ಮಣಿಪಾಲ: ಮಾಹೆ ಆವರಣದಲ್ಲಿ ವಿಶ್ವ ಉದ್ಯಮಿಗಳ ದಿನಾಚರಣೆ

ಮಣಿಪಾಲ: ವಿಶ್ವ ಉದ್ಯಮಿಗಳ ದಿನದ ಅಂಗವಾಗಿ ಆಗಸ್ಟ್ 23 ರಂದು ಮಹಿಳಾ ಉದ್ಯಮಶೀಲತೆ ಎಂಬ ವಿಷಯವನ್ನಾಧರಿಸಿ, ಮಣಿಪಾಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಮತ್ತು ಇನ್ಕ್ಯುಬೇಟರ್ ಗಳು ಜಂಟಿಯಾಗಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದವು.

ಮಹಿಳೆಯರು ಭಾರತದ ಬೆಳವಣಿಗೆಯ ಪಥವನ್ನು ಮರುವ್ಯಾಖ್ಯಾನಿಸುತ್ತಿದ್ದಾರೆ. ಲಿಂಗ ಸಮಾನತೆಯನ್ನು ಸಾಧಿಸುವುದರಿಂದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಭಾರತದ ಕನಸನ್ನು ತ್ವರಿತವಾಗಿ ಸಾಕಾರಗೊಳಿಸಬಹುದು ಎಂದು ಕಾರ್ಯಕ್ರಮದ ಮುಖ್ಯ ಅತಿಥಿ ಕೊಲೊಸ್ಸಾ ವೆಂಚರ್ಸ್ ಸಂಸ್ಥಾಪಕಿ ಮತ್ತು ಸಿಇಒ ಶ್ರೀಮತಿ ಆಶು ಸುಯಶ್ ಅವರು ಹೇಳಿದರು.

ಪ್ರತಿವರ್ಷ ಆಗಸ್ಟ್ 21 ರಂದು ವಿಶ್ವ ಉದ್ಯಮಿಗಳ ದಿನವನ್ನು ಉದ್ಯಮಶೀಲತೆ, ನಾವೀನ್ಯತೆ ಮತ್ತು ನಾಯಕತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆಚರಿಸಲಾಗುತ್ತದೆ. ಮಹಿಳೆಯರ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಕೊಲೊಸ್ಸಾ ವೆಂಚರ್ಸ್ ನಿಧಿಯನ್ನು ಸ್ಥಾಪಿಸಿದೆ. ಈ ನಿಧಿಯನ್ನು ಮಹಿಳಾ ಸ್ಥಾಪಿತ ಕಂಪನಿಗಳು ಮತ್ತು ಮಹಿಳೆಯರು ಪ್ರಮುಖ ಫಲಾನುಭವಿಗಳಾದ ಪುರುಷ ಸ್ಥಾಪಿತ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹ ಸಂಸ್ಥಾಪಕಿ ಮತ್ತು ಸಹ ಮುಖ್ಯಸ್ಥೆ ಶ್ರೀಮತಿ ವಂದನಾ ರಾಜ್ಯಾಧ್ಯಕ್ಷ ಉಪಸ್ಥಿತರಿದ್ದರು.

ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು ತಮ್ಮ ಭಾಷಣದಲ್ಲಿ, ಮಹಿಳೆಯರ ಸಬಲೀಕರಣಕ್ಕಾಗಿ ಕೊಲೊಸ್ಸಾ ವೆಂಚರ್ಸ್ ಸಂಸ್ಥಾಪಕರ ಪ್ರಯತ್ನಗಳನ್ನು ಶ್ಲಾಘಿಸಿದರು. ಉದ್ಯಮಿಗಳು ಆರ್ಥಿಕತೆಯ ಬೆನ್ನೆಲುಬಾಗಿದ್ದು ಸಮಾಜಕ್ಕೆ ಬೇಕಾದ ಸಂಪತ್ತನ್ನು ಸೃಷ್ಟಿಸುತ್ತಾರೆ. ಮಣಿಪಾಲ್ ಗ್ರೂಪ್ ವಿಶ್ವವಿದ್ಯಾನಿಲಯಗಳಲ್ಲಿನ ನಮ್ಮ 4 ಇನ್ಕ್ಯುಬೇಟರ್‌ಗಳ ಮೂಲಕ, ನಾವು ಮಹಿಳೆಯರು, ಅಧ್ಯಾಪಕರು, ವಿದ್ಯಾರ್ಥಿಗಳು, ಹಳೆವಿದ್ಯಾರ್ಥಿಗಳು ಮತ್ತು ಇತರರ 150 ಕ್ಕೂ ಹೆಚ್ಚು ಸ್ಟಾರ್ಟಪ್‌ಗಳನ್ನು ಬೆಂಬಲಿಸಿದ್ದೇವೆ. ಆಧುನಿಕ ಮಣಿಪಾಲದ ಶಿಲ್ಪಿ ಡಾ.ಟಿ.ಎಂ.ಎ ಪೈ ಅವರಂತೆ ಉದ್ಯಮಿಗಳು ಉದ್ಯಮದ ಅಭಿವೃದ್ಧಿಯೊಂದಿಗೆ ಸಮುದಾಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಕರೆಕೊಟ್ಟರು.

ಕಾರ್ಯಕ್ರಮದಲ್ಲಿ ಸ್ಥಳೀಯ ಉದ್ಯಮಿಗಳನ್ನು ಒಳಪಡಿಸುವ ಅಂಗವಾಗಿ, ಮಹಿಳಾ ಉದ್ಯಮಿಗಳ ವೇದಿಕೆ (ಪವರ್), ಉಡುಪಿ ಮತ್ತು ರೋಟರಿ ಜಿಲ್ಲೆ 3182 ರ ವಲಯ 4 ರೊಂದಿಗೆ ಜಂಟಿಯಾಗಿ ಅನುಭವ ಹಂಚಿಕೆ ಅಧಿವೇಶನವನ್ನು ಕೂಡಾ ಆಯೋಜಿಸಲಾಯಿತು. ಪವರ್ ನ ಮಹಿಳಾ ಉದ್ಯಮಿಗಳು ಸೇವೆ, ಉತ್ಪಾದನೆ ಮತ್ತು ಆಹಾರ ವಲಯಗಳಲ್ಲಿ ತಾವು ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಹಂಚಿಕೊಂಡರು. ರೋಟರಿ ಸದಸ್ಯರು ಮಹಿಳಾ ಸಬಲೀಕರಣದ ಅಗತ್ಯವನ್ನು ಒತ್ತಿ ಹೇಳಿದರು .

ಮಾಹೆಯ ಅರೋಗ್ಯ ವಿಜ್ಞಾನ ವಿಭಾಗದ ಸಹಕುಲಪತಿ ಡಾ. ವೆಂಕಟರಾಯ ಪ್ರಭು, ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಗ್ರೂಪ್ ನ ಕ್ರಿಯೇಟಿವ್ ಡೈರೆಕ್ಟರ್ ಶ್ರುತಿ ಪೈ, ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಗ್ರೂಪ್ ನ ಹಿರಿಯ ಉಪಾಧ್ಯಕ್ಷ ಹರಿನಾರಾಯಣ ಶರ್ಮಾ, ಪವರ್-ಉಡುಪಿಯ ಅಧ್ಯಕ್ಷೆ ಶ್ರೀಮತಿ ಪೂನಂ ಶೆಟ್ಟಿ, ರೋಟರಿ ಜಿಲ್ಲೆ 3182 ರ ವಲಯ 4 ರ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ, ಮಾಹೆಯ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಡಾ. ರವಿರಾಜ ಎನ್ ಎಸ್, ಮಣಿಪಾಲ್ ಯುನಿವರ್ಸಲ್ ಟೆಕ್ನಾಲಜಿ ಬಿಸಿನೆಸ್ ಇನ್ಕ್ಯುಬೇಟರ್ (ಎಂಯುಟಿಬಿಐ) ಸಿಇಒ ಡಾ. ವೈ ಶ್ರೀಹರಿ ಉಪಾಧ್ಯಾಯ, ಮಣಿಪಾಲ-ಕರ್ನಾಟಕ ಸರ್ಕಾರದ ಬಯೋಇನ್‌ಕ್ಯುಬೇಟರ್‌ ಸಿಇಒ ಡಾ. ಮನೇಶ್ ಥಾಮಸ್ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಣಿಪಾಲ ದಂತ ವಿಜ್ಞಾನ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ.ಶ್ರುತಿ ಆಚಾರ್ಯ ಮತ್ತು ಉದ್ಯಮಿ ಸುಪ್ರಿಯಾ ನಿಕ್ಕಮ್ ಕಾರ್ಯಕ್ರಮವನ್ನು ಸಂಯೋಜಿಸಿದರು.

ಈ ಕಾರ್ಯಕ್ರಮವನ್ನು ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಗ್ರೂಪ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಸಿಕ್ಕಿಂ ಮಣಿಪಾಲ್ ಯೂನಿವರ್ಸಿಟಿ (ಎಸ್ಎಂಯು), ಮಣಿಪಾಲ್ ಯೂನಿವರ್ಸಿಟಿ ಜೈಪುರ್ (ಎಂಯುಜೆ) ಮತ್ತು ಅವುಗಳ ಸಂಬಂಧಿತ ಇನ್ಕ್ಯುಬೇಟರ್ ಗಳಾದ ಮಣಿಪಾಲ ಯುನಿವರ್ಸಲ್ ಟೆಕ್ನಾಲಜಿ ಬಿಸಿನೆಸ್ ಇನ್ಕ್ಯುಬೇಟರ್ (ಎಂಯುಟಿಬಿಐ), ಮಣಿಪಾಲ-ಕರ್ನಾಟಕ ಸರ್ಕಾರದ ಬಯೋಇನ್ಕ್ಯುಬೇಟರ್, ಅಟಲ್ ಇನ್ಕ್ಯುಬೇಷನ್ ಸೆಂಟರ್(ಎಐಸಿ)-ಎಂಯುಜೆ, ಮತ್ತು ಎಐಸಿ-ಎಸ್ಎಂಯು ಟಿಬಿಐಗಳು ಜಂಟಿಯಾಗಿ ಆಯೋಜಿಸಿದ್ದವು.