್ನೆಲೆ ಭಾರತವನ್ನು ಪ್ರತಿನಿಧಿಸಲಿರುವ ಭಾರತೀಯ ಅಂಧರ ಕ್ರಿಕೆಟ್ ತಂಡಗಳ ಪುರುಷರು ಮತ್ತು ಮಹಿಳೆಯರ ನಾಯಕರ ಹೆಸರನ್ನು ಕ್ರಿಕೆಟ್ ಅಸೋಸಿಯೇಷನ್ ಫಾರ್ ದಿ ಬ್ಲೈಂಡ್ ಇನ್ ಇಂಡಿಯಾ (ಸಿಎಬಿಐ) ಗುರುವಾರ ಪ್ರಕಟಿಸಿದೆ.

ಇದೆ ವೇಳೆ ಸಿಎಬಿಐ ಸಂಸ್ಥಾಪಕ ಅಧ್ಯಕ್ಷ ಡಾ. ಮಹಾಂತೇಶ ಜಿ. ಕಿವಡಸಣ್ಣವರ್ ಮಾತನಾಡಿ, ವಿಶ್ವ ಕ್ರೀಡಾಕೂಟದಲ್ಲಿ ಪುರುಷರ ಮತ್ತು ಮಹಿಳಾ ತಂಡಗಳು ಭಾಗವಹಿಸುತ್ತಿರುವುದು ಇದೇ ಮೊದಲು. ಕಳೆದ 10 ವರ್ಷಗಳಲ್ಲಿ ಭಾರತೀಯ ಪುರುಷರ ಅಂಧರ ತಂಡವು 3 ಟಿ-20 ವಿಶ್ವಕಪ್, 2 ಏಕದಿನ ವಿಶ್ವಕಪ್ ಮತ್ತು ಒಂದು ಏಷ್ಯಾ ಕಪ್ ಗೆದ್ದಿದೆ. ಬರ್ಮಿಂಗ್ ಹ್ಯಾಮ್​ನಲ್ಲಿ ದೇಶದ ಧ್ವಜವನ್ನು ಎತ್ತರಕ್ಕೆ ಹಾರಿಸುವ ಸರದಿ ಈಗ ಪುರುಷರ ತಂಡದೊಂದಿಗೆ ಮಹಿಳಾ ತಂಡದದ್ದಾಗಿದೆ ಎಂದರು

ಐಬಿಎಸ್‌ಎ ವಿಶ್ವ ಗೇಮ್ಸ್ ವೇಳಾಪಟ್ಟಿ
ವಿಶ್ವ ಕ್ರೀಡಾಕೂಟಕ್ಕೆ ಮುಂಚಿತವಾಗಿ ಈ ಘೋಷಣೆಯ ಬಗ್ಗೆ ಮಾತನಾಡಿದ ಸಿಎಬಿಐ ಅಧ್ಯಕ್ಷ ಬುಸೇಗೌಡ, ಐಬಿಎಸ್‌ಎ ವಿಶ್ವ ಕ್ರೀಡಾಕೂಟದಲ್ಲಿ ಭಾಗವಹಿಸಲು ಭಾರತೀಯ ಮಹಿಳಾ ಮತ್ತು ಪುರುಷರ ಕ್ರಿಕೆಟ್ ತಂಡಗಳು ಬರ್ಮಿಂಗ್ ಹ್ಯಾಮ್ ಗೆ ಪ್ರಯಾಣಿಸುತ್ತಿದೆ. ಈ ಕುರಿತು ಅಧ್ಯಕ್ಷನಾಗಿ ಮೊದಲ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಲು ನನಗೆ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ. ವಿಶ್ವ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಅಂಧರ ಕ್ರಿಕೆಟ್ ಸೇರಿಸಿದ್ದಕ್ಕಾಗಿ ನಾವು ಐಬಿಎಸ್‌ಎಗೆ ಕೃತಜ್ಞರಾಗಿದ್ದೇವೆ. ದೇಶವನ್ನು ಪ್ರತಿನಿಧಿಸಲು ಮತ್ತು ವಿಶ್ವ ಚಾಂಪಿಯನ್ ಆಗಿ ಮುಂದುವರಿಯಲು ಆಟಗಾರರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ ಎಂದರು.
.

ಐಬಿಎಸ್‌ಎ ವಿಶ್ವ ಗೇಮ್ಸ್ 2023 ವೇಳಾಪಟ್ಟಿ : ಆಗಸ್ಟ್ 14 ರಂದು ಭಾರತೀಯ ಪುರುಷರ ತಂಡವು ಬರ್ಮಿಂಗ್ ಹ್ಯಾಮ್​ಗೆ ಆಗಮಿಸಲಿದೆ. ಒಂದು ದಿನದ ನಂತರ ಆಗಸ್ಟ್ 15 ರಂದು ತಂಡವು ತಮ್ಮ ಅಧಿಕಾರಿಗಳೊಂದಿಗೆ ಭಾರತದ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಅದೇ ದಿನ ಅಭ್ಯಾಸ ಪಂದ್ಯವನ್ನು ಆಡಲಿದ್ದು, ಭಾರತ ಮಹಿಳಾ ತಂಡ ಆಗಸ್ಟ್ 17ರಂದು ಬರ್ಮಿಂಗ್ ಹ್ಯಾಮ್ ನಲ್ಲಿ ಇಳಿಯಲಿದೆ. ಆಗಸ್ಟ್ 20 ರಂದು ಭಾರತೀಯ ಪುರುಷರ ಮತ್ತು ಮಹಿಳಾ ತಂಡಗಳು ತಮ್ಮ ಅಭಿಯಾನವನ್ನು ಆರಂಭಿಸಲಿದೆ. ಮೊದಲ ಪಂದ್ಯದಲ್ಲಿ ಭಾರತ ಪುರುಷರ ತಂಡ ಪಾಕಿಸ್ತಾನವನ್ನು ಎದುರಿಸಲಿದೆ. ಮಹಿಳಾ ತಂಡವು ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಐತಿಹಾಸಿಕ ಚಾಂಪಿಯನ್ ಶಿಪ್​ನಲ್ಲಿ ತಂಡವನ್ನು ಮುನ್ನಡೆಸಲು ಅವಕಾಶ ನೀಡಿದ ಸಿಎಬಿಐಗೆ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡದ ನಾಯಕಿ ವರ್ಷಾ ಕೃತಜ್ಞತೆ ಸಲ್ಲಿಸಿದರು. ಭಾರತೀಯ ಪುರುಷರ ಅಂಧರ ಕ್ರಿಕೆಟ್ ತಂಡದ ನಾಯಕ ಅಜಯ್ ಕುಮಾರ್ ರೆಡ್ಡಿ ಪಂದ್ಯಾವಳಿಯ ಸಿದ್ಧತೆ ಮತ್ತು ಐಬಿಎಸ್‌ಎ ವಿಶ್ವ ಕ್ರೀಡಾಕೂಟದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ತಂಡವು ಹೇಗೆ ಉತ್ಸುಕವಾಗಿದೆ ಎಂದು ಹೇಳಿದರು.

ಭಾರತ ಅಂಧರ ಮಹಿಳಾ ತಂಡ :

1. ವರ್ಷಾ ಯು – ಬಿ1 – ಕರ್ನಾಟಕ (ನಾಯಕ)
2. ವಲಸನೈನಿ ರಾವಣಿ – ಬಿ1 – ಆಂಧ್ರ ಪ್ರದೇಶ
3. ಸಿಮು ದಾಸ್ – ಬಿ1 – ರಾಜಸ್ಥಾನ
4. ಪದ್ಮಿನಿ ಟುಡು – ಬಿ1 – ಒಡಿಶಾ
5. ಕಿಲ್ಲಾಕಾ ಸಂಧ್ಯಾ – ಬಿ1 – ಆಂಧ್ರ ಪ್ರದೇಶ
6. ಪ್ರಿಯಾ – ಬಿ1 – ಮಧ್ಯಪ್ರದೇಶ
7. ಗಂಗವ್ವ ನೀಲಪ್ಪ ಹರಿಜನ – ಬಿ2 – ಕರ್ನಾಟಕ
8. ಸಾಂಡ್ರಾ ಡೇವಿಸ್ ಕರಿಮಲಿಕ್ಕಲ್ – ಬಿ2 – ಕೇರಳ
9. ಬಸಂತಿ ಹನ್ಸ್ದಾ – ಬಿ2 – ಒಡಿಶಾ
10. ಪ್ರೀತಿ ಪ್ರಸಾದ್ – ಬಿ2 – ದೆಹಲಿ
11. ಸುಷ್ಮಾ ಪಟೇಲ್ – ಬಿ3 – ಮಧ್ಯಪ್ರದೇಶ
12. ಎಂ.ಸತ್ಯವತಿ – ಬಿ3 – ಆಂಧ್ರ ಪ್ರದೇಶ
13. ಫುಲಾ ಸಾರೆನ್ – ಬಿ3 – ಒಡಿಶಾ (ಉಪನಾಯಕ)
14. ಝಿಲಿ ಬಿರುವಾ – ಬಿ3 – ಒಡಿಶಾ
15. ಗಂಗಾ ಸಂಭಾಜಿ ಕದಮ್ – ಬಿ3 – ಮಹಾರಾಷ್ಟ್ರ
16. ದೀಪಿಕಾ ಟಿ.ಸಿ. – ಬಿ3 – ಕರ್ನಾಟಕ

ಭಾರತ ಅಂಧರ ಪುರುಷರ ತಂಡ :

1. ಬಸಪ್ಪ ವಡ್ಡಗೋಳ – ಬಿ1 – ಕರ್ನಾಟಕ
2. ಮೊಹಮ್ಮದ್ ಜಾಫರ್ ಇಕ್ಬಾಲ್ – ಬಿ1 – ಒಡಿಶಾ
3. ಮಹಾರಾಜ ಶಿವಸುಬ್ರಮಣಿಯನ್ – ಬಿ1 – ತಮಿಳುನಾಡು
4. ಓಂಪ್ರಕಾಶ್ ಪಾಲ್ – ಬಿ1 – ಮಧ್ಯಪ್ರದೇಶ
5. ನರೇಶ್ ಭಾಯ್ ಬಾಲುಭಾಯ್ ತುಮ್ಡಾ – ಬಿ 1 – ಗುಜರಾತ್
6. ನಿಲೇಶ್ ಯಾದವ್ – ಬಿ1 – ದೆಹಲಿ
7. ಅಜಯ್ ಕುಮಾರ್ ರೆಡ್ಡಿ ಇಲ್ಲೂರಿ – ಬಿ 2 – ಆಂಧ್ರಪ್ರದೇಶ (ನಾಯಕ)
8. ವೆಂಕಟೇಶ್ವರ ರಾವ್ ದುನ್ನಾ – ಬಿ 2 – ಆಂಧ್ರಪ್ರದೇಶ (ಉಪನಾಯಕ)
9. ಪಂಕಜ್ ಭುಯೆ – ಬಿ2 – ಒಡಿಶಾ
10. ರಾಮ್ಬೀರ್ ಸಿಂಗ್ – ಬಿ 2 – ಹರಿಯಾಣ
11. ನಕುಲಾ ಬಡನಾಯಕ್ – ಬಿ 2 – ಒಡಿಶಾ
12. ಇರ್ಫಾನ್ ದಿವಾನ್ – ಬಿ2 – ದೆಹಲಿ
13. ಪ್ರಕಾಶ ಜಯರಾಮಯ್ಯ – ಬಿ3 – ಕರ್ನಾಟಕ
14. ಸುನಿಲ್ ರಮೇಶ್ – ಬಿ3 – ಕರ್ನಾಟಕ
15. ದೀಪಕ್ ಮಲಿಕ್ – ಬಿ3 – ಹರಿಯಾಣ
16. ದುರ್ಗಾ ರಾವ್ ಟೊಂಪಾಕಿ – ಬಿ 3 – ಆಂಧ್ರಪ್ರದೇಶ
17. ದಿನೇಶ್ ಭಾಯ್ ಚಮಯ್ದಾಭಾಯಿ ರಾತ್ವಾ – ಬಿ 3 – ಗುಜರಾತ್